ಮಂಗಳವಾರ, ಮೇ 11, 2021
20 °C

ಆರಕ್ಕೇರಿದ `ಯಾರಿಗುಂಟು...'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಂಗಳೆಯರ ಮನಸೂರೆಗೊಂಡ ಗೇಮ್‌ಶೋ ಜೀಟಿವಿಯ `ಯಾರಿಗುಂಟು ಯಾರಿಗಿಲ್ಲ' ಇದೀಗ ಆರನೇ ಹೆಜ್ಜೆ ಇಡುತ್ತಿದೆ. ಈ ಬಾರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವವರು `ಚಿ.ಸೌ. ಸಾವಿತ್ರಿ' ಖ್ಯಾತಿಯ ನಟಿ ಗೌತಮಿ. ಜೂನ್ 8ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ `ಯಾರಿಗುಂಟು' ಪ್ರಸಾರವಾಗಲಿದೆ. ಒಟ್ಟು ಹದಿಮೂರು ವಾರಗಳ ಕಾಲ 26 ಕಂತುಗಳಲ್ಲಿ ಕಾರ್ಯಕ್ರಮ ಬಿತ್ತರಿಸಲು ವಾಹಿನಿ ನಿರ್ಧರಿಸಿದೆ.2007ರಲ್ಲಿ ಆರಂಭವಾದ ಈ ಶೋನಲ್ಲಿ ಮೊದಲು ನಿರೂಪಕಿಯಾಗಿ ಕಾಣಿಸಿಕೊಂಡದ್ದು ನಟಿ ಮಾಳವಿಕಾ. ನಂತರ ಆರ್‌ಜೆ ಅವಿನಾಶ್ ಅಡಿಯಿಟ್ಟರು. ಮೂರನೇ ಪರ್ವದಲ್ಲಿ `ನೆನಪಿರಲಿ' ಖ್ಯಾತಿಯ ವರ್ಷ ಇದ್ದರು. ನಾಲ್ಕು ಮತ್ತು ಐದನೇ ಆವೃತ್ತಿಗೆ ಶ್ವೇತಾ ಚೆಂಗಪ್ಪ ಬಂದರು. ಶ್ವೇತಾ ಅವರಿದ್ದ ಕಾಲದಲ್ಲಿ ಕಾರ್ಯಕ್ರಮದ ಟಿಆರ್‌ಪಿ ದುಪ್ಪಟ್ಟಾಯಿತಂತೆ. ಅದೇ ಆರನೇ ಪರ್ವವನ್ನು ಆರಂಭಿಸಲು ಕಾರಣವಂತೆ.ಜೀ ಕನ್ನಡದ ಧಾರಾವಾಹಿಯೇತರ ಕಾರ್ಯಕ್ರಮಗಳ ಮುಖ್ಯಸ್ಥ ಬಾಲರಾಜ ನಾಯ್ಡು ಅವರ ಪ್ರಕಾರ ಇದರಲ್ಲಿ ನಾಲ್ಕು ಸುತ್ತುಗಳಿರುತ್ತವೆ. ಎರಡರಲ್ಲಿ ಹೆಂಗಳೆಯರ ಬುದ್ಧಿಮತ್ತೆಯನ್ನು ಪರೀಕ್ಷಿಸಲಾಗುತ್ತದೆ. ಉಳಿದವು ಆಟಕ್ಕೆ ಸಂಬಂಧಿಸಿದವು. ಸುತ್ತುಗಳ ಹೆಸರು ಹಾಗೇ ಇದ್ದರೂ ಆಟಗಳಲ್ಲಿ ಬದಲಾವಣೆ ಮಾಡಲಾಗಿದೆ. ಆರನೇ ಸೀಸನ್‌ಗೆಂದು ಬಹುಮಾನದ ಮೊತ್ತವಾಗಿ 20 ಲಕ್ಷ ರೂಪಾಯಿ ತೆಗೆದಿರಿಸಲಾಗಿದೆ.ಸುದ್ದಿಗೋಷ್ಠಿಗೆ ತಡವಾಗಿ ಬಂದ ಗೌತಮಿ ಆಟದ ವಿವರಗಳನ್ನು ಚುರುಕಾಗಿ ನೀಡಿದರು. ಕಾರ್ಯಕ್ರಮದ ಆರು ಸಂಚಿಕೆಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ. ಸಾಮಾನ್ಯ ಜ್ಞಾನ ವಿಭಾಗದಲ್ಲಿ ವಾಹಿನಿ ಸಮೀಕ್ಷೆ ನಡೆಸಿದ ಉತ್ತರಗಳನ್ನು ನೀಡಿದರೆ ಬಹುಮಾನ ಸಿಗುತ್ತದೆ. ಎರಡನೇ ಸುತ್ತಿನ ಹೆಸರು ಲಕ್ ಲೆಕ್ಕಾಚಾರ. `ಲಕ್ಕಿ ಲಕ್ಕಮ್ಮ' ಇಲ್ಲಿ ಬಹುಮಾನ ನೀಡುತ್ತಾಳೆ.`ಬಿಡ್ ಮಾಡಿ ದುಡ್ ಮಾಡಿ' ಮೂರನೇ ಸುತ್ತು. ಎಲ್ಲಕ್ಕಿಂತ ಹೆಚ್ಚು ಮಜಾ ಇರುವುದು ನಾಲ್ಕನೇ ಸುತ್ತಿನಲ್ಲಿ. ಎಷ್ಟೇ ಹಣ ಗಳಿಸಿದರೂ ಇಲ್ಲಿ ದುಪ್ಪಟ್ಟು ಮಾಡಿಕೊಳ್ಳುವ ಅಥವಾ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವಂತೆ. ಇದೆಲ್ಲದರ ಜೊತೆಗೆ ಭಾಗವಹಿಸುವವರ `ಕಾಲೆಳೆಯುವುದು', `ಬೀಳಿಸುವುದು' ಇದ್ದೇ ಇರುತ್ತದೆ ಎನ್ನಲು ಗೌತಮಿ ಮರೆಯಲಿಲ್ಲ. ಸಂಪೂರ್ಣ ಒಂದು ಗಂಟೆ ಕಾಲ ಮೂಡಿಬರುತ್ತಿರುವ ಈ ಕಾರ್ಯಕ್ರಮದ ನಿರ್ದೇಶಕರು ರಾಜು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.