ಸೋಮವಾರ, ಜೂನ್ 21, 2021
30 °C

ಆಯ್ಕೆ ಪ್ರಕ್ರಿಯೆ ಅಸಂಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಪಾಲ  ಶೋಧನಾ ಸಮಿತಿಯ ಅಧ್ಯಕ್ಷತೆ ವಹಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್ ನಿರಾಕರಿಸಿದ್ದಾರೆ.  ಕಳೆದ ವಾರವಷ್ಟೇ  ಇದೇ ಸಮಿತಿಯ ಸದಸ್ಯ­ರಾಗಲು  ಸುಪ್ರೀಂ ಕೋರ್ಟ್ ಹಿರಿಯ ವಕೀಲ ಫಾಲಿ ನಾರಿಮನ್ ನಿರಾಕರಿ­ಸಿದ್ದರು. ಹೆಚ್ಚಿನ ಸಾಮರ್ಥ್ಯ, ಸ್ವತಂತ್ರ ಮನೋಭಾವ ಹಾಗೂ ದಿಟ್ಟತನ­ವಿರುವ­ವರನ್ನು ಲೋಕಪಾಲ ಸದಸ್ಯರಾಗಿ ಆಯ್ಕೆ ಮಾಡುವುದಕ್ಕೆ  ಈ ಆಯ್ಕೆ ಪ್ರಕ್ರಿಯೆಯಿಂದ ಸಾಧ್ಯವಿಲ್ಲ ಎಂಬುದು  ನಿರಾಕರಣೆಗೆ ಕಾರಣ ಎಂದು ನಾರಿಮನ್ ಹೇಳಿದ್ದರು. ಈಗ, ನಿವೃತ್ತ ನ್ಯಾಯಮೂರ್ತಿ ಥಾಮಸ್ ಅವರೂ ಇದೇ ಕಾರಣ ನೀಡಿ ಶೋಧನಾ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರಾಕರಿಸಿ ಹೊರನಡೆದಿದ್ದಾರೆ.ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ  ನೀಡಿದ ಹೆಸರುಗಳ ಪಟ್ಟಿಯಿಂದ ಕೆಲವರನ್ನು ಆಯ್ಕೆ ಮಾಡಿ  ‘ಆಯ್ಕೆ ಸಮಿತಿ’ ಮುಂದಿಡುವುದಷ್ಟೇ ಎಂಟು ಸದಸ್ಯರ ‘ಶೋಧನಾ ಸಮಿತಿ’ಯ ಕೆಲಸ. ಅತ್ಯಂತ ಅರ್ಹ ವ್ಯಕ್ತಿಗಳನ್ನು  ಸ್ವತಂತ್ರವಾಗಿ ಗುರುತಿಸಿ ಪಟ್ಟಿಗೆ ಸೇರಿಸುವ ಸ್ವಾತಂತ್ರ್ಯ  ಶೋಧನಾ ಸಮಿತಿಗೆ ಇಲ್ಲ ಎಂಬ ವಿಚಾರ ತೀವ್ರ ಆಕ್ಷೇಪಗಳಿಗೆ  ಗುರಿಯಾಗುತ್ತಿದೆ. ಇಂತಹ ಸೀಮಿತ ಅಧಿಕಾರದ  ಶೋಧನಾ­ಸಮಿತಿಯ ಅಗತ್ಯವಾದರೂ ಏನು? ಎಂಬಂತಹ ನಿವೃತ್ತ ನ್ಯಾಯಮೂರ್ತಿ ಥಾಮಸ್ ಅವರ ಪ್ರಶ್ನೆ ಪ್ರಸ್ತುತವಾದದ್ದು.ಲೋಕಪಾಲ ಆಯ್ಕೆ ಪ್ರಕ್ರಿಯೆ ವಿಸ್ತೃತ ಹಾಗೂ ಸರ್ವಸಮ್ಮತ ಆಗಿರಬೇಕು ಎಂಬುದು ಆಶಯ.  ಆದರೆ ಈಗಿನ ನಿಯಮಾವಳಿಗಳು ಈ ಆಶಯಕ್ಕೆ ಧಕ್ಕೆ ತರುವಂತಿವೆ. ನಿಯಮಾ­ವಳಿಗಳ ಪ್ರಕಾರ, ಲೋಕಪಾಲ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಹಾಕಿಕೊಳ್ಳಲೂ ಅವಕಾಶ ಕಲ್ಪಿಸಿ ಅರ್ಹತೆಗಳನ್ನು ನಿಗದಿ ಪಡಿಸಲಾಗಿದೆ.  ಈ ವಿಚಾರಕ್ಕೆ ಕೆಲವು ವಲಯಗಳಿಂದ ಟೀಕೆಗಳು ವ್ಯಕ್ತವಾಗಿವೆ. ಆದರೆ  ಅರ್ಜಿ ಹಾಕಿಕೊಳ್ಳು­ವುದು ತಪ್ಪು ಎಂದೇನೂ ಭಾವಿಸಬೇಕಿಲ್ಲ. ಆದರೆ ಅರ್ಜಿ ಹಾಕಿಕೊಳ್ಳದಿರುವ­ವರನ್ನು ಶೋಧನಾ ಸಮಿತಿ ಪರಿಗಣಿಸದೇ ಹೋದಲ್ಲಿ ಅದು ತಪ್ಪಾಗುತ್ತದೆ.  ಅಂತಹ ಆಯ್ಕೆ ಮಿತಿಯುಳ್ಳದ್ದಾಗಿರುತ್ತದೆ ಎಂಬುದು ಸ್ಪಷ್ಟ. ಈ ಕುರಿತಂತೆ ನಿಯಮಗಳು ಬದಲಾಗುವುದು ಅಗತ್ಯ.ಕಳೆದ ಡಿಸೆಂಬರ್‌ನಲ್ಲಿ ಸಂಸತ್ ಅಂಗೀಕಾರ ಪಡೆದ  2013ರ  ಲೋಕ­ಪಾಲ  ಮತ್ತು ಲೋಕಾಯುಕ್ತ ಕಾಯಿದೆ ಅನ್ವಯ ಕೇಂದ್ರದಲ್ಲಿ ಲೋಕಪಾಲ ರಚನೆಯಾಗಬೇಕಿದೆ. ಲೋಕಪಾಲ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ  ಮಾಡಲು ಇರುವ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ಪ್ರತಿಪಕ್ಷದ ನಾಯಕರು, ಲೋಕಸಭಾ ಸ್ಪೀಕರ್ ಸೇರಿದಂತೆ ಐವರು ಸದಸ್ಯ­ರಿದ್ದಾರೆ. ಈ ಆಯ್ಕೆ ಸಮಿತಿ, ಶೋಧನಾ ಸಮಿತಿ ಶಿಫಾರಸು ಮಾಡಿದ ಹೆಸರು­ಗಳನ್ನು ಒಪ್ಪಬೇಕೆಂದೇನೂ ಇಲ್ಲ ಎಂಬ  ನಿಯಮವೂ ಇದೆ. ಹೀಗಿರುವಾಗ ಈ ಇಡೀ ಕಸರತ್ತು ಅಸಂಗತ ಹಾಗೂ ಅರ್ಥಹೀನ ಎಂಬಂತಹ  ವಾದ ಸಮಂಜಸ. ಶೋಧನಾ ಸಮಿತಿಯ ಅಗತ್ಯವಾದರೂ ಏಕೆ ಎಂಬಂತಹ ಪ್ರಶ್ನೆಗಳು ಸಹಜ. ಅದನ್ನೇ ನ್ಯಾ. ಥಾಮಸ್ ಕೇಳಿದ್ದಾರೆ. ಹೀಗಾಗಿ ಈ ದೋಷಗಳನ್ನು ಸರಿಪಡಿಸುವುದು ಅಗತ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.