ಬುಧವಾರ, ನವೆಂಬರ್ 20, 2019
27 °C

ಆರು ದಶಕಗಳಲ್ಲಿ ಒಬ್ಬರೇ ಶಾಸಕಿ !

Published:
Updated:

ಗದಗ: ಅವಿಭಜಿತ ಧಾರವಾಡ ಜಿಲ್ಲೆಯ ಗದಗ ಭಾಗದಲ್ಲಿ ಆರು ದಶಕಗಳಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದು ಒಬ್ಬರೇ ಮಹಿಳೆ!ಧಾರವಾಡ ಅಖಂಡ ಜಿಲ್ಲೆಯಾಗಿದ್ದಾಗ 1957ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗುವ ಮೂಲಕ ಲೀಲಾವತಿ ವಿ. ಮಾಗಡಿ ಅವರು ಮೊದಲ ಶಾಸಕಿ ಹಾಗೂ ಸಚಿವೆ ಎನಿಸಿಕೊಂಡರು. ಶಿರಹಟ್ಟಿ ಮತಕ್ಷೇತ್ರ ಈಗಿನ ಗದಗ ಜಿಲ್ಲೆಯ ಭಾಗ.ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾವತಿ ಮಾಗಡಿ ಅವರು ಸಚಿವೆಯಾಗಿ ಇತಿಹಾಸ ಬರೆದಿದ್ದಾರೆ. ಅಂದಿನ ಬಿ.ಡಿ.ಜತ್ತಿ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣ ಕೈಗಾರಿಕೆ ಖಾತೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು. 1960ರ ದಶಕದಲ್ಲೇ ಮಹಿಳೆಯೊಬ್ಬರು ಮಂತ್ರಿ ಆಗುವುದು ಅಷ್ಟು ಸುಲಭದ ಮಾತು ಆಗಿರಲಿಲ್ಲ. ಅಂಥದ್ದರಲ್ಲಿ ಲೀಲಾವತಿ ಅವರು ಹಲವು ತೊಡಕುಗಳನ್ನು ಎದುರಿಸಿ ಮೂರು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.1962ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಕಣಕ್ಕಿಳಿದ ಲೀಲಾವತಿ ಅವರು ಸ್ವತಂತ್ರ ಪಕ್ಷದ ಅಭ್ಯರ್ಥಿ ವಿರುದ್ಧ ಸೋಲು ಕಂಡರು. 1967ರಲ್ಲಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದರು. ಆಗ ಸ್ವತಂತ್ರ ಪಕ್ಷದ ಅಭ್ಯರ್ಥಿ ಎಸ್.ವಿ.ಕಾಶೀಮಠ ವಿರುದ್ಧ ಒಂದು ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. ನಂತರ ಸ್ಪರ್ಧಿಸಲಿಲ್ಲ.`ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಲೀಲಾವತಿ ಅವರು ರಾಷ್ಟ್ರಪಿತ ಗಾಂಧೀಜಿ ಅವರ ಆದರ್ಶಗಳನ್ನು ಅವಳಡಿಸಿಕೊಂಡಿದ್ದರು. ಮಹಿಳೆಯರ ಶೋಷಣೆ, ಮೂಢನಂಬಿಕೆ ಹಾಗೂ ಮೌಢ್ಯತೆ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು' ಎನ್ನುತ್ತಾರೆ ಅವರ ಸಮಕಾಲೀನರು.ಚುನಾವಣೆಗಳಲ್ಲಿ ಟಿಕೆಟ್ ನೀಡುವ ವಿಷಯ ಬಂದಾಗ ಎಲ್ಲ ಪಕ್ಷಗಳು ಮಹಿಳೆಯರನ್ನು ಕಡೆಗಣಿಸುತ್ತ ಬಂದಿವೆ. ರಾಜಕೀಯ ಪಕ್ಷಗಳು ವಿಧಾನಸಭೆಗೆ ಟಿಕೆಟ್ ನೀಡುವುದಿರಲಿ, ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಿದವರೂ ಇಲ್ಲ.1999ರ ಚುನಾವಣೆಯಲ್ಲಿ ನರಗುಂದ ಕ್ಷೇತ್ರದಿಂದ ಬಿಜೆಪಿಯಿಂದ ಲೀಲಕ್ಕ ಹಸಬಿ, 2008ರಲ್ಲಿ ಜೆಡಿಎಸ್‌ನಿಂದ ಜಯಶ್ರೀ ಹಳೆಪ್ಪನವರ, ಬಿಎಸ್‌ಪಿಯಿಂದ ಅಂಬಿಕಾ ನಾಯಕ ಮತ್ತು ಪಕ್ಷೇತರರಾಗಿ ಗೀತಾ ನಾಯಕ ಸ್ಪರ್ಧಿಸಿದ್ದೇ ಸಾಧನೆ. ಆದರೆ ಯಾರೂ ಗೆಲ್ಲಲಿಲ್ಲ.

ಈ ಬಾರಿ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ಸುಜಾತಾ ದೊಡ್ಡಮನಿ  ಕಾಂಗ್ರೆಸ್  ಆಕಾಂಕ್ಷಿಯಾಗಿದ್ದರು. ಅವರಿಗೂ ಟಿಕೆಟ್ ಕೈ ತಪ್ಪಿದೆ. ಉಪನ್ಯಾಸಕಿ ರಾಜಶ್ರೀ ಜೆಡಿಎಸ್ ಟಿಕೆಟ್‌ಗೆ ಹರಸಾಹಸ ಪಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)