ಮಂಗಳವಾರ, ಏಪ್ರಿಲ್ 20, 2021
26 °C

ಆರು ಜಿಲ್ಲೆಗಳಿಗೆ ಸರ್ವೈಲೆನ್ಸ್ ಕ್ಯಾಮೆರಾ ವಿಸ್ತರಣೆ- ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ನೆರವು ನೀಡುತ್ತಿರುವ ಸರ್ವೈಲೆನ್ಸ್ ಕ್ಯಾಮೆರಾಗಳ ಅಳವಡಿಕೆಯನ್ನು ರಾಜ್ಯದ ಇನ್ನೂ ಆರು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು~ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ `ಗುಲ್ಬರ್ಗ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಸರ್ವೈಲೆನ್ಸ್ ಕ್ಯಾಮೆರಾಗಳ ಅಳವಡಿಕೆ ಮತ್ತು ಬ್ಲ್ಯಾಕ್‌ಬೆರಿ ತಂತ್ರಜ್ಞಾನದ ಜಾರಿ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಗರದ ಪ್ರಮುಖ ಸ್ಥಳಗಳಲ್ಲಿ, ಸಿಗ್ನಲ್‌ಗಳಲ್ಲಿ ಸರ್ವೈಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಸಂಚಾರ ನಿಯಮ ಉಲ್ಲಂಘಿಸುವವರ ಪತ್ತೆಗೆ ಸಹಕಾರಿಯಾಗುವುದು. ಜತೆಗೆ, ಕೊಲೆ, ದರೋಡೆಯಂತಹ ಅಪರಾಧ ಪ್ರಕರಣಗಳ ಸುಳಿವು ಕ್ಯಾಮೆರಾದಲ್ಲಿ ದೊರೆಯುತ್ತದೆ. ಮೊದಲ ಹಂತದಲ್ಲಿ ಹುಬ್ಬಳ್ಳಿ-ಧಾರಾವಾಡ, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 45 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2ನೇ ಹಂತದಲ್ಲಿ ಬೆಳಗಾವಿ, ಗುಲ್ಬರ್ಗ, ಬಳ್ಳಾರಿ ಜಿಲ್ಲಾ ಕೇಂದ್ರಗಳಲ್ಲಿ  45 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತುಮಕೂರು, ಮಂಡ್ಯ, ಉಡುಪಿ, ವಿಜಾಪುರ, ಚಿತ್ರದುಗ, ಹಾಸನದಲ್ಲಿ 90 ಕ್ಯಾಮೆರಾಗಳನ್ನು ಅಳವಡಿಸಲಾಗುವುದು~  ಎಂದರು.ಕಾರ್ಯಕ್ರಮದಲ್ಲಿ ಅಶೋಕ ಅವರು ಬಳ್ಳಾರಿ, ಬೆಳಗಾವಿ, ಗುಲ್ಬರ್ಗ ಮತ್ತು ದಾವಣಗೆರೆಯ ಸಿಬ್ಬಂದಿಯೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂಭಾಷಣೆ ನಡೆಸಿದರು. `ನಗರದಲ್ಲಿ 2008ರಿಂದ ಬ್ಲ್ಯಾಕ್‌ಬೆರಿ ಉಪಕರಣಗಳ ಬಳಕೆ ಜಾರಿಗೆ ತರಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ~ ಎಂದು ರಾಜ್ಯ ಅಪರಾಧ ದಾಖಲಾತಿ ಘಟಕದ ಎಡಿಜಿಪಿ ಪ್ರವೀಣ್ ಸೂದ್ ಹೇಳಿದರು.`ನಗರದಲ್ಲಿ 2008ರಲ್ಲಿ 280 ಸಿಬ್ಬಂದಿಗೆ ಬ್ಲ್ಯಾಕ್‌ಬೆರಿ ಯಂತ್ರವನ್ನು ನೀಡಲಾಗಿದೆ. ಅಲ್ಲದೇ, ಈ ವರ್ಷ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್ ದರ್ಜೆವರೆಗಿನ ಅಧಿಕಾರಿಗಳಿಗೆ 270 ಬ್ಲ್ಯಾಕ್‌ಬೆರಿ ಯಂತ್ರಗಳನ್ನು ನೀಡಲಾಗುತ್ತದೆ. ಈ ಮೂಲಕ ಚೆಲನ್ ಪುಸ್ತಕಗಳನ್ನು ಬಳಸುವ ಹಳೆ ಪದ್ಧತಿಯನ್ನು ಹದಿನೈದು ದಿನಗಳಲ್ಲಿ ರದ್ದುಪಡಿಸಲಾಗುವುದು.ಎಲ್ಲಾ ಬ್ಲ್ಯಾಕ್‌ಬೆರಿ ಯಂತ್ರಗಳನ್ನು ರೇಸ್‌ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಸ್ಥಾಪಿಸಲಾಗಿರುವ ರಾಜ್ಯ ದತ್ತಾಂಶ ಕೇಂದ್ರಕ್ಕೆ ಸಂಪರ್ಕಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳು ಅಂತರ್ಜಾಲದ ಮುಖಾಂತರ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸುವ ಮತ್ತು ಮಾರ್ಗದರ್ಶನ ನೀಡುವ ವ್ಯವಸ್ಥೆಯಿದೆ. ಈ ತಂತ್ರಜ್ಞಾನದ ಅಳವಡಿಕೆಯಿಂದ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ.ದಂಡ ಕಟ್ಟಲು ಸವಾರರು ಠಾಣೆಗಳಿಗೆ ಬರುವ ಅಗತ್ಯವಿಲ್ಲ. ಬದಲಾಗಿ `ಕರ್ನಾಟಕ ಒನ್~, `ಬೆಂಗಳೂರು ಒನ್~ ಸೇವಾ ಕೇಂದ್ರಗಳಲ್ಲೇ ದಂಡದ ಹಣ ಪಾವತಿಸಬಹುದು. ಈ ಸೇವೆ ರಾಜ್ಯದಲ್ಲಿ ಲಭ್ಯವಿದ್ದು, ಒಂದು ತಿಂಗಳಲ್ಲಿ ನಗರದ 6 ಸಾವಿರ ಸವಾರರು ಸೇವಾಕೇಂದ್ರಗಳಲ್ಲಿ, ಅಂತರ್ಜಾಲದ ಮೂಲಕ ದಂಡ ಪಾವತಿಸಿದ್ದಾರೆ~ ಎಂದರು.9 ಹೊಸ ಯೋಜನೆಗಳು

`ಸಕಾಲ ಯೋಜನೆಯಡಿ ಈಗಾಗಲೇ 12 ಸೇವೆಗಳನ್ನು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ನೀಡುತ್ತಿದೆ. ಬೆರಳಚ್ಚು, ವೀಸಾ ವ್ಯವಸ್ಥೆ ಸರಳೀಕರಣಗೊಳಿಸುವುದು ಸೇರಿದಂತೆ ಇನ್ನೂ ಒಂಬತ್ತು ಸೇವೆಗಳನ್ನು 20 ದಿನಗಳೊಳಗೆ ಒದಗಿಸಲಾಗುವುದು. ಪಾಸ್‌ಪೋರ್ಟ್‌ಗಳನ್ನು ಪೊಲೀಸ್ ಠಾಣೆಯಲ್ಲೇ ನೀಡುವ ವ್ಯವಸ್ಥೆ ಮಾಡುವ ಚಿಂತನೆಯಿದೆ. ಅಲ್ಲದೇ, ಠಾಣೆಗೆ ದೂರು ನೀಡಿದವರ ಮೊಬೈಲ್‌ಗೆ ಸಂದೇಶ ಕಳುಹಿಸುವ ಮೂಲಕ ಪ್ರಕರಣ ಯಾವ ಹಂತದಲ್ಲಿದೆ ಎಂಬ ಮಾಹಿತಿ ನೀಡಲಾಗುವುದು~.

  - ಆರ್.ಅಶೋಕ

  ಉಪಮುಖ್ಯಮಂತ್ರಿವೀಡಿಯೋ ಕಾನ್ಫರೆನ್ಸ್

`ಸರ್ವೈಲೆನ್ಸ್ ಕ್ಯಾಮೆರಾ ಅಳವಡಿಸಿರುವ ಜಿಲ್ಲಾ ಕೇಂದ್ರಗಳಲ್ಲಿ ನಿಯಂತ್ರಣ ಕೊಠಡಿ ಮತ್ತು ಮಾನಿಟರ್ ವ್ಯವಸ್ಥೆ ಇರುತ್ತದೆ. ಹಿರಿಯ ಅಧಿಕಾರಿಗಳು ನಗರದಲ್ಲಿರುವ ಮುಖ್ಯ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಯಾವುದೇ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಜತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಭಾಷಣೆ ನಡೆಸಬಹುದು. ಈ ಕ್ಯಾಮೆರಾಗಳಲ್ಲಿ ಸಂಗ್ರಹವಾಗುವ ದೃಶ್ಯಗಳು ಸ್ಪಷ್ಟವಾಗಿರುತ್ತದೆ. ಅಲ್ಲದೇ, ರಾತ್ರಿ ವೇಳೆಯಲ್ಲಿ ಸೆರೆಯಾದ ದೃಶ್ಯಗಳಲ್ಲೂ ಸ್ಪಷ್ಟತೆ ಇರುತ್ತದೆ. ಜೂಮಿಂಗ್ ಸೌಲಭ್ಯ ಇರುವುದರಿಂದ ವಾಹನಗಳ ನೋಂದಣಿ ಸಂಖ್ಯೆಯನ್ನೂ ಗುರುತಿಸಬಹುದು. ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳು 12 ದಿನಗಳವರೆಗೆ ಉಳಿದಿರುತ್ತದೆ~.

 - ಪ್ರವೀಣ್ ಸೂದ್, ಎಡಿಜಿಪಿ, ರಾಜ್ಯ ಅಪರಾಧ ದಾಖಲಾತಿ ಘಟಕ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.