ಭಾನುವಾರ, ಆಗಸ್ಟ್ 25, 2019
23 °C

ಆಯ್ಕೆಗೆ ವಿವಿಧ ಪಕ್ಷಗಳ ಕಸರತ್ತು ಆರಂಭ

Published:
Updated:

ಕೋಲಾರ: ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಚೌಡೇಶ್ವರಿ ಮತ್ತು ಉಪಾಧ್ಯಕ್ಷೆ ರತ್ನಮ್ಮ ತಮ್ಮ ಸ್ಥಾನಗಳಿಗೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಜಿ.ಪಂ.ನ ಎರಡನೇ ಅವಧಿಯ ಉಳಿದ 10 ತಿಂಗಳಿಗೆ ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕಸರತ್ತು ಕೂಡ ವಿವಿಧ ಪಕ್ಷಗಳಲ್ಲಿ ಶುರುವಾಗಿದೆ.ಅಧ್ಯಕ್ಷರು ರಾಜೀನಾಮೆಯು ಅಂಗೀಕಾರವಾಗಲು 15 ದಿನದ ಗಡುವಿದ್ದು, ಈ ಅವಧಿಯೊಳಗೆ ಹೊಸಬರ ಆಯ್ಕೆಯನ್ನೂ ಪಕ್ಷಗಳು ಅಂತಿಮಗೊಳಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಕಳೆದ ವರ್ಷ ಅ.5ರಂದು ನಡೆದ ಚುನಾವಣೆಯಲ್ಲಿ ಇಬ್ಬರು ಪಕ್ಷೇತರರು ಮತ್ತು ಒಬ್ಬ ಬಿಜೆಪಿ ಸದಸ್ಯೆಯ ಬೆಂಬಲ ಪಡೆದ ಜೆಡಿಎಸ್ ಮೇಲುಗೈ ಸಾಧಿಸಿತ್ತು. ಸಚಿವ ವರ್ತೂರು ಪ್ರಕಾಶ್ ಬಣವನ್ನು ತ್ಯಜಿಸಿ ಜೆಡಿಎಸ್‌ಗೆ ಬೆಂಬಲ ನೀಡಿ ವಕ್ಕಲೇರಿ ಕ್ಷೇತ್ರದ ಪಕ್ಷೇತರ ಸದಸ್ಯೆ ಚೌಡೇಶ್ವರಿ ಅಧ್ಯಕ್ಷೆಯಾಗಿ ಮತ್ತು ಜೆಡಿಎಸ್‌ನ ದಳಸನೂರು ಕ್ಷೇತ್ರದ ಸದಸ್ಯೆ ರತ್ನಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಜಿ.ಪಂ.ನಲ್ಲಿ ಒಟ್ಟು 12 ಸದಸ್ಯರ ಬಲವಿದ್ದ ಜೆಡಿಎಸ್‌ಗೆ ಪಕ್ಷೇತರರಾದ ಚಿಕ್ಕಅಂಕಂಡಹಳ್ಳಿ ಕ್ಷೇತ್ರದ ಎಂ.ಎಸ್.ಆನಂದ್, ವಕ್ಕಲೇರಿ ಕ್ಷೇತ್ರದ ಚೌಡೇಶ್ವರಿ ಮತ್ತು ಬಿಜೆಪಿಯ ಕಾಮಸಮುದ್ರಂ ಕ್ಷೇತ್ರದ ಸಿಮೌಲ್ ಬೆಂಬಲ ನೀಡಿದ ಪರಿಣಾಮ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರಿಗೂ ಗೆಲ್ಲಲು ಬೇಕಾದ 15 ಬಹುಮತ ನಿರಾಯಾಸವಾಗಿ ದೊರಕಿತ್ತು.

ವರ್ತೂರು ಬಣದಿಂದ ಅನಿರೀಕ್ಷಿತವಾಗಿ ಈಚೆ ಬಂದ ಚೌಡೇಶ್ವರಿ ಜೆಡಿಎಸ್ ಸೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ  ಆದ ಒಪ್ಪಂದದಂತೆ, ಚೌಡೇಶ್ವರಿ ಮತ್ತು ರತ್ನಮ್ಮ ತಮ್ಮ 10 ತಿಂಗಳ ಅಧಿಕಾರದ ಅವಧಿ ಮುಗಿದ ಬಳಿಕ ರಾಜೀನಾಮೆ ನೀಡಿದ್ದಾರೆ.

ಕಳೆದ ಬಾರಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಗೌನಿಪಲ್ಲಿ ಕ್ಷೇತ್ರದ ಆರ್.ನಾರಾಯಣಸ್ವಾಮಿ , ಮುಳಬಾಗಲಿನ ತಾಯಲೂರು ಕ್ಷೇತ್ರದ ಕೆ.ಆರ್.ಕಿಟ್ಟಪ್ಪ, ಕೋಲಾರ ತಾಲ್ಲೂಕಿನ ವೇಮಗಲ್ ಕ್ಷೇತ್ರದ ಆಶಾ ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರು ಜೆಡಿಎಸ್‌ನವರು.ಈಗ 13 ಸ್ಥಾನ ಹೊಂದಿರುವ ಜೆಡಿಎಸ್‌ಗೆ ಪಕ್ಷೇತರ ಸದಸ್ಯ ಆನಂದ್ ಮತ್ತು ಬಿಜೆಪಿ ಸಿಮೌಲ್ ಬೆಂಬಲವಿತ್ತು. ಆ ಸಂಖ್ಯಾಬಲ ಉಳಿಸಿಕೊಳ್ಳುವ ಸಲುವಾಗಿಯೇ ಈ ಇಬ್ಬರಿಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಅವಕಾಶವನ್ನು ಜೆಡಿಸ್ ಕಲ್ಪಿಸಿದೆ. 

ಈಗ ಬದಲಾಗಿರುವ ಸನ್ನಿವೇಶದಲ್ಲಿ ರಾಜಕಾರಣದ ಮೇಲಾಟ ಬಹುಮತದ ಸಂಖ್ಯೆಯನ್ನು ಏರುಪೇರು ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚೆ ಶುರುವಾಗಿದೆ.ಜೆಡಿಎಸ್, 13, ಬಿಜೆಪಿ 7, ಕಾಂಗ್ರೆಸ್ 5  ಹಾಗೂ ಪಕ್ಷೇತರರು 3 ಸದಸ್ಯರಿರುವ ಜಿ.ಪಂ.ನಲ್ಲಿ ಮತ್ತೆ ಜೆಡಿಎಸ್ ಮೇಲುಗೈ ಹೊಂದುವ ಸಾಧ್ಯತೆ ಸ್ಪಷ್ಟವಾಗಿದ್ದರೂ, ಬಿಜೆಪಿ-ಕಾಂಗ್ರೆಸ್ ಮತ್ತು ಪಕ್ಷೇತರರ ನಡುವೆ ಏರ್ಪಡಬಹುದಾದ ಒಪ್ಪಂದವು ಸನ್ನಿವೇಶವನ್ನು ಬದಲಿಸುವ ಸಾಧ್ಯತೆಯೂ ಇದೆ.

Post Comments (+)