ಆರು ಮದುವೆಯಾಗಿದ್ದ ವಂಚಕ ಜ್ಯೋತಿಷಿ ಸೆರೆ

7

ಆರು ಮದುವೆಯಾಗಿದ್ದ ವಂಚಕ ಜ್ಯೋತಿಷಿ ಸೆರೆ

Published:
Updated:
ಬೆಂಗಳೂರು: ರಾಜ್ಯದ ವಿವಿಧೆಡೆ ಆರು ಮಂದಿ ಮಹಿಳೆಯರನ್ನು ವಿವಾಹವಾಗಿ ವಂಚಿಸಿದ್ದ ಆರೋಪದ ಮೇಲೆ ನಿತ್ಯಾನಂದ ಶಾಸ್ತ್ರಿ ಉರುಫ್ ನಿತ್ಯಾನಂದ ಶೆಟ್ಟಿ (42) ಎಂಬ ಜ್ಯೋತಿಷಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಆತ ಮಂಗಳೂರಿನ ವಸಂತಿ, ಶಕೀಲಾ, ಕಾಸರಗೋಡಿನ ಕೋಮಲೆ, ಚಾರ್ಮಾಡಿಯ ಸುಂದರಿ, ಬೆಂಗಳೂರಿನ ಜಯಲಕ್ಷ್ಮಿ ಮತ್ತು ಮೈಸೂರಿನ ಪವಿತ್ರಾ ಎಂಬುವರನ್ನು ಮದುವೆಯಾಗಿ ವಂಚಿಸಿದ್ದ.

ನಿತ್ಯಾನಂದ ಮಂಗಳೂರಿನ ಕೋಡಿಬೈಲು ನಿವಾಸಿ ಜಾರಪ್ಪ ಪೂಜಾರಿ ಎಂಬುವರ ಪುತ್ರ. ಮಂಗಳೂರಿನ ಸೇಂಟ್ ಅಲೋಷಿಯಸ್ ಶಾಲೆಯಲ್ಲಿ ಏಳನೇ ತರಗತಿವರೆಗೆ ಓದಿದ್ದ ಆತ ಶಾಲೆ ಬಿಟ್ಟು ಸಹೋದರನ ಜತೆ  ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ. ಪೋಷಕರು ಮೊದಲು ವಸಂತಿ ಎಂಬುವರ ಜತೆ ಆತನ ಮದುವೆ ಮಾಡಿಸಿದ್ದರು. ದುಶ್ಚಟಗಳನ್ನು ಮೈಗೂಡಿಸಿಕೊಂಡಿದ್ದ ನಿತ್ಯಾನಂದ ವಿವಾಹವಾದ ಮೂರು ತಿಂಗಳಲ್ಲೇ ಮೊದಲ ಪತ್ನಿಯನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದ. ಆ ನಂತರ ಪೋಷಕರು ಆತನನ್ನು ಮನೆಗೆ ಸೇರಿಸಿರಲಿಲ್ಲ.

ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ  ಆರಂಭಿಸಿದ ಆತ ಕಬ್ಬನ್ ಪಾರ್ಕ್‌ನಲ್ಲಿ ಶಾಸ್ತ್ರ ಹೇಳುತ್ತಿದ್ದ ರಂಗರಾಜು ಎಂಬುವರನ್ನು ಪರಿಚಯಿಸಿಕೊಂಡು ಜ್ಯೋತಿಷ ಹೇಳುವುದನ್ನು ಕಲಿತ. ಬಳಿಕ ತನ್ನ ಹೆಸರನ್ನು ನಿತ್ಯಾನಂದ ಶಾಸ್ತ್ರಿ ಎಂದು ಬದಲಾಯಿಸಿಕೊಂಡ.

ನಂತರ ನಿತ್ಯಾನಂದನ ಸೋದರಿ ಹೇಮಾವತಿ ಪೂಜಾರಿ ಅವರು ಕಾಸರಗೋಡಿನ ಕೋಮಲೆ ಎಂಬುವರೊಂದಿಗೆ ಆತನ ಎರಡನೇ ವಿವಾಹ ಮಾಡಿಸಿದರು. ಎರಡನೇ ಪತ್ನಿಯನ್ನು ಬಿಟ್ಟ ಆತ, ಈ ಮೊದಲು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ರಿಚರ್ಡ್ ಎಂಬುವರಿಗೆ ಸುಳ್ಳು ಹೇಳಿ ಸುಂದರಿ ಎಂಬುವರನ್ನು ಮದುವೆಯಾದ. ಕೆಲ ತಿಂಗಳಗಳ ನಂತರ ಆತ ಆಕೆಯಿಂದಲೂ ದೂರವಾದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿತ್ಯಾನಂದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ನೆಲೆಸಿದ್ದ ವೇಳೆಯಲ್ಲಿ ಮನೆಯ ಸಮೀಪವೇ ಸ್ಕ್ರೀನ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಜಯಲಕ್ಷ್ಮಿ ಎಂಬುವರನ್ನು ಪರಿಚಯಿಸಿಕೊಂಡ, ಆಕೆಗೆ ಸುಳ್ಳು ಹೇಳಿ ಮದುವೆಯಾಗಿ ಒಂದು ವರ್ಷ ಉಲ್ಲಾಳ ಉಪನಗರದಲ್ಲಿ ಸಂಸಾರ ನಡೆಸಿದ್ದ.

ನಿತ್ಯಾನಂದನ ದುಶ್ಚಟಗಳನ್ನು ಬಿಡಿಸುವ ಸಲುವಾಗಿ ಜಯಲಕ್ಷ್ಮಿಯ ತಾಯಿ ಆತನನ್ನು ಮೈಸೂರಿನ ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆತ ಆ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕೊಟ್ಟಿದ್ದ. ಇದರಿಂದ ನಿತ್ಯಾನಂದನನ್ನು ನಂಬಿದ ಆ ದೇವಸ್ಥಾನದ ಅರ್ಚಕರ ತಾಯಿ ಆತನಿಗೆ ಪವಿತ್ರಾ ಎಂಬಾಕೆಯೊಂದಿಗೆ ಮದುವೆ ಮಾಡಿಸಿದರು.

ಅಂತೆಯೇ ಮಂಗಳೂರಿನಲ್ಲಿ ಪರಿಚಯವಾದ ಶಕೀಲಾ ಎಂಬುವರನ್ನು ಆತ ಮದುವೆಯಾಗಿದ್ದ. ಶಕೀಲಾಗೆ ಒಂದು ವರ್ಷದ ಮಗಳಿದ್ದಾಳೆ. ಸದ್ಯ ಆತ ಪವಿತ್ರಾ ಅವರೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಂಚನೆ: ಜ್ಯೋತಿಷ ಹೇಳುವ ನೆಪದಲ್ಲಿ ಶ್ರೀಮಂತರನ್ನು ಪರಿಚಯಿಸಿಕೊಳ್ಳುತ್ತಿದ್ದ ನಿತ್ಯಾನಂದ ‘ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಇದೆ. ನನಗೆ ಕಪ್ಪು ಹಣ ಹೊಂದಿರುವವರ ಪರಿಚಯವಿದ್ದು, ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇನೆ’ ಎಂದು ನಂಬಿಸಿ ಕಮಿಷನ್ ಪಡೆದು ವಂಚಿಸುತ್ತಿದ್ದ. ಇದೇ ರೀತಿ 2008ರಲ್ಲಿ ಆರ್.ಟಿ.ನಗರದ ವಿಜಯಾ ಸರಸ್ವತಿ ಎಂಬುವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ರೂ 20 ಲಕ್ಷ ಹಣ ಪಡೆದು ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯದ ವಿವಿಧೆಡೆ ನಿತ್ಯಾನಂದ ಜನರನ್ನು ಪರಿಚಯಿಸಿಕೊಂಡು ‘ನಿಮ್ಮ ಮನೆಯಲ್ಲಿ ಶಾಂತಿ ಮಾಡಿಸಬೇಕು, ಲಕ್ಷ್ಮಿ ಸ್ವರಮಾಲೆ ಪೂಜೆ ಮಾಡಿಸಬೇಕು’ ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ. ಜನರ ಸಮಸ್ಯೆಗಳು ಪರಿಹಾರವಾಗದಿದ್ದಾಗ ಆತ ಕಪ್ಪು ಹಣ ಇರುವವರ ಬಳಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಮತ್ತು ಹಣವನ್ನು ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಕಮಿಷನ್ ರೂಪದಲ್ಲಿ ರೂ 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾನೆ. ಈತನ ವಿರುದ್ಧ ಮಂಗಳೂರು ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಚಾಮರಾಜಪೇಟೆಯ ಮಧುಸೂದನ್ ಎಂಬುವರಿಗೆ ಇದೇ ರೀತಿ ಸಾಲ ಕೊಡಿಸುವುದಾಗಿ ನಂಬಿಸಿ ರೂ 3.40 ಲಕ್ಷ ಪಡೆದು ತಲೆಮರೆಸಿಕೊಂಡಿದ್ದ. ಈ ಬಗ್ಗೆ ಮಧುಸೂದನ್ ದೂರು ಕೊಟ್ಟಿದ್ದರು. ಸ್ವಲ್ವ ದಿನಗಳ ಬಳಿಕ ನಿತ್ಯಾನಂದನೇ ಅವರಿಗೆ ಕರೆ ಮಾಡಿ 15 ಸಾವಿರ ಕೊಟ್ಟರೆ 10 ಲಕ್ಷ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದ. ಆ ಬಗ್ಗೆ ಮಾಹಿತಿ ಪಡೆದು ಆತನನ್ನು ಬಂಧಿಸಲಾಯಿತು’ ಎಂದು ಇನ್‌ಸ್ಪೆಕ್ಟರ್ ಬಿ.ಜಿ.ರತ್ನಾಕರ್ ತಿಳಿಸಿದರು.

ನಿತ್ಯಾನಂದ ಶಾಸ್ತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry