ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪಾದಯಾತ್ರೆ

7

ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪಾದಯಾತ್ರೆ

Published:
Updated:

ಹರಿಹರ: ದಿವಂಗತ ಪ್ರೊ.ಬಿ. ಕೃಷ್ಣಪ್ಪ ಅವರ ಹೋರಾಟದ ಫಲವಾಗಿ ದಲಿತರ ಧ್ವನಿಗೆ ಮಾನ್ಯತೆ ದೊರೆಯುತ್ತಿದೆ ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ, ನಗರದ ಹೊರವಲಯದಲ್ಲಿರುವ  ಪ್ರೊ.ಬಿ. ಕೃಷ್ಣಪ್ಪ ಅವರ ಸಮಾಧಿಯಿಂದ ಮುಖ್ಯಮಂತ್ರಿ ಅವರ ಮನೆವರೆಗೆ ಪಾದಯಾತ್ರೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷ್ಣಪ್ಪನವರ ಸಮಾಧಿ ಸ್ಥಳದ ಆವರಣದಲ್ಲಿ ಗ್ರಂಥಾಲಯದ ಅಗತ್ಯವಿದೆ. ಆ ಗ್ರಂಥಾಲಯದಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರ ಚಿಂತನೆ, ಹೋರಾಟದ ಹಾದಿಗೆ ಸಂಬಂಧಿಸಿದ ಪುಸ್ತಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಹೋರಾಟಗಳನ್ನು ಜೀವಂತವಾಗಿರಿಸಬೇಕು ಎಂದರು.ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಬಿ.ಆರ್. ಭಾಸ್ಕರ್ ಪ್ರಸಾದ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ವರ್ಗಕ್ಕೆ ಅನುಕೂಲವಾಗುವಂತೆ ಸಂವಿಧಾನದಲ್ಲಿ ನೀತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ, ಶೋಷಿತರಿಗೆ ಹಾಗೂ ದಲಿತರಿಗೆ ನ್ಯಾಯ ಸಿಕ್ಕಿಲ್ಲ. ದಲಿತರ ಸೌಲಭ್ಯಗಳನ್ನು ಇತರೆ ಜಾತಿಯವರು ಪಡೆಯುತ್ತಿದ್ದಾರೆ. ನ್ಯಾ.ಎ.ಜೆ. ಸದಾಶಿವ ಅವರು ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ವರದಿಯನ್ನು ನೀಡಿದ್ದಾರೆ. ಸರ್ಕಾರ ಈ ವರದಿಯನ್ನು ಯಥಾವತ್ತಾಗಿ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ಹರಿಹರದಿಂದ ಪ್ರಾರಂಭಗೊಳ್ಳುವ ಪಾದಯಾತ್ರೆ ದಾವಣಗೆರೆ, ಆನಗೋಡು, ಭರಮಸಾಗರ, ಚಿತ್ರದುರ್ಗ, ಹಿರಿಯೂರು, ಶಿರ, ಕಳ್ಳಬಳ್ಳ, ತುಮಕೂರು, ದಾಬಸ್‌ಪೇಟೆ, ನೆಲಮಂಗಲ, ಯಶವಂತಪುರ, ಪ್ರೀಡಂ ಪಾರ್ಕ್ ಮೂಲಕ ಮುಖ್ಯಮಂತ್ರಿ ಗೃಹ ಕಚೇರಿಗೆ ತಲುಪಿ ಮನವಿ ಸಲ್ಲಿಸಲಿದೆ ಎಂದರು.ಜಿ.ಒ. ಮೂರ್ತಿ, ಸಿ.ಸಿ. ಬಸವರಾಜಪ್ಪ, ಮುನಿರತ್ನ, ನಾರಾಯಣಸ್ವಾಮಿ, ಪರಮೇಶ್ವರಪ್ಪ, ಹನುಮಂತಪ್ಪ ಪೂಜಾರ್, ವಿ. ಮಂಜುನಾಥ, ಕೆ.ವಿ. ಗಂಗರಾಜ್, ಅನಿಲ್‌ಕುಮಾರ್, ನಾಗರಾಜ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry