ಶನಿವಾರ, ಜನವರಿ 18, 2020
20 °C
ದೆಹಲಿ: ಎಎಪಿಗೆ ಕಾಂಗ್ರೆಸ್‌ ಬೆಂಬಲ

ಆರಂಭದಲ್ಲೇ ಅಪಸ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರಂಭದಲ್ಲೇ ಅಪಸ್ವರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ರಚನೆಯಾಗಲಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರಕ್ಕೆ ಆರಂಭದಲ್ಲೇ ಅಪಸ್ವರ ಎದುರಾಗಿದೆ. ‘ಎಎಪಿ’ಗೆ ಬೆಂಬಲ ನೀಡುವ ಬಗ್ಗೆ ಕಾಂಗ್ರೆಸ್‌ನ ಒಂದು ವರ್ಗದಲ್ಲಿ ತೀವ್ರ ಅತೃಪ್ತಿ ಇದ್ದರೆ, ಇನ್ನೊಂದೆಡೆ  ಎಎಪಿಯಲ್ಲಿಯೂ ಸಚಿವ ಸ್ಥಾನಕ್ಕೆ ಸಂಬಂಧಿಸಿ ಅಸಮಾಧಾನ ಹೊಗೆಯಾಡತೊಡಗಿದೆ. 

ಸಚಿವ ಸ್ಥಾನಕ್ಕೆ ಪಟ್ಟು: ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಮಂಗಳವಾರ ನಡೆದ ಸಭೆಯಿಂದ ಎಎಪಿ ಶಾಸಕ ಮತ್ತು ಮಂತ್ರಿ ಸ್ಥಾನ ಆಕಾಂಕ್ಷಿ ವಿನೋದ್‌ ಕುಮಾರ್‌ ಬಿನ್ನಿ ಹೊರ ನಡೆದಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂಬುದು ತಿಳಿದು ಅಸಮಾಧಾನ­ಗೊಂಡ ಬಿನ್ನಿ ಸಭೆಯಿಂದ ಹೊರ ನಡೆದರು.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಿಂದಿನ ಶೀಲಾ ದೀಕ್ಷಿತ್‌ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಎ.ಕೆ. ವಾಲಿಯಾ ಅವರನ್ನು ಬಿನ್ನಿ ಸೋಲಿ­ಸಿದ್ದರು. ಅದಕ್ಕೂ ಮೊದಲು ಅವರು ಕಾಂಗ್ರೆಸ್‌ ಪಕ್ಷದಿಂದ ಕೌನ್ಸಿಲರ್‌ ಆಗಿದ್ದರು. ಸಭೆಯಿಂದ ಹೊರಬಂದ ಬಿನ್ನಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ­ನಾ­ಡಲಿಲ್ಲ. ಬುಧವಾರ ಪತ್ರಿಕಾಗೋಷ್ಠಿ ನಡೆಸಿ ವಿವರಗಳನ್ನು ಬಹಿರಂಗಪ­ಡಿಸುತ್ತೇನೆ. ಅದು ಮುಜುಗರಕಾರಿ­ಯಾಗಿರುತ್ತದೆ ಎಂದು ಮಾತ್ರ ಅವರು ಹೇಳಿದರು.

ಗಿರೀಶ್‌ ಸೋನಿ ಅವರ ಹೆಸರನ್ನು ಸಚಿವರ ಪಟ್ಟಿಯಲ್ಲಿ ಸೇರಿಸುವುದಕ್ಕಾಗಿ ಬಿನ್ನಿ ಹೆಸರು ಕೈಬಿಡಲಾಯಿತು. ಇದು ಅವರ ಅತೃಪ್ತಿಗೆ ಕಾರಣ ಎಂದು ಎಎಪಿ ಮೂಲಗಳು ತಿಳಿಸಿವೆ.ಅವರ ಮನವೊಲಿಕೆ ಪ್ರಯತ್ನ ಆರಂಭವಾಗಿದ್ದು, ವಿಧಾನ ಸಭಾಧ್ಯಕ್ಷ ಹುದ್ದೆಯನ್ನು ಅವರಿಗೆ ನೀಡಲಾಗು­ವುದು ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ನಲ್ಲಿ ಒಡಕು: ಎಎಪಿಗೆ ಕಾಂಗ್ರೆಸ್‌ ಬೆಂಬಲದ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ. ಸರ್ಕಾರ ರಚನೆಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಒಂದು ವರ್ಗದಲ್ಲಿ ಅತೃಪ್ತಿ ಮನೆ ಮಾಡಿದೆ. ಪಕ್ಷದ ನಿರ್ಧಾರವನ್ನು ವಿರೋಧಿಸಿ ಕೆಲವರು ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆಯನ್ನೂ ನಡೆಸಿದ್ದಾರೆ.ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಿಕೆ ಸರಿಯಲ್ಲ. ಬದಲಿಗೆ ಪ್ರತಿಪಕ್ಷವಾಗಿ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಿತ್ತು ಎಂಬ ನಿಲುವು ಕಾಂಗ್ರೆಸ್‌ನ ಒಂದು ವರ್ಗದಲ್ಲಿ ಇದೆ ಎಂಬುದನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ದ್ವಿವೇದಿ ಒಪ್ಪಿಕೊಂಡಿದ್ದಾರೆ. ಕೇಜ್ರಿವಾಲ್‌ ಸರ್ಕಾರ ರಚನೆಗೆ ನಿರ್ಧರಿಸಿದಾಗಿನಿಂದಲೇ ‘ಬೆಂಬಲ ಬೇಷರತ್‌ ಅಲ್ಲ’ ಎಂದು ಕಾಂಗ್ರೆಸ್‌ ಹೇಳುತ್ತಿದೆ. ‘ಬೆಂಬಲ ನೀಡಿಕೆಗೆ ಕಾಂಗ್ರೆಸ್‌ನ ಕೆಲವರ ವಿರೋಧ ಇದ್ದರೂ ಈಗಾಗಲೇ ಬೆಂಬಲ ನೀಡಿಕೆಯ ಪ್ರಸ್ತಾವ ಮುಂದಿಡ­ಲಾಗಿದೆ.   ಈ ಮಾತನ್ನೂ ನಾವು ಉಳಿಸಿ­ಕೊ­ಳ್ಳಬೇಕಿದೆ. ಹೀಗಾಗಿ ಮಧ್ಯಮ ಮಾರ್ಗವೊಂದನ್ನು ನಾವು ಹುಡುಕಿ­ಕೊಳ್ಳಬೇಕು’ ಎಂದು ದ್ವಿವೇದಿ ಹೇಳಿದ್ದಾರೆ. ನಂತರದ ಹಂತದಲ್ಲಿ ಕಾಂಗ್ರೆಸ್‌ ಬೆಂಬಲ ಹಿಂತೆಗೆದು­ಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.

ಅತೃಪ್ತಿಗೆ ಕಾರಣ: ಪ್ರತಿ ದಿನವೂ ಕಾಂಗ್ರೆಸ್‌ ವಿರುದ್ಧ ಹೇಳಿಕೆ ನೀಡುತ್ತಿರುವ ಮತ್ತು ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ, ತನಿಖೆ ನಡೆಸುವ ಬೆದರಿಕೆ ಒಡ್ಡುವ ಎಎಪಿ ಕ್ರಮ ಜನರ ದೃಷ್ಟಿಯಲ್ಲಿ ಕಾಂಗ್ರೆಸನ್ನು ಕೀಳಾಗಿಸುತ್ತದೆ ಎಂದು ಬೆಂಬಲ ನೀಡಿಕೆ  ವಿರೋಧಿಸುತ್ತಿರುವ ವರ್ಗ ಹೇಳುತ್ತಿದೆ.

ಕೇಜ್ರಿವಾಲ್‌ ಸರ್ಕಾರ ರಚನೆಗೆ ಮುಂದಾಗುವುದಿಲ್ಲ ಎಂಬುದು ಎಎಪಿಗೆ ಬೆಂಬಲ ಘೋಷಿಸುವಾಗ ಕಾಂಗ್ರೆಸ್‌ ಮುಖಂಡರ ಯೋಚನೆಯಾಗಿತ್ತು. ಈಗ ಅವರು ಮೋಸ ಹೋದಂತಾಗಿದೆ ಎಂಬುದು ಈ ವರ್ಗದ ಅಭಿಪ್ರಾಯ­ವಾಗಿದೆ. ಜತೆಗೆ ಸರ್ಕಾರದ ಮೇಲೆ ನಿಯಂತ್ರಣ ಇರುವಂತೆ ಎಎಪಿಗೆ ಷರತ್ತು ಹಾಕಬೇಕಿತ್ತು ಎಂಬ ಅಭಿಪ್ರಾಯವನ್ನೂ ಅವರು ಹೊಂದಿದ್ದಾರೆ.ಸಂಪುಟ ಪಟ್ಟಿ ಅಂತಿಮ

ದೆಹಲಿಯಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಪಕ್ಷದ ಬಾಹ್ಯ ಬೆಂಬಲ ಪಡೆಯುವ ನಿರ್ಧಾರವನ್ನು ಸಮರ್ಥಿ­ಸುವ ವಿಡಿಯೊ ತುಣುಕನ್ನು ಆಮ್‌ ಆದ್ಮಿ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ. ಜತೆಗೆ,  ಸಂಪುಟ ಸದಸ್ಯರ ಪಟ್ಟಿಯನ್ನು ಕೇಜ್ರಿವಾಲ್‌ ಅಂತಿಮ­ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಜ್ರಿವಾಲ್‌ ನಂಬಿಗಸ್ತ ಸಹವರ್ತಿ ಮನೀಶ್‌ ಸಿಸೋಡಿಯ, ರಾಖಿ ಬಿರ್ಲಾ, ಸೋಮನಾಥ್‌ ಭಾರ್ತಿ, ಸೌರಭ್‌ ಭಾರದ್ವಾಜ್‌, ಗಿರೀಶ್‌ ಸೋನಿ ಮತ್ತು ಸತೇಂದ್ರ ಜೈನ್‌ ಸಂಪುಟ ಸೇರಲಿದ್ದಾರೆ. ಕೇಜ್ರಿವಾಲ್‌ ಜತೆಗಿನ ಮಾತುಕತೆ ನಂತರ ಸೌರಭ್‌ ಭಾರದ್ವಾಜ್‌ ಅವರೇ ಈ ಮಾಹಿತಿ ತಿಳಿಸಿದ್ದಾರೆ.

ಆದರೆ, ಸಂಪುಟ ಸದಸ್ಯರ ಅಂತಿಮ ಪಟ್ಟಿ ಸಿದ್ಧಪಡಿಸುವಾಗ ಬದಲಾವಣೆ ಆಗುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಂಗಲೆ ಬೇಡ: ಭದ್ರತೆ ಪಡೆದುಕೊಳ್ಳಲು ಈಗಾಗಲೇ ನಿರಾಕರಿಸಿರುವ ಕೇಜ್ರಿವಾಲ್‌, ಸರ್ಕಾರಿ ಬಂಗಲೆಯನ್ನೂ ತಿರಸ್ಕರಿಸಿದ್ದಾರೆ. ದೆಹಲಿಯಲ್ಲಿ ವಿಐಪಿ ಸಂಸ್ಕೃತಿ ಕೊನೆಗೊಳಿಸುವ ಪ್ರಯತ್ನದ ಭಾಗವಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ದೆಹಲಿ ವಿಧಾನಸಭಾ ಕಾರ್ಯಾಲಯದ ಸಮೀಪದಲ್ಲಿರುವ ಯಾವುದಾದರೂ ಫ್ಲ್ಯಾಟ್‌ನಲ್ಲಿ ಅವರು ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಕೇಜ್ರಿವಾಲ್‌ ಸರ್ಕಾರದಲ್ಲಿ ಸಚಿವರಾಗುವವರು ಕೂಡ ತಮ್ಮ ನಾಯಕನ ಮಾದರಿ­ಯಲ್ಲಿಯೇ ಬಂಗಲೆ ನಿರಾಕರಿಸಿ ಸರ್ಕಾರಿ ಫ್ಲ್ಯಾಟ್‌ಗಳಲ್ಲಿ ವಾಸಿಸಬಹುದು ಎನ್ನಲಾಗಿದೆ.

ರಾಜೇಂದ್ರ ಕುಮಾರ್‌ ಕಾರ್ಯದರ್ಶಿ: ಮುಖ್ಯಮಂತ್ರಿಯಾದ ನಂತರ ಅರವಿಂದ್‌ ಕೇಜ್ರಿವಾಲ್‌ ಅವರ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ರಾಜೇಂದ್ರ ಕುಮಾರ್‌ ನೇಮಕವಾಗಬಹುದು ಎಂಬ ಸುಳಿವು ದೊರೆತಿದೆ.

ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿರುವ ಕುಮಾರ್‌, ಅರವಿಂದ್‌ ಕೇಜ್ರಿವಾಲ್‌ ಅವರಂತೆಯೇ ಖರಗ್‌ಪುರ ಐಐಟಿಯ ಹಳೆ ವಿದ್ಯಾರ್ಥಿ. ಕೇಜ್ರಿವಾಲ್‌ ನಿವಾಸಕ್ಕೆ ಮಂಗಳವಾರ ಆಗಮಿಸಿದ್ದ ಕುಮಾರ್‌, ಈ ಸಂಬಂಧ ಚರ್ಚೆ ನಡೆಸಿದರು.ಮುಂದಿನ ನೆಲೆ ರಾಜಸ್ತಾನ: ದೆಹಲಿಯಲ್ಲಿ ನೆಲೆ ಕಂಡುಕೊಂಡ ಬಳಿಕ ಆಮ್‌ ಆದ್ಮಿ ಪಕ್ಷ, ಬಿಜೆಪಿ ಆಳ್ವಿಕೆಯ ರಾಜಸ್ತಾನದಲ್ಲಿ ತನ್ನ ರೆಕ್ಕೆ ಬಿಚ್ಚಲು ಹವಣಿಸುತ್ತಿದೆ. ರಾಜಸ್ತಾನದ ಎಲ್ಲ 25 ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಪಕ್ಷ ಸಿದ್ಧತೆ ನಡೆಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಮಿತಿಗಳನ್ನು ರಚಿಸಲಾಗಿದೆ. ಸ್ವಚ್ಛ ಮತ್ತು ಉತ್ತಮ ಹಿನ್ನೆಲೆಯ ಅಭ್ಯರ್ಥಿಗಳ ಹುಡುಕಾಟ ಆರಂಭ­ವಾಗಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಅಶೋಕ್‌ ಜೈನ್‌ ತಿಳಿಸಿದ್ದಾರೆ.

ಸಮರ್ಥನೆಗೆ ವಿಡಿಯೊ:  ಟ್ವಿಟರ್‌ನಲ್ಲಿ ಆಮ್‌ ಆದ್ಮಿ ಪಕ್ಷ ಪ್ರಕಟಿಸಿರುವ ವಿಡಿಯೊ ‘ನಾವು ಸರ್ಕಾರ ರಚನೆ ಮಾಡಬೇಕೆ?’ ಎಂಬ ಪ್ರಶ್ನೆ­ಯೊಂದಿಗೆ ಆರಂಭವಾಗುತ್ತದೆ. ದೆಹಲಿಯ 26 ಲಕ್ಷ ಜನರಿಗೆ ನಾವು ಈ ಪ್ರಶ್ನೆಯನ್ನು ಕೇಳಿದ್ದೇವೆ ಎಂದು ಪಕ್ಷ ವಿಡಿಯೊದಲ್ಲಿ ಹೇಳುತ್ತದೆ. ‘ಬಹುಸಂಖ್ಯೆಯ ಜನರು ನಾವು ಸರ್ಕಾರ ರಚನೆ ಮಾಡಬೇಕು ಮತ್ತು ಕೆಲಸ ಮಾಡಿ ತೋರಿಸಬೇಕು ಎಂದು ಹೇಳಿದ್ದಾರೆ. ಎಷ್ಟು ಕಾಲ ಸಾಧ್ಯವೋ ಅಷ್ಟು ಕಾಲ ಸರ್ಕಾರ ನಡೆಯಲಿ ಎಂದು ಅವರು ಹೇಳಿದ್ದಾರೆ. ಜನರ ನಿರ್ಧಾರಕ್ಕೆ ನಾವು ತಲೆ ಬಾಗುತ್ತೇವೆ’ ಎಂದು ವಿಡಿಯೊದಲ್ಲಿ ಅರವಿಂದ್‌ ಕೇಜ್ರಿವಾಲ್‌ ಹೇಳುತ್ತಾರೆ. ಈ ವಿಡಿಯೊ ಸುಮಾರು ಎರಡು ನಿಮಿಷ ಅವಧಿಯದ್ದಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಭ್ರಷ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಾ­ಗುವುದು ಎಂಬುದನ್ನು ಪುನರುಚ್ಚರಿಸ­ಲಾಗಿದೆ. ಪಕ್ಷದ ಎಲ್ಲ 18 ಭರವಸೆಗಳನ್ನು ಈಡೇರಿಸಲಾಗುವುದು ಎಂಬ ಭರವಸೆಯನ್ನೂ ನೀಡಲಾಗಿದೆ. ‘ನಾವು ಬಿಜೆಪಿ ಅಥವಾ ಕಾಂಗ್ರೆಸ್‌ ಬಗ್ಗೆ ಯೋಚಿಸುತ್ತಿಲ್ಲ. ನಾವು ಯೋಚಿಸು­ತ್ತಿರುವುದು ಸಾಮಾನ್ಯ ಜನರ ಬಗ್ಗೆ ಮಾತ್ರ. ಜನರ ಸಮಸ್ಯೆಗಳನ್ನು ನಿವಾರಿ­ಸುವುದಕ್ಕೆ ನಮ್ಮ ಆದ್ಯತೆ’ ಎನ್ನುತ್ತಾ ವಿಡಿಯೊ ಕೊನೆಯಾಗುತ್ತದೆ. ಈ ವಿಡಿಯೊ ಡಿಸೆಂಬರ್‌ 22ರಿಂದಲೇ ಯೂಟ್ಯೂಬ್‌ನಲ್ಲಿ ಲಭ್ಯ ಇದೆ.

ಪ್ರತಿಕ್ರಿಯಿಸಿ (+)