ಭಾನುವಾರ, ಮಾರ್ಚ್ 26, 2023
31 °C

ಆರು ವಿದ್ಯಾರ್ಥಿಗಳ ಹೆಸರೇ ತಪ್ಪು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ವಿದ್ಯಾರ್ಥಿಗಳ ಹೆಸರೇ ತಪ್ಪು!

ಚನ್ನರಾಯಪಟ್ಟಣ:  ದಂಡಿಗನಹಳ್ಳಿ ಹೋಬಳಿ ಉದಯಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯರು ಮತ್ತು ಸಿಬ್ಬಂದಿ ಕರ್ತವ್ಯ ಲೋಪದಿಂದ ಪದವಿ ಅಂಕಪಟ್ಟಿಯಲ್ಲಿ ಆರು ವಿದ್ಯಾರ್ಥಿಗಳ ಹೆಸರುಗಳು ತಪ್ಪಾಗಿ ನಮೂದಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗುವ ಸ್ಥಿತಿ ತಲುಪಿದೆ.



ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಎ.ಎನ್‌. ದಿಲೀಪಕುಮಾರ್‌, ಸಿ.ಕೆ.ಮಂಜುನಾಥ್‌, ಜಿ. ಮಂಜುನಾಥ, ಯು.ವಿ.ರಕ್ಷಿತ್‌, ಎಸ್‌. ಮೋಹನಕುಮಾರ್‌, ಕಾಲೇಜು ವತಿಯಿಂದ ತಮಗಾದ ಅನ್ಯಾಯವನ್ನು ವಿವರಿಸಿದರು. (ಪತ್ರಿಕಾಗೋಷ್ಠಿಗೆ ಮತ್ತೊಬ್ಬ ವಿದ್ಯಾರ್ಥಿ ವಿ. ಮಂಜುನಾಥ ಬಂದಿರಲಿಲ್ಲ.)



2013–14ನೇ ಸಾಲಿಗೆ ಐದು ವಿದ್ಯಾರ್ಥಿಗಳು ಬಿಬಿಎಂ, ಒಬ್ಬ ವಿದ್ಯಾರ್ಥಿ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದೆವು. ಮೊದಲನೇ ಸೆಮಿಸ್ಟರ್‌ ಪ್ರವೇಶ ಪತ್ರ ಬಂದಾಗ ನಮಗೆಲ್ಲಾ ಆಶ್ಚರ್ಯ ಕಾದಿತ್ತು. ಆರು ವಿದ್ಯಾರ್ಥಿಗಳ ಹೆಸರುಗಳು ತಪ್ಪಾಗಿ ನಮೂದಾಗಿತ್ತು. ಆ ಸಂಬಂಧ  ಪ್ರಾಂಶುಪಾಲರ ಜೊತೆ ಚರ್ಚಿಸಿದಾಗ, ಆಗಿರುವ ಲೋಪ ಸರಿಪಡಿಸಲಾಗುವುದು. ಅರ್ಜಿ  ಸಲ್ಲಿಸುವಂತೆ ಹೇಳಿದರು. ಅದರಂತೆ ಅರ್ಜಿ ಸಲ್ಲಿಸಿದರೂ ಅಂಕಪಟ್ಟಿ ಬಂದಾಗ ಯಾವುದೇ ಬದಲಾವಣೆಯಾಗಿರಲಿಲ್ಲ ಎಂದು ಹೆಸರು ತಪ್ಪಾಗಿ ಪ್ರಕಟವಾಗಿರುವ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.



ತಪ್ಪು ಸರಿಪಡಿಸುವುದಾಗಿ ಹೇಳಿ ಮತ್ತೊಮ್ಮೆ ಅರ್ಜಿ ಬರೆಸಿಕೊಂಡರು, ಆಗಲು ಹೆಸರು ತಿದ್ದುಪಡಿಯಾಗಿಲ್ಲ. ಧಾರಾವಾಹಿಯ ರೀತಿಯಲ್ಲಿ ಮೂರು ವರ್ಷದ ಐದು ಸೆಮಿಸ್ಟರ್‌ ವರೆಗೆ ಎಲ್ಲ ಅಂಕಪಟ್ಟಿಯಲ್ಲಿ ಆರು ವಿದ್ಯಾರ್ಥಿಗಳ ಹೆಸರುಗಳು ತಪ್ಪಾಗಿವೆ. ಪ್ರತಿ ಸೆಮಿಸ್ಟರ್‌ ಫಲಿತಾಂಶ ಪ್ರಕಟವಾದಾಗಲೆಲ್ಲ. ಅರ್ಜಿ ಬರೆದುಕೊಟ್ಟಿದ್ದೇವೆ. ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಅರ್ಜಿ ಸಲ್ಲಿಸಿದ್ದಕ್ಕೆ ಸ್ವೀಕೃತಿ ಪತ್ರ ಕೊಟ್ಟಿಲ್ಲ. ಸಮಸ್ಯೆ ನಿವಾರಣೆ ಮಾಡುವಂತೆ ಮನವಿ ಮಾಡಿ ಸಾಕಾಗಿ ಹೋಗಿದೆ ಎಂದು ಆಪಾದಿಸಿದರು.



ನಂತರ ಮೈಸೂರಿಗೆ ತೆರಳಿ ಪರೀಕ್ಷಾಂಗ ಕುಲಸಚಿವರನ್ನು ಭೇಟಿಯಾಗಿ ತಮಗಾದ ನೋವು ಹೇಳಿಕೊಂಡೆವು. ಕಾಲೇಜು ವತಿಯಿಂದ ತಪ್ಪಾಗಿರುವುದರಿಂದ, ಕಾಲೇಜು ಮೂಲಕ ಎಲ್ಲ ದಾಖಲೆಗಳನ್ನು ಕಳುಹಿಸಿ ಕೊಡಬೇಕು ಎಂದು ತಿಳಿಸಿದರು. ಕಾಲೇಜಿನಲ್ಲಿ ವಿಚಾರಿಸಿದಾಗ ಹೆಸರು ತಿದ್ದುಪಡಿ ಮಾಡಲು ಪ್ರತಿ ಅಂಕಪಟ್ಟಿಗೆ ತಲಾ ₹ 315 ಪಾವತಿಸಬೇಕು ಎಂದರು. ನಮ್ಮದಲ್ಲದ ತಪ್ಪಿಗೆ ಏಕೆ ಶುಲ್ಕ ಭರಿಸ ಬೇಕು ಎಂಬ ಪ್ರಶ್ನೆ ವಿದ್ಯಾರ್ಥಿಗಳದು.



ಆರು ವಿದ್ಯಾರ್ಥಿಗಳ ಶುಲ್ಕ ಅಂದಾಜು 16 ಸಾವಿರ ಆಗುತ್ತದೆ.  ಬಡವರಾದ ನಾವು ಇಷ್ಟು ಹಣವನ್ನು ಭರಿಸಲು ಆಗುವುದಿಲ್ಲ. ಪ್ರಾಂಶು

ಪಾಲರು, ಸಿಬ್ಬಂದಿ ತಪ್ಪು ಎಸಗಿದ್ದಾರೆ. ಆದ್ದರಿಂದ ಅವರೇ ಶುಲ್ಕ ಭರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಇನ್ನೂ 10–15 ದಿನದಲ್ಲಿ ಆರನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟವಾಗಲಿದೆ. ಅಷ್ಟರಲ್ಲಿ ಅಂಕಪಟ್ಟಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ ಉನ್ನತ ವ್ಯಾಸಂಗದ ಕನಸು ಕನಸಾಗಿಯೇ ಉಳಿಯುತ್ತದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಎಂದು ನೋವು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.