ಮಂಗಳವಾರ, ಆಗಸ್ಟ್ 20, 2019
25 °C

ಆರು ಬಾರಿ ರಾಷ್ಟ್ರಧ್ವಜ ಬದಲು

Published:
Updated:

ಬಾಗಲಕೋಟೆ: ಜಿಲ್ಲೆಯಾದ್ಯಂತ ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ ಆಚರಿಸಲಾಗುತ್ತಿದ್ದು, ಧ್ವಜಾರೋಹಣ ನೀತಿ ಸಂಹಿತೆ ಪ್ರಕಾರ ಶಿಷ್ಟಾಚಾರ ಬಳಕೆ ಮತ್ತು ಜಾಗೃತಿ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಧ್ವಜಾರೋಹಣ ಮಾಡುವ ಪರಿಣತಿ ಹೆಚ್ಚಿಸುವ ತರಬೇತಿ ಶಿಬಿರಕ್ಕೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸೇವಾದಳದ ಬಿ.ಎಸ್.ಅಕ್ಕಿ, ವಿವಿಧ ಇಲಾಖೆ ಅಧಿಕಾರಿಗಳಿಗೆ ಧ್ವಜಾರೋಹಣದ ಕುರಿತು ಮಾಹಿತಿ ನೀಡಿದರು.ಸ್ವತಂತ್ರ ಭಾರತದಲ್ಲಿ ಆರು ಬಾರಿ ರಾಷ್ಟ್ರಧ್ವಜಗಳನ್ನು ಬದಲಿಸಲಾಯಿತು ಎಂದು ಅವರು ತಿಳಿಸಿದರು.1905, 1906 ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸಂಘಟನೆಗಾಗಿ ಪ್ರಥಮ ಧ್ವಜ ನಿರ್ಮಿಸಲಾಯಿತು. ಅಂದು ನಮ್ಮನ್ನು ಆಳುತ್ತಿದ್ದ ಬ್ರಿಟಿಷರು ಇದಕ್ಕೆ ಅನುಮತಿ ನೀಡಲಿಲ್ಲ. 1916 ರಲ್ಲಿ ಮತ್ತೊಂದು ಧ್ವಜವನ್ನು ಹೊರತರಲಾಯಿತು. ಆದರೆ ಹೊರತಂದ ಧ್ವಜದ ಬಣ್ಣಗಳು ಕೋಮುವಾದ ಮೂಡಿಸುತ್ತವೆ ಎಂಬ ಕಾರಣದಿಂದ ಅದನ್ನೂ ರದ್ದು ಮಾಡಲಾಯಿತು. ಅದೇ ರೀತಿ 1921 ಮತ್ತು 1931 ರಲ್ಲಿ ಮತ್ತೊಂದು ಧ್ವಜವನ್ನು ಸಿದ್ಧಪಡಿಸಿ ಹೊರತರಲಾಯಿತು. 1931 ರಲ್ಲಿ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಸಭೆಯಲ್ಲಿ ಧ್ವಜವನ್ನು ಅಂಗೀಕರಿಸಲಾಯಿತು. ಕೇಸರಿ,ಬಿಳಿ, ಹಸಿರು ಹಾಗೂ ನಡುವೆ ಚರಕ ಇರುವ ಧ್ವಜವನ್ನು ಹೊರತರಲಾಯಿತು. 1947 ಜುಲೈ 22ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತು ಎಂದರು.`ನಿರ್ದಿಷ್ಟ ಬಣ್ಣ, ಅಳತೆ, ಬಟ್ಟೆಗಳೊಂದಿಗೆ ರಾಷ್ಟ್ರಪ್ರೇಮದ ಧ್ವಜವನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಯಾವುದೇ ಧಕ್ಕೆಯಾಗದಂತೆ ಧ್ವಜಾರೋಹಣ ಮಾಡಬೇಕು' ಎಂದು ಸಲಹೆ ನೀಡಿದರು.ತಹಶೀಲ್ದಾರ್ ಕರಲಿಂಗಣ್ಣವರ, ಸೇವಾದಳದ ಬಾಗಲಕೋಟೆಯ ಶ್ರಿನಿವಾಸ ಛಬ್ಬಿ,ಯುವಜನ ಸೇವಾ ಕ್ರೀಡಾ ಇಲಾಖೆಯ ದೊಡ್ಡ ಬಸವರಾಜ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಹವಾಲ್ದಾರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post Comments (+)