ಆರಕ್ಷಕನ ರಕ್ಷಕರು...

7

ಆರಕ್ಷಕನ ರಕ್ಷಕರು...

Published:
Updated:
ಆರಕ್ಷಕನ ರಕ್ಷಕರು...

`ಆರಕ್ಷಕ~ ಬಿಡುಗಡೆಯಾಗಿ ಒಂದು ವಾರದ ಬಳಿಕ ಚಿತ್ರದ ನಿರ್ದೇಶಕ ಪಿ.ವಾಸು ಅದರ ಕಥೆ ಹೇಳತೊಡಗಿದರು. ಕೆಲವು ಗೊಂದಲಗಳನ್ನು ನಿವಾರಿಸುವ ಯತ್ನ ಅವರದಾಗಿತ್ತು.ಚಿತ್ರದ ಕಥೆಗಾಗಿ ಸಲಹೆ ಪಡೆದ ಹೆಸರಾಂತ ಮನೋವೈದ್ಯರೊಬ್ಬರನ್ನು ಉಲ್ಲೇಖಿಸಿದರು. ಇಡೀ ಚಿತ್ರವನ್ನು `ಸೈಕೋ ಡ್ರಾಮ~ ಎಂದು ಕರೆದರು.ಹಿಂದಿನ ನಿಮ್ಮದೇ ಚಿತ್ರಗಳ ಹ್ಯಾಂಗೋವರ್‌ನಲ್ಲಿ ಇದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಯನ್ನು ವಾಸು ತಳ್ಳಿಹಾಕಿದರು. ಅವುಗಳ ಪ್ರಭಾವ ಇರಬಹುದು, ಆದರದು ಹ್ಯಾಂಗೋವರ್ ಅಲ್ಲ ಎನ್ನುವುದು ಅವರ ಸಮಜಾಯಿಷಿ. ಚಿತ್ರವನ್ನು ಬೇರೆ ಭಾಷೆಗಳಲ್ಲಿ ಕೂಡ ತರುವ ಯತ್ನದಲ್ಲಿದ್ದಾರಂತೆ ಅವರು. ಇದೆಲ್ಲದರ ಜತೆಗೆ ಚಿತ್ರ ಭಾರಿ ಯಶಸ್ಸು ಕಂಡಿದೆ ಎಂಬ ಮಾತು ಸೇರಿಸಿದರು.`ಕಥೆಯನ್ನು ನೇರವಾಗಿ ಹೇಳಿದ್ದರೆ ಯಾವುದೇ ಸ್ವಾರಸ್ಯ ಇರುತ್ತಿರಲಿಲ್ಲ. ಪದೇ ಪದೇ ಫ್ಲಾಷ್‌ಬ್ಯಾಕ್‌ಗೆ ಸರಿದಿದ್ದರಿಂದ ಒಂದಷ್ಟು ತಿರುವು ದೊರೆತಿದೆ. ಕಥೆಯನ್ನು ಹೇಗೂ ಹೇಳಬಹುದು. ನಾನು ಹೀಗೆ ಹೇಳಿದ್ದೇನೆ ಅಷ್ಟೇ~ ಎಂದರು.ಚಿತ್ರ ಬಿಡುಗಡೆಯಾದ ಒಂದು ವಾರಕ್ಕೇ ಅದರ ಯಶಸ್ಸನ್ನು ಹೇಗೆ ಅಳೆಯುತ್ತೀರಿ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ- `ಆಪ್ತಮಿತ್ರ, ಆಪ್ತರಕ್ಷಕ ಸೇರಿದಂತೆ ಹಿಂದಿನ ನನ್ನ ಚಿತ್ರಗಳು ಬಿಡುಗಡೆಯಾದಾಗಲೂ ಇದೇ ರೀತಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ದಾಖಲಿಸುತ್ತಿದೆ ಹಾಗೂ ಇದು ಮುಂದುವರಿಯಲಿದೆ ಎನ್ನುವುದು ನನ್ನ ನಂಬಿಕೆ. ಈಗಾಗಲೇ ಹಲವು ಕರೆಗಳು, ದೂರವಾಣಿ ಸಂದೇಶಗಳು ಚಿತ್ರದ ಯಶಸ್ಸನ್ನು ಸಾರುತ್ತಿವೆ~.