ಗುರುವಾರ , ನವೆಂಬರ್ 14, 2019
19 °C

ಆರು ವರ್ಷ ಕಳೆದರೂ ನೀರು ಬರಲಿಲ್ಲ...!

Published:
Updated:

ಕಾರವಾರ: ಆ ವೃದ್ಧೆಯ ವಯಸ್ಸು ಬರೊಬ್ಬರಿ 80 ವರ್ಷ. ಪಾದಗಳು ಊದಿಕೊಂಡಿದ್ದರಿಂದ ಪಟಪಟನೆ ಹೆಜ್ಜೆಹಾಕಿ ನಡೆಯುವಷ್ಟು ಶಕ್ತಿ ಆಕೆಗಿಲ್ಲ. ಆದರೂ ಕುಂಟುತ್ತಾ ಸಾಗಿ ತನಗಾದ ಅನ್ಯಾಯ ಖಂಡಿಸಿ ಅಜ್ಜಿ ಗುರುವಾರ ತಾಲ್ಲೂಕಿನ ಅಸ್ನೋಟಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದಳು.ತಾಲ್ಲೂಕಿನ ಅಸ್ನೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ರಮಾಬಾಯಿ ಆಚಾರಿ ಪಂಚಾಯಿತಿ ಯಲ್ಲಿ ಠೇವಣಿಯಿಟ್ಟು ಆರು ವರ್ಷ ಕಳೆದು ಕಚೇರಿಗಳನ್ನು ಅಲೆದು ಸಾಕಾಗಿ ಇನ್ನಾದರೂ ಕುಡಿಯಲು ನೀರು ಕೊಡಿ ಎಂದು ಪಂಚಾಯಿತಿ ಎದುರು ಹಠ ಹಿಡಿದು ಕುಳಿತಿದ್ದಳು.ಜಲ ನಿರ್ಮಲ ಯೋಜನೆಯಡಿ ನೀರಿನ ಸಂಪರ್ಕ ಕೊಡಲಾಗುವುದು ಎಂದು ಅಸ್ನೋಟಿ ಗ್ರಾಮ ಪಂಚಾಯಿತಿ ಆರು ವರ್ಷದ ಹಿಂದೆ ತಿಳಿಸಿತ್ತು. ಈ ಯೋಜನೆಯಡಿ ನೀರಿನ ಸಂಪರ್ಕ ಪಡೆಯಲು ರಮಾಬಾಯಿ ಆಚಾರಿ 4ನೇ ಏಪ್ರಿಲ್ 2006ರಲ್ಲಿ ರೂ. 1000 ಠೇವಣಿ ಇಟ್ಟು ಪಾವತಿ ಪಡೆದಿದ್ದಳು.ಠೇವಣಿಯಿಟ್ಟ ಗ್ರಾಮದ ಕೆಲವರಿಗೆ ನೀರಿನ ಸಂಪರ್ಕವನ್ನು ಗ್ರಾ.ಪಂ. ನೀಡಿತು. ಆದರೆ ರಮಾಬಾಯಿ ಮನೆಗೆ ಮಾತ್ರ ನೀರಿನ ಸಂಪರ್ಕ ಕಲ್ಪಿಸಿರಲಿಲ್ಲ. ಈ ಬಗ್ಗೆ ಕೇಳಿದಾಗಲೆಲ್ಲ ಇಂದೋ, ನಾಳೆ ಎಂದು ಪಂಚಾಯಿತಿ ಅಧಿಕಾರಿಗಳು ದಿನ ದೂಡಿದರು.ಹೀಗೆ ವರ್ಷ ಕಳೆಯಿತು. ವಿಷಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರು. ಆದರೂ ಪರಿಹಾರ ಸಿಗಲಿಲ್ಲ. ನೀರಿನ ಸಂಪರ್ಕ ಕೊಡಲು ಆಗುವುದಿಲ್ಲ ಎನ್ನುವುದನ್ನು ಲಿಖಿತವಾಗಿ ಕೊಡಿ ಎಂದು ರಮಾಬಾಯಿ ಮನವಿ ಮಾಡಿದರು ಅದಕ್ಕೂ ಪಂಚಾಯಿತಿ ಅಧಿಕಾರಿಗಳು ಸಿದ್ಧರಿರಲಿಲ್ಲ.ಗ್ರಾ. ಪಂ.ನವರು ಪರಿಹಾರ ನೀಡದೇ ಇದ್ದಾಗ ಜಿಲ್ಲಾ ಪಂಚಾಯಿತಿಗೆ ಹೋಗಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದರು. ಸಮಸ್ಯೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿ.ಪಂ. ಮೇಲಾಧಿಕಾರಿಗಳು ಪಂಚಾಯಿತಿಗೆ ಪತ್ರ ಬರೆದರು. ಆದರೂ ಗ್ರಾ.ಪಂ. ಯಾವುದೇ ಕ್ರಮ ಕೈಗೊಂಡಿರಲಿಲ್ಲ.ನಂತರ ಸಮಸ್ಯೆಯನ್ನು ರಮಾಬಾಯಿ ಪ್ರಾದೇಶಿಕ ಆಯುಕ್ತರಿಗೆ ತಿಳಿಸಿದರು. ಅವರು ಜಿ.ಪಂ.ಗೆ ಪತ್ರಬರೆದು ಸಮಸ್ಯೆ ಬಗೆಹರಿಸಲು ಸೂಚಿಸಿದರು. ಹೀಗಾಗಿ ರಮಾಬಾಯಿ ನೀರಿಗಾಗಿ ಕಚೇರಿಗಳನ್ನು ಅಲೆದರೇ ಹೊರತು ಆರು ವರ್ಷ ಕಳೆದರೂ ನೀರಿನ ಸಂಪರ್ಕ ಮಾತ್ರ ಸಿಗಲಿಲ್ಲ.ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾನಸಿಕವಾಗಿ ನೊಂದಿರುವ ರಮಾಬಾಯಿ ಆಚಾರಿ ತನ್ನ ಕೊನೆಯ ಪ್ರಯತ್ನವೆಂಬಂತೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.`ನಾನು ಕೊಟ್ಟ ಮನವಿಯನ್ನು ಗ್ರಾ.ಪಂ.ನವರು ಕಸದ ಬುಟ್ಟಿಗೆ ಎಸೆದು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ. ನನ್ನ ಜೀವನಕ್ಕೇನಾದರೂ ಅಪಾಯವಾದರೆ ಅದಕ್ಕೆ ಗ್ರಾಮ ಪಂಚಾಯಿತಿಯವರೇ ಹೊಣೆ~ ಎನ್ನುತ್ತಾರೆ ರಮಾಬಾಯಿ ಆಚಾರಿ.

 

ಪ್ರತಿಕ್ರಿಯಿಸಿ (+)