ಸೋಮವಾರ, ಆಗಸ್ಟ್ 19, 2019
28 °C
ತೆಲಂಗಾಣ ರಾಜ್ಯ ರಚನೆ: ಪ್ರತಿಭಟನಾಕಾರ ನೇಣಿಗೆ ಶರಣು

ಆರದ ಪ್ರತಿಭಟನಾ ಕಾವು: ಮುಂದುವರಿದ ಸತ್ಯಾಗ್ರಹ

Published:
Updated:

ಹೈದರಾಬಾದ್ : ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯನ್ನು ಖಂಡಿಸಿ ಸೀಮಾಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿತ್ತು. ಆಂಧ್ರದ ಕರಾವಳಿ ಭಾಗದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸಮೈಕ್ಯಾಂಧ್ರ ಹೋರಾಟಗಾರನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಆ ಮೂಲಕ, ರಾಜ್ಯ ವಿಭಜಿಸುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಪ್ರತಿಭಟಿಸಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಐದಕ್ಕೇರಿದೆ.ದಿನಗೂಲಿ ನೌಕರನಾಗಿರುವ ಶ್ರೀನಿವಾಸ್, ಭೀಮಾವರಂ ಪಟ್ಟಣದಲ್ಲಿ ನಡೆದ ಚಳವಳಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಟೂರು ಪಟ್ಟಣದಲ್ಲಿ ಯುವಕನೊಬ್ಬ ಸ್ವಯಂ ಆಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತರ ತಂಡವೊಂದು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದೆ.ಮುಂದುವರಿದ ರಸ್ತೆ ತಡೆ, ಧರಣಿ ಪ್ರತಿಭಟನೆ:  ಆಂಧ್ರಪ್ರದೇಶವನ್ನು ವಿಭಜಿಸುವುದನ್ನು ಖಂಡಿಸಿ ಸೀಮಾಂಧ್ರದಲ್ಲಿ ಸತತ ಮೂರನೇ ದಿನವೂ ರಸ್ತೆ ತಡೆ, ಧರಣಿ, ಪ್ರತಿಭಟನಾ ಮೆರವಣಿಗೆಗಳು ನಡೆದವು. ಉದ್ರಿಕ್ತ ಪ್ರತಿಭಟನಾಕಾರರು ಹಲವು ಕಡೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಬಸ್‌ಗಳ (ಎಪಿಎಸ್‌ಆರ್‌ಟಿಸಿ) ಸಂಚಾರ ಸ್ಥಗಿತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು.ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ನೌಕರರು, ಕಾರ್ಮಿಕರು, ವಕೀಲರು, ಮಹಿಳೆಯರು  ಮತ್ತು ರಾಜಕೀಯ ಕಾರ್ಯಕರ್ತರು ಪಕ್ಷ ಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರತಿಮೆಗಳಿಗೆ ಹಾನಿ: ಅಖಂಡ ಆಂಧ್ರಕ್ಕಾಗಿ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ಹಲವು ಕಡೆಗಳಲ್ಲಿ ಮಾಜಿ ಪ್ರಧಾನಿಗಳಾದ ದಿವಂಗತ ಜವಹರ ಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಪ್ರತಿಮೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಪೊಲೀಸರು ಪದೇ ಪದೇ ಮಾಡಿದ ಮನವಿಯನ್ನೂ ಲೆಕ್ಕಿಸಿದ ಪ್ರತಿಭಟನಾಕಾರರು, ಗೋದಾವರಿ ಮತ್ತು ವಿಶಾಖಪಟ್ಟಣದಲ್ಲಿ ರಾಜೀವ್ ಗಾಂಧಿ ಅವರ ಎರಡು ಪ್ರತಿಮೆಗಳಿಗೆ ಹಾನಿ ಮಾಡಿದರು.ಅನಂತಪುರ ಉದ್ವಿಗ್ನ:  ಸತತ ಮೂರನೇ ದಿನವಾದ ಶುಕ್ರವಾರವೂ ಅನಂತಪುರ ಉದ್ವಿಗ್ನವಾಗಿತ್ತು. ಪ್ರತಿಭಟನೆಯಲ್ಲಿ ತೊಡಗಿದ್ದವರು ಎರಡು ಖಾಸಗಿ ಬಸ್‌ಗಳಿಗೆ ಬೆಂಕಿ ಹಚ್ಚಿದರು. ವಿಜಯನಗರಂ ಜಿಲ್ಲೆಯ ಧರ್ಮಪುರಿಯಲ್ಲಿ ಕೆಲವು ವಾಹನಗಳಿಗೆ ಹಾನಿ ಮಾಡಿದರು. ಯಾತ್ರಸ್ಥಳ ತಿರುಪತಿಗೆ ತೆರಳುತ್ತಿದ್ದ ಬಸ್‌ಗಳ ಸಂಚಾರಕ್ಕೆ ತಡೆ ಒಡ್ಡಿದ್ದರಿಂದ ಯಾತ್ರಾರ್ಥಿಗಳು ಪರದಾಡಿದರು. ವಿಶಾಖಪಟ್ಟಣ ಮತ್ತು ನರ್ಸಿಪಟ್ಟಣದಲ್ಲಿ ಸಚಿವರಾದ ಗಂಟಾ ಶ್ರೀನಿವಾಸ ರಾವ್ ಮತ್ತು ಪಿ. ಬಾಲರಾಜ್ ಅವರ ಮನೆಗೆ ಮುತ್ತಿಗೆ ಹಾಕಿದ ಚಳವಳಿಗಾರರು, ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.ನಾಲ್ಕನೇ ದಿನಕ್ಕೆ: ಈ ಮಧ್ಯೆ, ವಿಶಾಖಪಟ್ಟಣದ ಆಂಧ್ರ ವಿವಿಯಲ್ಲಿ  ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.`ಚಿರಂಜೀವಿಗೆ ಕಲ್ಲು ಎಸೆಯಿರಿ': ರಾಜ್ಯದಲ್ಲಿ ಈಗ ನಡೆಯುತ್ತಿರುವ ಗಲಭೆಗೆ ಕೇಂದ್ರ ಸಚಿವ ಚಿರಂಜೀವಿಯೇ ಕಾರಣ ಎಂದು ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ  ಮಾಜಿ ಮುಖ್ಯಸ್ಥೆ ಶೋಭಾ ರಾಣಿ ಆರೋಪಿಸಿದ್ದಾರೆ. ಒಂದು ವೇಳೆ, ಸೀಮಾಂಧ್ರ ಪ್ರಾಂತ್ಯಕ್ಕೆ ಭೇಟಿ ನೀಡುವ ಧೈರ್ಯವನ್ನು ಚಿರಂಜೀವಿ ತೋರಿದರೆ, ಅವರ ಮೇಲೆ ಕಲ್ಲೆಸೆಯುವಂತೆ ಜನರಿಗೆ ಶೋಭಾ ರಾಣಿ ಕರೆ ನೀಡಿದ್ದಾರೆ.

5 ಟಿಡಿಪಿ ಸಂಸದರ ರಾಜೀನಾಮೆ

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷವು ರಾಜ್ಯವನ್ನು ವಿಭಜಿಸುತ್ತಿದೆ ಎಂದು ಆರೋಪಿ ಸಿರುವ ತೆಲುಗುದೇಶಂ ಪಕ್ಷದ (ಟಿಡಿಪಿ) ಐವರು ಸಂಸದರು, ರಾಜ್ಯ ವಿಭಜಿಸುವುದನ್ನು ಖಂಡಿಸಿ ಶುಕ್ರವಾರ ತಮ್ಮ ಸ್ಥಾನಕ್ಕೆ ಇಲ್ಲಿ ರಾಜೀನಾಮೆ ನೀಡಿದ್ದಾರೆ. ರಾಜ್ಯ ಸಭಾ  ಸದಸ್ಯರಾದ ವೈ ಸತ್ಯ ನಾರಾ ಯಣ ಚೌಧರಿ, ಸಿ.ಎಂ ರಮೇಶ್,  ಲೋಕಸಭಾ ಸದಸ್ಯರಾದ ನಿಮ್ಮಲಾ ಕಿಸ್ತಪ್ಪ, ಕೊನಕಲ್ಲ ನಾರಾಯಣ ಮತ್ತು ಮೊದಗುಲ ವೇಣು ಗೋಪಾಲ ರೆಡ್ಡಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಇಂದು ಮಾತುಕತೆ

ಹೈದರಾಬಾದ್ (ಪಿಟಿಐ): ತೆಲಂಗಾಣ ರಾಜ್ಯ ರಚನೆ ಖಂಡಿಸಿ ಸಚಿವರು, ಶಾಸಕರು ರಾಜೀನಾಮೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕಾಂಗ್ರೆಸ್ ನಾಯಕತ್ವವು ರಾಯಲಸೀಮೆ ಮತ್ತು ಸೀಮಾಂಧ್ರ ಪ್ರಾಂತ್ಯದ ಶಾಸಕರೊಂದಿಗೆ ಶನಿವಾರ ಮಾತುಕತೆ ನಡೆಸಲಿದೆ.ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಮತ್ತು ಎಪಿಸಿಸಿ ಅಧ್ಯಕ್ಷ ಬಿ. ಸತ್ಯನಾರಾಯಣ ಅವರು ಶುಕ್ರವಾರ ಈ ಎರಡು ಪ್ರಾಂತ್ಯಗಳ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಬಸ್ ಸಂಚಾರ: ಇಂದು ಸಹಜ ಸ್ಥಿತಿಗೆ

ಬೆಂಗಳೂರು:  ತೆಲಂಗಾಣ ರಾಜ್ಯ ರಚನೆ ವಿರೋ ಧಿಸಿ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಶುಕ್ರವಾರವೂ ಸ್ಥಗಿತಗೊಳಿಸ ಲಾಗಿತ್ತು. ಶನಿವಾರ ಬೆಳಿಗ್ಗೆ ವೇಳೆಗೆ ಶೇ 50ಷ್ಟು ಬಸ್‌ಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ. `ಶನಿವಾರ ಬೆಳಿಗ್ಗೆ ವೇಳೆಗೆ ಶೇ 50ರಷ್ಟು ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ. ಆದರೆ, ಆಂಧ್ರದಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳು ರಾಜ್ಯದ ಗಡಿ ದಾಟಲಿವೆ. ಬಿಕ್ಕಟ್ಟು ಮುಂದುವರಿದರೆ ಸಂಚಾರ ಸ್ಥಗಿತವನ್ನು ಇನ್ನಷ್ಟು ಸಮಯ ಮುಂದುವರಿಸಲಾಗುವುದು' ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.

Post Comments (+)