ವಿತರಕ ಬಾಷಾ `ವ್ಯವಹಾರ~ ಮಾತನಾಡಿದರು. ರಾಜ್ಯದ ಯಾವ ಯಾವ ಚಿತ್ರಮಂದಿರಗಳಲ್ಲಿ ಚಿತ್ರ ಹೇಗೆ ಸಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದರು. ಮೊದಲವಾರದಲ್ಲಿ ಶೇ 68-70ರಷ್ಟು ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ.ಚಿಂಗಾರಿ ಚಿತ್ರಕ್ಕೂ ಇದಕ್ಕೂ ಹೋಲಿಕೆ ನೀಡಲಾಗದು. ರಾಜ್ಯಾದ್ಯಂತ 178 ಚಿತ್ರಮಂದಿರಗಳಲ್ಲಿ `ಚಿಂಗಾರಿ~ ಓಡುತ್ತಿದೆ. ಆರಕ್ಷಕ 82 ಚಿತ್ರಮಂದಿರಗಳಲ್ಲಿ ಓಡುತ್ತಿದ್ದಾನೆ. `ಚಿಂಗಾರಿ~ ಬಿಡುಗಡೆಯಾದ ದಿನ ಆರಕ್ಷಕ ಮಂಕಾಗಿದ್ದು ನಿಜ. ಆದರೆ ಮತ್ತೆ ಚೇತರಿಕೆ ಕಂಡಿದೆ ಎನ್ನುವುದು ಅವರ ಮಾತಿನ ಸಾರವಾಗಿತ್ತು.`ಚಿತ್ರಕತೆ ಗೊಂದಲಮಯವಾಗಿರುವುದೇ ಅದರ ಯಶಸ್ಸಿನ ಸೂತ್ರ~ ಎಂದರು ಚಿತ್ರದ ನಾಯಕ ಉಪೇಂದ್ರ. `ಎ~ ಚಿತ್ರಕ್ಕೆ ಬುದ್ಧಿವಂತರಿಗೆ ಮಾತ್ರ ಎಂಬ ಅಡಿ ಟಿಪ್ಪಣಿ ನೀಡಿದಂತೆ ಇದಕ್ಕೆ ಅತಿ ಬುದ್ಧಿವಂತರಿಗೆ ಮಾತ್ರ ಎಂಬ ಸಾಲು ಸೇರಿಸಬೇಕಿತ್ತು ಎಂದರು. ಈ ಮಾತು ಸಮರ್ಥನೆಯೋ ವ್ಯಂಗ್ಯವೋ ಎನ್ನುವುದು ಸ್ಪಷ್ಟವಾಗಲಿಲ್ಲ.`ಆರಕ್ಷಕ~ನ ಅಡಿ ಟಿಪ್ಪಣಿ `ಆತನ ರಕ್ತ ಹಸಿರು~ ಎಂದು. ಆತನ ರಕ್ತ ಹಸಿರೇ ಏಕೆ? ಎನ್ನುವ ಪ್ರಶ್ನೆಗೆ, ನಿರ್ದೇಶಕರು ಮತ್ತೊಂದು ಕತೆ ಹೇಳಿದರು. ದೇಹದೊಳಗಿರುವಾಗ ಮಾನವನ ರಕ್ತ ಹಸಿರಾಗಿರುತ್ತದಂತೆ. ಹೊರಬಂದಾಗ ಮಾತ್ರ ಕೆಂಪಾಗಿ ತೋರುತ್ತದಂತೆ. ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಇಂತಹ ಅಡಿಟಿಪ್ಪಣಿ ನೀಡಲಾಗಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಗೆ ತಡವಾಗಿ ಬಂದವರಲ್ಲಿ ಒಬ್ಬರಾದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಮೌನಕ್ಕೆ ಶರಣಾಗಿದ್ದರು. ನಗುವೊಂದೇ ಅವರ ಉತ್ತರವಾಗಿತ್ತು. ಸಂಗೀತ ನಿರ್ದೇಶಕ ಗುರುಕಿರಣ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry