ಆರುಷಿ ಕೊಲೆ ಪ್ರಕರಣ: ವಿಚಿತ್ರ ತಿರುವು

7

ಆರುಷಿ ಕೊಲೆ ಪ್ರಕರಣ: ವಿಚಿತ್ರ ತಿರುವು

Published:
Updated:

ಗಾಜಿಯಾಬಾದ್ (ಪಿಟಿಐ): ವಿಚಿತ್ರ ತಿರುವು ಪಡೆದುಕೊಂಡಿರುವ ಆರುಷಿ ಕೊಲೆ ಪ್ರಕರಣದಲ್ಲಿ ಆಕೆಯ ತಂದೆ-ತಾಯಿಯರನ್ನೇ ಆರೋಪಿಗಳೆಂದು ಪರಿಗಣಿಸಿರುವ ಸಿಬಿಐ ವಿಶೇಷ ನ್ಯಾಯಾಲಯ, ಮೊಕದ್ದಮೆ ಕೈಬಿಡಲು ಕೋರಿ ಸಿಬಿಐ ಸಲ್ಲಿಸಿದ್ದ ಪರಿಸಮಾಪ್ತಿ ವರದಿಯನ್ನು ತಿರಸ್ಕರಿಸಿದೆ.

ಸಿಬಿಐ ಸಲ್ಲಿದ್ದ ಪರಿಸಮಾಪ್ತಿ ವರದಿಯಲ್ಲಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಧೀಶೆ ಪ್ರೀತಿ ಸಿಂಗ್ ಫೆ.28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆರುಷಿ ಪೋಷಕರಾದ ರಾಜೇಶ್- ನೂಪುರ್ ತಲ್ವಾರ್ ಅವರಿಗೆ ಸಮನ್ಸ್ ಜಾರಿಗೊಳಿಸಿದರು.ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದೆಂದು ತಲ್ವಾರ್ ವಕೀಲರು ತಿಳಿಸಿದ್ದಾರೆ. ಸಿಬಿಐ ಸಲ್ಲಿಸಿದ್ದ ಪರಿಸಮಾಪ್ತಿ ವರದಿ ವಿರುದ್ಧ ರಾಜೇಶ್ ತಲ್ವಾರ್ ಸಲ್ಲಿಸಿದ್ದ ದಾವೆಯನ್ನು ವಜಾಗೊಳಿಸಿದ ನ್ಯಾಯಾಲಯ, ಕೊಲೆಯಲ್ಲಿ ಮನೆಗೆಲಸಗಾರರ ಕೈವಾಡವಿರುವ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆಯೂ ಇದೇ ವೇಳೆ ನ್ಯಾಯಾಲಯ ಸೂಚಿಸಿತು.

ತಲ್ವಾರ್ ದಂಪತಿ ವಿರುದ್ಧ ಕೊಲೆ, ಸಾಕ್ಷ್ಯ ನಾಶ, ಒಳಸಂಚು ಹಾಗೂ ಅಪರಾಧ ಕೃತ್ಯ ಎಸಗಲು ಸಮಾನ ಉದ್ದೇಶ ಹೊಂದಿದ ಆರೋಪಗಳನ್ನು ನ್ಯಾಯಾಲಯ ಹೊರಿಸಿದೆ.

‘ಈ ಕೊಲೆಗಳನ್ನು ಯಾರೋ ಹೊರಗಿನವರು ಎಸಗಿಲ್ಲ. ಮನೆಗೆಲಸದವರೂ ಇದರಲ್ಲಿ ಭಾಗಿಯಾದ ಲಕ್ಷಣಗಳಿಲ್ಲ. ಸಾಂದರ್ಭಿಕ ಸಾಕ್ಷ್ಯಗಳು ತಲ್ವಾರ್ ದಂಪತಿಯತ್ತಲೇ ಬೆಟ್ಟು ಮಾಡುತ್ತಿವೆ’ ಎಂದು ಸಿಬಿಐ ಪರ ವಕೀಲ ಆರ್.ಕೆ.ಸೈನಿ ವಿವರಿಸಿದರು.

ಇದಕ್ಕೆ ಮುನ್ನ, ತಮ್ಮ ಪುತ್ರಿ ಆರುಷಿ ಮತ್ತು ಮನೆಗೆಲಸಗಾರ ಹೇಮರಾಜ್ ಕೊಲೆಗಳಲ್ಲಿ ತಲ್ವಾರ್ ದಂಪತಿ ಕೈವಾಡ ಇದೆ ಎಂಬುದನ್ನು ಸಾಂದರ್ಭಿಕ ಸಾಕ್ಷ್ಯಗಳು ಬೆಟ್ಟು ಮಾಡಿ ತೋರುತ್ತಿವೆ ಎಂದು ಸಿಬಿಐ ಮಂಗಳವಾರ ಹೇಳಿತ್ತು.

ನ್ಯಾಯಾಲಯದ ಈ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ತಲ್ವಾರ್ ದಂಪತಿ ಪರ ವಕೀಲರಾದ ರೆಬೆಕ್ಕಾ ಜಾನ್, ‘ಈ ರಾಷ್ಟ್ರದಲ್ಲಿ ಕಾನೂನು ಎಂಬುದಿದೆ. ಇದು ಅಂತಿಮ ತೀರ್ಪೇನಲ್ಲ. ಮೇಲಿನ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

14 ವರ್ಷದ ಬಾಲಕಿ ಆರುಷಿ 2008ರಲ್ಲಿ ನೋಯ್ಡಾದಲ್ಲಿರುವ ತನ್ನ ಮನೆಯಲ್ಲಿನ ಮಲಗುವ ಕೊಠಡಿಯಲ್ಲಿ ಹತ್ಯೆಯಾಗಿದ್ದಳು. ಒಂದು ದಿನದ ಬಳಿಕ ಮನೆ ಕೆಲಸಗಾರ ಹೇಮರಾಜ್ ಶವ ಕೂಡ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry