ಆರು ತಿಂಗಳಾದರೂ ದೊರೆಯದ ಅನುಮೋದನೆ!

7
ದೇವದುರ್ಗ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

ಆರು ತಿಂಗಳಾದರೂ ದೊರೆಯದ ಅನುಮೋದನೆ!

Published:
Updated:
ಆರು ತಿಂಗಳಾದರೂ ದೊರೆಯದ ಅನುಮೋದನೆ!

ದೇವದುರ್ಗ: ಡಾ. ನಂಜುಂಡಪ್ಪ ವರದಿ ಅನುಷ್ಠಾನದ 2012-13ನೇ ಸಾಲಿನ ಅನುದಾನ ಸೇರಿದಂತೆ ಇತರ ವಿಶೇಷ ಅನುದಾನ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಯಾದ ನಂತರ ಕಳೆದ ಜುಲೈ ತಿಂಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಕಳುಹಿಸಿ ಆರು ತಿಂಗಳಾದರೂ ಅನುಮೋದನೆ ಬರದೆ ಇರುವುದು ಮತ್ತು 2010ರಲ್ಲಿ ಕೈಗೊಂಡ ತಾಪಂ ಕಾಮಗಾರಿಗಳಿಗೆ ಇದುವರಿಗೂ ಬಿಲ್ ಪಾವತಿಯಾಗದಿರುವುದು ಬೇಸರ ತಂದಿದ್ದು, ತಾಪಂ ಸಭೆಗೆ ಬರುವುದರ ಬಗ್ಗೆ ವಿಚಾರ ಮಾಡಬೇಕಾಗಿದೆ ಎಂದು ತಾಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಪ್ರಭಯ್ಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿ ಗಾಣಧಾಳ ಪಿಡ್ಡೆಗೌಡ ಮಾತನಾಡಿ, `ಈ ಮೊದಲೇ ತಾಲ್ಲೂಕು ಪಂಚಾಯಿತಿಗೆ ಅನುದಾನ ಬರುವುದು ವಿರಳ. ಅದರಲ್ಲಿ ಕ್ರಿಯಾ ಯೋಜನೆ ತಯಾರಿಸಿ ಕಳಿಸಿದ ನಂತರ ಆರು ತಿಂಗಳಗಳ ಕಾಲ ಅನುಮೋದನೆಗೆ ಕಾಯಬೇಕಾಗಿದೆ. ಕ್ರಿಯಾ  ಯೋಜನೆಗೆ ಬೆಲೆ ಇಲ್ಲದಂತಾಗಿದೆ. ಸಭೆಗೆ ಬಂದು ಮಾತನಾಡುವುದರಲ್ಲಿ ಯಾವ ಅರ್ಥ ಇಲ್ಲ' ಎಂದರು.ಸಭಾಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಪಿಡ್ಡೆಗೌಡರ ಅಸಮಾಧಾನಕ್ಕೆ ಬೆಂಬಲ ಸೂಚಿಸಿದರು.

ಬುಂಕಲದೊಡ್ಡಿ,ಜಾಲಹಳ್ಳಿಯ ವರಟಗೇರಿ ವಾರ್ಡ್‌ನಲ್ಲಿ ಕುಡಿಯುವ ನೀರಿನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಸುಮಾರು 66ಜನರಿಗೆ ವಾಂತಿಬೇಧಿ ಕಾಣಿಸಿಕೊಂಡ ನಂತರ ಆರೋಗ್ಯ ಇಲಾಖೆ ಮುಂಜಾಗ್ರತೆ ಕ್ರಮಕೈಗೊಂಡಿದೆ. ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಕಾಂತ ಸಭೆಗೆ ತಿಳಿಸಿದರು.

ಚಿಕ್ಕಬುದೂರು ಮತ್ತು ಸಲಿಕ್ಯಾಪೂರ ಗ್ರಾಮಗಳಲ್ಲಿ ಸುಮಾರು 250 ಜನರಿಗೆ ಮಲೇರಿಯಾ ಕಾಣಿಸಿಕೊಂಡ ನಂತರ ಚಿಕಿತ್ಸೆ ನೀಡಲಾಗಿದ್ದು, ಸಾಮಾನ್ಯ ಸ್ಥಿತಿಗೆ ಬಂದಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶೇ. 6ರಷ್ಟು ಅನುದಾನವನ್ನು ಆರೋಗ್ಯಕ್ಕಾಗಿಯೇ ಮೀಸಲಿಡಲು ಕೋರಿದರು.`ಜಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹುಲಿಮನಿ,  15 ವರ್ಷಗಳಿಂದ ಜಾಲಹಳ್ಳಿಯಲ್ಲಿ ಬಿಡುಬಿಟ್ಟ ಕಾರಣ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ಈ ಬಗ್ಗೆ ಕೂಡಲೇ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು' ಎಂದು  ಸದಸ್ಯ ಪಿಡ್ಡೆಗೌಡ ಆರೋಗ್ಯಾಧಿಕಾರಿಗೆ ಕೋರಿದರು.

ಗಬ್ಬೂರು, ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು.ತಾಲ್ಲೂಕಿನಲ್ಲಿ ಅಪೌಷ್ಟಿಕ ಮಕ್ಕಳ ಬೆಳವಣಿಗೆಗಾಗಿ ಸರ್ಕಾರ ತಾಲ್ಲೂಕಿಗೆ ಆರು ಕೋಟಿ ರೂಪಾಯಿ ಅನುದಾನ ನೀಡಿದ್ದು, ಬರುವ ದಿನಗಳಲ್ಲಿ ಯೋಜನೆ ಕುರಿತು ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ವೀರನಗೌಡ ಸಭೆಗೆ ತಿಳಿಸಿದರು.ಕಕ್ಕಲದೊಡ್ಡಿ ಗ್ರಾಮದಲ್ಲಿನ ಅಂಗನವಾಡಿ ಕಾರ್ಯಕರ್ತೆಯ ನೇಮಕಕ್ಕೆ ಸಂಬಂಧಿಸಿದಂತೆ ಮರುಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಇಲ್ಲದಿದ್ದರೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗುತ್ತದೆ ಎಂದು ಸದಸ್ಯ ಪಿಡ್ಡೆಗೌಡ ಅವರು ಆರೋಪಿಸಿದರು. ಗೂಗಲ್ ಗ್ರಾಮದಲ್ಲಿನ ಅಂಗನವಾಡಿ ದುರಸ್ತಿಯ ಬಗ್ಗೆ ತಾಪಂ ಸದಸ್ಯ ವಿರೂಪಣ್ಣಗೌಡ  ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ತಾಲ್ಲೂಕಿನಲ್ಲಿ ಒಟ್ಟು 476 ಅಂಗನವಾಡಿ ಕೇಂದ್ರಗಳು ಇದ್ದು, ಅದರಲ್ಲಿ 250 ಕೇಂದ್ರಗಳಿಗೆ ಸ್ವಂತ ಕಟ್ಟಡ ಇದ್ದರೆ ಉಳಿದ 180 ಕೇಂದ್ರಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, 81 ಕೇಂದ್ರಗಳು ಗುಡಿ ಗುಂಡಾರಗಳಲ್ಲಿ, ಸಮುದಾಯ ಭವನಗಳಲ್ಲಿ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.ತಾಲ್ಲೂಕಿನ ಪ್ರಾಥಮಿಕ ಶಾಲೆಗಳಿಗಾಗಿ 90 ಅತಿಥಿ ಶಿಕ್ಷಕರನ್ನು ಮತ್ತು ಪ್ರೌಢ ಶಾಲೆಗಳಿಗೆ ಅವಶ್ಯಕತೆ ಇದಷ್ಟು ಜನ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಇಲಾಖೆ ಆದೇಶಿಸಿದ್ದು, ಡಿ. 12ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಬಿಇಒ ಎನ್. ಶ್ರೀಧರ ಸಭೆಗೆ ಮಾಹಿತಿ ನೀಡಿದರು.ಬಂದ ಅರ್ಜಿಗಳನ್ನು ಮೆರಿಟ್ ಆಧಾರದ ಮೇಲೆಯೇ ನೇಮಕಾತಿ ಮಾಡಿಕೊಳ್ಳಲಾಗುವುದು. ಮತ್ತು ಸ್ಥಳೀಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಒಂದಕ್ಕಿಂತ ಹೆಚ್ಚು ಅರ್ಜಿ ಬರದೆ ಹೋದಾಗ ಅಂಥ ಅಭ್ಯರ್ಥಿಯನ್ನು ಮೆರಿಟ್ ಇಲ್ಲದೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ಕ್ರಮ: ಪ್ರತಿಸಭೆಗೆ ಗೈರು ಹಾಜರಾಗುವ ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ, ಅರಣ್ಯ ಇಲಾಖೆ, ಕೆಶೀಫ್ ಮತ್ತು ಇತರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕೂಡಲೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆಯಲು ಸದಸ್ಯ ಲಕ್ಷ್ಮಣ ರಾಠೋಡ್ ಸೂಚಿಸಿದಾಗ ಸರ್ವ ಸದಸ್ಯರು ಬೆಂಬಲಿಸಿದರು. ಇದಕ್ಕೂ ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾ ಆಡಳಿತದ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಸದಸ್ಯೆ ಬಸವರಾಜೇಶ್ವರಿ ಮಾತನಾಡಿ, ವಂದಲಿ ಗ್ರಾಮದಲ್ಲಿ ಜಾತ್ರಾಮೋತ್ಸವ ಇದ್ದು ಕೋಡಲೇ ಕುಡಿಯುವ ನೀರಿನ ಬಗ್ಗೆ ಕ್ರಮಕೈಗೊಳ್ಳಲು ಸಭೆಗೆ ಸೂಚಿಸಿದಾಗ ಇಒ ಮತ್ತು ಜಿಪಂ ಎಂಜಿನಿಯರ್ ಅವರು ಭರವಸೆ ನಿಡಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ದೇವಕೆಮ್ಮ, ಇಒ ನಾಮದೇವ ರಾಠೋಡ್ ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry