ಶುಕ್ರವಾರ, ಮೇ 14, 2021
31 °C

ಆರು ತಿಂಗಳಿಂದಲೂ ಕುಡಿವ ನೀರಿಗೆ ತತ್ವಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ತಾಲ್ಲೂಕಿನ ದುಮ್ಮಿಯ ಪರಿಶಿಷ್ಟರ ಕಾಲೊನಿಯ ನಿವಾಸಿಗಳು ಸೋಮವಾರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗ್ರಾಮದಲ್ಲಿ ಕೊಳವೆಬಾವಿ ಇದ್ದರೂ ಸುಮಾರು 6 ತಿಂಗಳಿಂದ ಸರಿಯಾಗಿ ಕುಡಿಯುವ ನೀರು ಬಿಡುತ್ತಿಲ್ಲ.ಇದರಿಂದ ಜನ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ನೀರಿಲ್ಲದೆ ಸ್ನಾನ ಮಾಡಲು, ಬಟ್ಟೆ ತೊಳೆಯಲು ಮತ್ತು ದಿನಬಳಕೆಗೆ ತೀವ್ರ ತೊಂದರೆಯಾಗಿದೆ. ಬೇಸಿಗೆಯ ಬಿಸಿಲು ಹೆಚ್ಚಾಗಿದ್ದು, ಜಾನುವಾರುಗಳಿಗೆ ಕುಡಿಸಲೂ ನೀರಿಲ್ಲ. ಕಾಲೊನಿಯಲ್ಲಿರುವ ಎಲ್ಲರೂ ಬಡವರಾಗಿದ್ದು, ಕೂಲಿ ಮಾಡಿ ಜೀವಿಸುತ್ತಿದ್ದಾರೆ. ನೀರಿನ ಸಮಸ್ಯೆ ಇರುವುದರಿಂದ ಕೂಲಿ ಹೋಗುವುದು ಬಿಟ್ಟು ನೀರಿಗಾಗಿ ಅಲೆಯುವ ಪರಿಸ್ಥಿತಿ ಇದೆ.ಗ್ರಾಮದಲ್ಲಿ ನೀರಿಲ್ಲದೆ ಇರುವುದರಿಂದ 2 ಕಿ.ಮೀ. ದೂರದ ದುಮ್ಮಿ ಗೊಲ್ಲರಹಟ್ಟಿ, ದೊಗ್ಗನಾಳು, ಅಂಜನಾಪುರ, ಚನ್ನಪ್ಪನ ಹಟ್ಟಿ ಗ್ರಾಮಗಳಿಗೆ ಹೋಗಿ ನೀರು ತರುವ ಸ್ಥಿತಿ ಇದೆ. ಪುರುಷರು ಸೈಕಲ್‌ಗಳಲ್ಲಿ ನೀರು ತಂದರೆ, ಮಹಿಳೆಯರು ದೂರದಿಂದ ನೀರು ತರಲು ಹೆಚ್ಚು ಕಷ್ಟಪಡುತ್ತಾರೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.ಕೆಲವರು ರಾತ್ರಿ ವೇಳೆಯಲ್ಲಿ ತೋಟಗಳ ಬೋರ್‌ವೆಲ್‌ಗಳಿಂದ ನೀರು ತರುತ್ತಾರೆ. ಕತ್ತಲೆಯಲ್ಲಿ ತೋಟಗಳಿಗೆ ಹೋಗುವುದರಿಂದ ಹಾವು, ಕರಡಿ, ಹಂದಿಗಳು ದಾಳಿ ಮಾಡುವ ಆತಂಕ ಇದೆ. ಬೋರ್‌ವೆಲ್ ಇಲ್ಲದವರು ಒಂದೆರಡು ಕೊಡ ನೀರಿನಲ್ಲೇ ಎರಡು ಮೂರು ದಿನ ಕಳೆಯುವ ಸ್ಥಿತಿ ಇದೆ ಎಂದು ತಿಳಿಸಿದರು.

 ದುಮ್ಮಿ ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ಇದ್ದರೂ ಪೈಪ್‌ಲೈನ್‌ಗಳು ಹೊಡೆದು, ಕೊಳಚೆ ನೀರು ಅದರಲ್ಲಿ ಸೇರುತ್ತಿದೆ. ಇದೇ ನೀರನ್ನು ಕೆಲವೊಮ್ಮೆ ಕುಡಿಯಲು ಬಿಡುತ್ತಾರೆ.ಅನಿವಾರ್ಯವಾಗಿ ಜನ ಕಲುಷಿತ ನೀರನ್ನೇ ಕುಡಿಯಬೇಕಾಗಿದ್ದು, ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ. ತಕ್ಷಣವೇ ನೀರಿನ ಸಮಸ್ಯೆ ಬಗೆಹರಿಸದಿದ್ದರೆ, ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು.ದಸಂಸ ತಾಲ್ಲೂಕು ಘಟಕದ ಸಂಚಾಲಕ ಕೆಂಗುಂಟೆ ಜಯಣ್ಣ, ಹನುಮಂತಪ್ಪ, ರಾಜಪ್ಪ, ಜಯಮ್ಮ, ಆಂಜಿನಪ್ಪ, ನಾಗರಾಜ್, ಶಿವಕುಮಾರ, ಗೋವಿಂದರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.