ಆರುಷಿ ಅಪ್ಪ ರಾಜೇಶ್ ತಲ್ವಾರ್ ಮೇಲೆ ಹಲ್ಲೆ

7

ಆರುಷಿ ಅಪ್ಪ ರಾಜೇಶ್ ತಲ್ವಾರ್ ಮೇಲೆ ಹಲ್ಲೆ

Published:
Updated:

ಗಾಜಿಯಾಬಾದ್ (ಪಿಟಿಐ): ಆರುಷಿ-ಹೇಮರಾಜ್ ಕೊಲೆ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಲು ಬಂದ ಆರುಷಿಯ ತಂದೆ ರಾಜೇಶ್ ತಲ್ವಾರ್ ಮೇಲೆ 30ರ ಹರೆಯದ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದ ಹೊರಭಾಗದಲ್ಲಿ ಮಂಗಳವಾರ ನಡೆದಿದೆ.ಹಲ್ಲೆ ನಡೆಸಿದ ಉತ್ಸವ್ ಶರ್ಮಾ ಕಳೆದ ವರ್ಷ ಫೆಬ್ರುವರಿಯಲ್ಲಿ ಪಂಚಕುಲಾದಲ್ಲಿ ನ್ಯಾಯಾಲಯವೊಂದರ ಹೊರಭಾಗದಲ್ಲಿ ರುಚಿಕಾ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹರಿಯಾಣದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ಎಸ್.ರಾಥೋಡ್ ಮೇಲೆಯೂ ಹಲ್ಲೆ ನಡೆಸಿದ್ದ!ಹವ್ಯಾಸಿ ಪತ್ರಕರ್ತ ಎಂಬ ನೆಪದಲ್ಲಿ ನ್ಯಾಯಾಲಯದ ಹೊರಭಾಗದಲ್ಲಿ ಠಳಾಯಿಸುತ್ತಿದ್ದ ಉತ್ಸವ್ ಶರ್ಮಾ, ಸಿಬಿಐ ವಿಶೇಷ ನ್ಯಾಯಾಲಯದಿಂದ ಹೊರಗೆ ಬಂದ ರಾಜೇಶ್ ತಲ್ವಾರ್ ಮೇಲೆ ಸೀಳುಗತ್ತಿಯಿಂದ ದಾಳಿ ನಡೆಸಿದ. ಇದರಿಂದ ತಲ್ವಾರ್ ಅವರ ಎಡತಲೆಯ ಭಾಗಕ್ಕೆ ಗಾಯವಾಗಿ ರಕ್ತ ಸೋರಿತು. ಅವರ ವಕೀಲರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಅವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಗಾಜಿಯಾಬಾದ್‌ನ ಹಿರಿಯ ಪೊಲೀಸ್ ವರಿಷ್ಠ ರಘುಬೀರ್ ಲಾಲ್ ತಿಳಿಸಿದ್ದಾರೆ.ಘಟನೆ ನಡೆದ ತಕ್ಷಣ ಅಕ್ಕಪಕ್ಕದಲ್ಲಿ ನಿಂತಿದ್ದವರು ಆರೋಪಿ ಉತ್ಸವ್‌ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಆರುಷಿ-ಹೇಮರಾಜ್ ಕೊಲೆ ಪ್ರಕರಣದ ವಿಚಾರಣೆ ನಿಧಾನಗತಿಯಿಂದ ಸಾಗುತ್ತಿರುವುದರಿಂದ ರೋಸಿ ಹೋಗಿ ತಾನು ಈ ಕೃತ್ಯ ನಡೆಸಿದ್ದು, ತಲ್ವಾರ್ ಅವರನ್ನು ಕೊಲೆ ಮಾಡುವ ಉದ್ದೇಶ ತನ್ನದಾಗಿರಲಿಲ್ಲ, ಕೇವಲ ಗಾಯಗೊಳಿಸುವುದಷ್ಟೇ ತನ್ನ ಉದ್ದೇಶವಾಗಿತ್ತು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry