ಬುಧವಾರ, ಅಕ್ಟೋಬರ್ 23, 2019
22 °C

ಆರುಷಿ ಕೊಲೆ ಪ್ರಕರಣ: ಪೋಷಕರ ವಿಚಾರಣೆಗೆ ಆದೇಶ

Published:
Updated:

ನವದೆಹಲಿ (ಪಿಟಿಐ): ದೇಶದಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ಆರುಷಿ ಕೊಲೆ ಪ್ರಕರಣದಲ್ಲಿ ಆಕೆಯ ಪೋಷಕರ ವಿಚಾರಣೆಗೆ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ನಿವಾರಿಸಿದೆ. ಈ ಮೂಲಕ, ದಂತ ವೈದ್ಯ ದಂಪತಿ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ.2008ರಲ್ಲಿ ನೋಯ್ಡಾದಲ್ಲಿ ತಲ್ವಾರ್ ದಂಪತಿಯ ಮಗಳು ಆರುಷಿ ಹಾಗೂ ಮನೆಯ ಸಹಾಯಕ ಹೇಮರಾಜ್ ಅವರ ಕೊಲೆ ಆಗಿತ್ತು. ಪ್ರಕರಣದಲ್ಲಿ ತಮ್ಮ ವಿರುದ್ಧದ ಅಪರಾಧ ತನಿಖೆಯನ್ನು ರದ್ದುಗೊಳಿಸಬೇಕೆಂದು ಕೋರಿ ತಲ್ವಾರ್ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎ.ಕೆ.ಗಂಗೂಲಿ ಹಾಗೂ ಜೆ.ಎಸ್.ಖೇಹರ್ ಅವರನ್ನು ಒಳಗೊಂಡ ಪೀಠ ತಳ್ಳಿಹಾಕಿದೆ.`ದಂಪತಿಯನ್ನು ವಿಚಾರಣೆಗೆ ಒಳಪಡಿಸುವಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಏನೂ ತಪ್ಪಿಲ್ಲ. ಅಲ್ಲದೆ ನ್ಯಾಯಾಧೀಶರು ಯೋಚಿಸಿಯೇ ಈ ಆದೇಶ ನೀಡಿದ್ದಾರೆ~ ಎಂದು ಹೇಳಿದೆ.2008ರ ಮೇ 15ರ ರಾತ್ರಿ ತಲ್ವಾರ್ ಅವರ ನೋಯ್ಡಾ ನಿವಾಸದಲ್ಲಿ ಅವರ 14 ವರ್ಷದ ಪುತ್ರಿ ಆರುಷಿ ಮೃತದೇಹ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾರನೇ ದಿನ, ಅಂದರೆ 16ರ ರಾತ್ರಿ ಹೇಮರಾಜ್ ಮೃತದೇಹ ಮನೆಯ ಮಾಳಿಗೆಯ ಮೇಲ್ಭಾಗದಲ್ಲಿ ಪತ್ತೆಯಾಗಿತ್ತು.ಆರಂಭದಲ್ಲಿ ವಿಚಾರಣೆ ನಡೆಸಿದ್ದ ಉತ್ತರ ಪ್ರದೇಶ ಪೊಲೀಸರು, ಆರುಷಿ ತಂದೆ ರಾಜೇಶ್ ಅವರನ್ನು 2008ರ ಮೇ 23ರಂದು ಬಂಧಿಸಿದ್ದರು. ಮೇ 29ರಂದು ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಯಿತು. 2008ರ ಜುಲೈ11ರಂದು ಘಾಜಿಯಾಬಾದ್ ಕೋರ್ಟ್, ರಾಜೇಶ್ ಅವರಿಗೆ ಜಾಮೀನು ನೀಡಿತ್ತು.ಸುಮಾರು ಎರಡೂವರೆ ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ, ಘಾಜಿಯಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಪರಿಸಮಾಪ್ತಿ ವರದಿ ಸಲ್ಲಿಸಿತ್ತು. ತಲ್ವಾರ್ ದಂಪತಿಯನ್ನು ವಿಚಾರಣೆಗೊಳಪಡಿಸಲು ಯಾವುದೇ ಪುರಾವೆ ಸಿಗಲಿಲ್ಲ ಎಂದು ಹೇಳಿತ್ತು. ಆದರೆ ಘಾಜಿಯಾಬಾದ್ ಕೋರ್ಟ್ ಈ ವರದಿಯನ್ನು ತಳ್ಳಿಹಾಕಿತ್ತು. 2011ರ ಫೆಬ್ರುವರಿಯಲ್ಲಿ ತಲ್ವಾರ್ ದಂಪತಿಗೆ ನ್ಯಾಯಾಧೀಶರು ಸಮನ್ಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ರಾಜೇಶ್ ಹಾಗೂ ನೂಪುರ್ ಅಲಹಾಬಾದ್ ಹೈಕೋರ್ಟ್‌ಗೆ ಹೋಗಿದ್ದರು. ಅಲ್ಲಿಯೂ ಅವರಿಗೆ ಸೋಲಾಗಿತ್ತು. ವಿಚಾರಣಾ ನ್ಯಾಯಾಲಯದ ಸಮನ್ಸ್ ರದ್ದು ಮಾಡುವಂತೆ ಕೋರಿದ್ದ ಅವರ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿತು. ಇಷ್ಟೆಲ್ಲ ಆದ ಬಳಿಕ ದಂಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)