ಶುಕ್ರವಾರ, ಮೇ 7, 2021
22 °C

ಆಯ್ಕೆಯಲ್ಲಿ ಯಡವಟ್ಟು: ಪತ್ನಿಯಿದ್ದರೂ `ವಿಧುರರು'

ವಿಶೇಷ ವರದಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಧಾನದಲ್ಲಿನ ದೋಷದಿಂದಾಗಿ 2010-11ನೇ ಸಾಲಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಫಲಾನುಭವಿಗಳ ಅನುದಾನವನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿರ್ಮಾಣ ನಿಗಮ ತಡೆ ಹಿಡಿದಿರುವುದು ಬೆಳಕಿಗೆ ಬಂದಿದ್ದು, ಬಡ ಫಲಾನುಭವಿಗಳು ಪರದಾಡುವಂತಾಗಿದೆ.ಹಿರೇಮನ್ನಾಪುರ, ನವಲಹಳ್ಳಿ, ಹಂಚಿನಾಳ ಮತ್ತು ನೀರಲೂಟಿ ಗ್ರಾಮಗಳಿಗೆ ಸೇರಿದ ಸುಮಾರು 33 ಜನ ಬಡ ಫಲಾನುಭವಿಗಳು ಮೂರು ವರ್ಷಗಳಿಂದಲೂ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೇ ತ್ರಿಶಂಕು ಸ್ಥಿತಿಗೊಳಗಾಗಿದ್ದಾರೆ. ಈ ಯೋಜನೆ ಕೇವಲ ಅರ್ಹ ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ. ಪುರುಷ ಫಲಾನುಭವಿಗಳ ಆಯ್ಕೆ ತೀರಾ ಅನಿವಾರ್ಯವಾಗಿದ್ದರೆ, ಅಂಥವರು ವಿಧುರರು (ಪತ್ನಿ ಮೃತಪಟ್ಟಿರಬೇಕು) ಅಥವಾ ಅಂಗವಿಕಲರಾಗಿರಬೇಕು.

ಆದರೆ ಹಿರೇಮನ್ನಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಿದ ತಪ್ಪಿಗೆ, ಆಯ್ಕೆಯಾದ 33 ಫಲಾನುಭವಿಗಳಲ್ಲಿ 30 ಪುರುಷ ಫಲಾನುಭವಿಗಳು ಪತ್ನಿಯರಿದ್ದರೂ ವಸತಿ ನಿಗಮಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ `ವಿಧುರ'ರಾಗಿದ್ದಾರೆ. ಇತರೆ ಕೆಲವು ಗ್ರಾಮ ಪಂಚಾಯ್ತಿಗಳು ಎಲ್ಲ ಅಂಗಗಳು ಸರಿ ಇರುವ ಪುರುಷ ಫಲಾನುಭವಿಗಳನ್ನು`ಅಂಗವಿಕಲ' ಕಾಲಂನಲ್ಲಿ ಸೇರಿಸಿವೆ.ಈ ಗೊಂದಲಗಳಿಂದಾಗಿ ವಸತಿ ನಿಗಮ 33 ಫಲಾನುಭವಿಗಳ ಹೆಸರುಗಳನ್ನು ಸ್ಥಗಿತಗೊಳಿಸಿ, ಅನುದಾನ ತಡೆಹಿಡಿದಿದೆ. ಆದರೆ ಕೆಲವರು ಕಷ್ಟಪಟ್ಟು ಹಣ ಸಂಗ್ರಹಿಸಿ ಬೇಸ್‌ಮೆಂಟ್‌ವರೆಗೆ ಮಾತ್ರ ಮನೆ ಕಟ್ಟಿದ್ದರೆ, ಇನ್ನೂ ಕೆಲವರು ಮನೆಗಳನ್ನು ಅರ್ಧಕ್ಕೆ ನಿಲ್ಲಿಸಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.`ಆರ್ಥಿಕವಾಗಿ ದುರ್ಬಲರಾಗಿರುವ ತಮಗೆ ಸ್ವಂತ ಖರ್ಚಿನಲ್ಲಿ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸರ್ಕಾರದ ಯೋಜನೆ ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದೆ' ಎಂದು ಹನುಮೇಶ ಹಾದಿಮನಿ, ಕಳಕಪ್ಪ ನರಸಾಪುರ, ಯಮನಪ್ಪ ಸುಬೇದಾರ ಮತ್ತಿತರ ಫಲಾನುಭವಿಗಳು ಅಳಲು ತೋಡಿಕೊಂಡರು.`ತಾಂತ್ರಿಕವಾಗಿ ಲೋಪವಾಗಿದೆ. ಅರ್ಹರಾಗಿದ್ದರೂ ಸ್ಥಗಿತಗೊಂಡಿರುವ ಪುರುಷ ಫಲಾನುಭವಿಗಳ ಹೆಸರುಗಳ ಬದಲಾಗಿ ಅವರ ಪತ್ನಿ ಅಥವಾ ತಾಯಿಯ ಹೆಸರಿಗೆ ಬದಲಾಯಿಸುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಮತ್ತೊಂದು ಪ್ರಸ್ತಾವನೆಯನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳುಹಿಸಲಾಗಿದೆ' ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಬುಜಾ ವಿವರಿಸಿದರು.ಈ ಹಿಂದೆ ಜಿಪಿಎಸ್ ತಂತ್ರಜ್ಞಾನ ಕಡ್ಡಾಯವಾಗಿರದ ಅವಧಿಯಲ್ಲಿ ಫೋಟೊ ತೆಗೆದು ಪ್ರಗತಿ ವರದಿ ನೀಡಿದ್ದರಿಂದ ಮೂವರಿಗೆ ಮೊದಲ ಕಂತು (ರೂ. 12,500) ಬಿಡುಗಡೆಯಾಗಿತ್ತು. ನಂತರ ಅವರ ಹೆಸರುಗಳೂ ಸ್ಥಗಿತಗೊಂಡಿವೆ ಎಂದು ಪಿಡಿಒ ಹೇಳಿದರು. `ವಸತಿ ಯೋಜನೆ ತಾಲ್ಲೂಕಿನ ನೋಡಲ್ ಅಧಿಕಾರಿ ಕಲ್ಲೇಶ ಗುರಿಕಾರ, ನಿಯಮಕ್ಕೆ ವಿರುದ್ಧವಾಗಿ ಪುರುಷರು ಮತ್ತು ವಿಧುರರು ಎಂದು ಹೆಸರಿಸಿದ ಪಂಚಾಯಿತಿ ತಪ್ಪಿನಿಂದಾಗಿ ನಿಗಮ ಹೆಸರುಗಳನ್ನು ಬ್ಲಾಕ್ ಮಾಡಿದೆ. ಹೆಸರು ಬದಲಾವಣೆ ಮಾಡಿ ಅನುದಾನ ಬಿಡುಗಡೆಗೆ ಶಿಫಾರಸು ಪತ್ರ ಬರೆಯಲಾಗಿದೆ' ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.