ಶುಕ್ರವಾರ, ಏಪ್ರಿಲ್ 16, 2021
31 °C

ಆರು ತಿಂಗಳಲ್ಲಿ ರೀಚ್-3ರಲ್ಲಿ ಮೆಟ್ರೊ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ತಿಂಗಳಲ್ಲಿ ರೀಚ್-3ರಲ್ಲಿ ಮೆಟ್ರೊ ಸಂಚಾರ

ಬೆಂಗಳೂರು: `ಮಲ್ಲೇಶ್ವರದಿಂದ ಪೀಣ್ಯದವರೆಗಿನ ರೀಚ್- 3ರ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರು ತಿಂಗಳಲ್ಲಿ ಆರಂಭವಾಗಲಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ 57ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಗರದಲ್ಲಿ `ನಮ್ಮ ಮೆಟ್ರೊ~ ಕಾರ್ಯಾರಂಭ ಮಾಡಿದೆ. ಮೊದಲ ಹಂತದ ಮಾರ್ಗದ ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆಯವರೆಗಿನ ರೀಚ್- 1ರ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಯಶಸ್ವಿಯಾಗಿ ನಡೆಯುತ್ತಿದೆ~ ಎಂದರು.`ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಗುರಿಯನ್ನು ಸಾಧಿಸುವುದು ಸುಲಭವಾಗುತ್ತದೆ ಎಂಬ ವಿಶ್ವಾಸವಿದೆ. 2012-13 ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ 10,794 ಕೋಟಿ ರೂಪಾಯಿಗಳನ್ನು ನಿಗದಿಗೊಳಿಸಲಾಗಿದೆ~ ಎಂದು ಅವರು ತಿಳಿಸಿದರು.`ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್‌ಗಳ ಸಹಾಯದಿಂದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಸಹಾಯದಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮಂದಾಗಬೇಕು~ ಎಂದು ಅವರು ಕರೆನೀಡಿದರು.`ಬೆಂಗಳೂರು ನಗರವೂ ಸೇರಿದಂತೆ 2 ಮತ್ತು 3ನೇ ಹಂತದ ನಗರ, ಪಟ್ಟಣ ಹಾಗೂ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ನೀಡಲಿದೆ. ನಾಡಿನ ನೆಲ, ಜಲ ಮತ್ತು ಸಂಪತ್ತಿನ ರಕ್ಷಣೆಗೆ ಸರ್ಕಾರ ಬದ್ಧವಿದೆ~ ಎಂದರು.ಅಡ್ಡಿಯಾದ ಮಳೆ: ಗುರುವಾರ ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದ್ದ ಮಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಯಿತು. ಮಳೆಯ ಕಾರಣದಿಂದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಇದರಿಂದ ಕಾರ್ಯಕ್ರಮಗಳನ್ನು ನೀಡಲು ಬಂದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಬೇಸರ ಮನೆ ಮಾಡಿತ್ತು. ಬಣ್ಣ ಬಣ್ಣದ ಉಡುಗೆ ತೊಟ್ಟು ಬಂದಿದ್ದ ವಿದ್ಯಾರ್ಥಿಗಳ ಮುಖದಲ್ಲಿ ನಿರಾಸೆ ಕಂಡುಬಂತು.`ರಾಜ್ಯೋತ್ಸವದ ದಿನಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲು ಅಭ್ಯಾಸವನ್ನು ನಡೆಸಿದ್ದೆವು. ಆದರೆ, ಈಗ ಮಳೆ ಬಂದ ಕಾರಣದಿಂದ ಕಾರ್ಯಕ್ರಮ ರದ್ದಾಗಿದೆ. ಇದರಿಂದ ತೀವ್ರ ಬೇಸರವಾಗಿದೆ~ ಎಂದು ಮಲ್ಲೇಶ್ವರ ಲೇಡಿಸ್ ಅಸೋಸಿಯೇಷನ್ ಹೈಸ್ಕೂಲ್‌ನ ವಿದ್ಯಾರ್ಥಿನಿ ಸುಧಾ ಹೇಳಿದರು.`ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ನಾವು ಶ್ರಮಪಟ್ಟು ಅಭ್ಯಾಸವನ್ನು ಮಾಡಿದ್ದೆವು. ಮಳೆಯಿಂದ ಕಾರ್ಯಕ್ರಮ ಈಗ ರದ್ದಾಗಿದೆ. ಇದರಿಂದ ತುಂಬಾ ಬೇಸರವಾಗುತ್ತಿದೆ. ಆದರೆ, ಮುಂದಿನ ಬಾರಿ ಮತ್ತೆ ಕಾರ್ಯಕ್ರಮ ನೀಡಬಹುದು ಎಂಬ ವಿಶ್ವಾಸವಿದೆ~ ಎಂದು ಹೇಳಿದ್ದು ಗೋವಿಂದಪುರದ ಲಿಟಲ್ ಗ್ಲಾಡೀಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮಾ.ಕರಪತ್ರ ಎಸೆದು ಪ್ರತಿಭಟನೆ: ವೇದಿಕೆಯ ಮೇಲೆ ಮುಖ್ಯಮಂತ್ರಿಯವರ ಭಾಷಣ ನಡೆಯುತ್ತಿದ್ದ ಸಂದರ್ಭದಲ್ಲಿ ಎಸ್‌ಎಫ್‌ಐ (ಭಾರತ ವಿದ್ಯಾರ್ಥಿ ಫೆಡರೇಷನ್) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಸದಸ್ಯರು ಕರಪತ್ರಗಳನ್ನು ಎಸೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.`ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ 12,740 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿ ಈಗ ರಾಜ್ಯೋತ್ಸವವನ್ನು ಆಚರಿಸುತ್ತಿದೆ. ಇದು ಕನ್ನಡ ಹಾಗೂ ಕರ್ನಾಟಕ ಜನತೆಗೆ ಎಸಗಿದ ದ್ರೋಹವಾಗಿದೆ. ಹೀಗಾಗಿ ರಾಜ್ಯೋತ್ಸವವನ್ನು ಆಚರಿಸುವ ನೈತಿಕತೆ ರಾಜ್ಯ ಸರ್ಕಾರಕ್ಕಿಲ್ಲ. ಆದ್ದರಿಂದ ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ಸಚಿವರನ್ನು ಈ ಕಾರ್ಯಕ್ರಮದಿಂದ ಬಹಿಷ್ಕರಿಸಬೇಕು~ ಎಂದು ಘೋಷಣೆ ಕೂಗಿದರು.ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಘೋಷಣೆ ಕೂಗಿದ ಸಂಘಟನೆಗಳ ಕೆಲ ಸದಸ್ಯರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.