ಸೋಮವಾರ, ಜನವರಿ 20, 2020
18 °C
ನೇಮಕವಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು

ಆರು ಪಕ್ಷಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸದ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಐಸಿಗೆ ಮೇಲ್ಮನವಿ ಸಲ್ಲಿಸಲಾಗಿದೆ.ರಾಜಕೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಯೊಳಗೆ ತಂದು ಜೂನ್‌ 3ರಂದು ಸಿಐಸಿ ಆದೇಶ ನೀಡಿತ್ತು. 6 ವಾರಗಳೊಳಗೆ ಪಕ್ಷಗಳು ಸಾರ್ವಜನಿಕ ಮಾಹಿತಿ ಅಧಿಕಾರಿ­ಯನ್ನು ನೇಮಿಸುವಂತೆಯೂ ನಿರ್ದೇಶನ ನೀಡಿತ್ತು. ಆದರೆ 6ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಸಿಪಿಎಂ, ಸಿಪಿಐ, ಎನ್‌ಸಿಪಿ ಮತ್ತು ಬಿಎಸ್‌ಪಿ ಈ ವರೆಗೂ ಸಿಐಸಿ ಆದೇಶ ಪಾಲಿಸಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್‌ ಅಗರ್‌ವಾಲ್‌ ಮತ್ತು ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್ (ಎಡಿಆರ್‌) ಆರೋಪಿಸಿದೆ.ಈಗಾಗಲೇ ಆರು ವಾರಗಳು ಕಳೆದಿವೆ. ರಾಜಕೀಯ ಪಕ್ಷಗಳು ಮಾಹಿತಿ ಅಧಿಕಾರಿ ನೇಮಿಸಿಲ್ಲ. ತಮ್ಮನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿರಿಸುವುದಕ್ಕೆ ಕಾನೂನು ರೂಪಿಸಲು ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಅಗರ್‌ವಾಲ್‌ ಹೇಳಿದ್ದಾರೆ.‘ಇಂತಹ ವರ್ತನೆ ನ್ಯಾಯಾಂಗ ನಿಂದನೆಗೆ ಸಮಾನ­ವಾಗಿದೆ. ರಾಜಕೀಯ ಪಕ್ಷಗಳು ಆದೇಶ ಪಾಲಿಸದಿರುವುದು ನಮ್ಮ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ’ ಎಂದು ಎಡಿಆರ್‌ ಹೇಳಿದೆ.ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿರುವ ಆದಾಯ ತೆರಿಗೆ ಮಾಹಿತಿ ಮತ್ತು ಹೇಳಿಕೆಗಳನ್ನು ವಿಶ್ಲೇಷಿಸಿ ಎಡಿಆರ್‌ ಇತ್ತೀಚೆಗೆ ವರದಿಯನ್ನು ಪ್ರಕಟಿ­ಸಿದೆ. ಈ ರಾಜಕೀಯ ಪಕ್ಷಗಳ ದೇಣಿಗೆ ಮೂಲ­ಗಳು ಅಗೋಚರವಾಗಿಯೇ ಇವೆ ಎಂಬುದು ಈ ವಿಶ್ಲೇಷಣೆ­ಯಿಂದ ತಿಳಿದು ಬರುತ್ತದೆ. ಶೇಕಡ 75ಕ್ಕೂ ಹೆಚ್ಚಿನ ಅನುದಾನದ ಮೂಲಗಳನ್ನು ಪತ್ತೆ ಮಾಡು­ವುದು ಸಾಧ್ಯವಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪ್ರತಿಕ್ರಿಯಿಸಿ (+)