ಶುಕ್ರವಾರ, ಮಾರ್ಚ್ 5, 2021
30 °C
ಕಾನ್‌ಸ್ಟೆಬಲ್‌ಗೆ ಇರಿದ ಅಸ್ಗರ್ ತೆಲಂಗಾಣ ಎಟಿಎಸ್ ವಶಕ್ಕೆ

ಆರು ಶಂಕಿತರು ದೆಹಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ಶಂಕಿತರು ದೆಹಲಿಗೆ

ಬೆಂಗಳೂರು: ರಾಜ್ಯದ ವಿವಿಧೆಡೆ ಸೆರೆ ಸಿಕ್ಕ ಆರು ಮಂದಿ ಶಂಕಿತರನ್ನು ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಭಾನುವಾರ ಬೆಳಿಗ್ಗೆ ದೆಹಲಿಗೆ ಕರೆದೊಯ್ದರು.‘ಮಡಿವಾಳದ ವಿಶೇಷ ವಿಚಾರಣಾ ಘಟಕದಲ್ಲಿದ್ದ ಶಂಕಿತರನ್ನು, ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಳಿಗ್ಗೆ 5 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಕರೆದೊಯ್ಯಲಾಯಿತು. 22  ಅಧಿಕಾರಿಗಳ ಎನ್‌ಐಎ ತಂಡ ಕೂಡ ಅವರ ಜತೆ ಇತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಸೆರೆ ಸಿಕ್ಕಿರುವ ಎಲ್ಲರೂ ಹಲವು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದ ವಿಷಯವು ಪ್ರತ್ಯೇಕ ವಿಚಾರಣೆಗಳಿಂದ ತಿಳಿದು ಬಂದಿದೆ. ಹೀಗಾಗಿ ಎಲ್ಲರನ್ನೂ ಒಂದೆಡೆ ಸೇರಿಸಿ ಮುಖಾಮುಖಿ ವಿಚಾರಣೆ ನಡೆಸಲು ನಿರ್ಧರಿಸಿರುವ ಎನ್‌ಐಎ, ಇದಕ್ಕೆ ದೆಹಲಿಯಲ್ಲಿರುವ ತನ್ನ ಕಚೇರಿಯನ್ನು ಆಯ್ಕೆ ಮಾಡಿಕೊಂಡಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ರಾಜ್ಯದಲ್ಲಿ ನಜ್ಮುಲ್ ಹುದಾ, ಸೈಯದ್ ಮುಜಾಹಿದ್, ಮಹಮದ್ ಅಫ್ಜಲ್, ಆಸಿಫ್ ಅಲಿ, ಸುಹೇಲ್ ಅಹಮದ್ ಹಾಗೂ ಮಹಮದ್ ಅಬ್ದುಲ್ ಅಹದ್ ಅವರನ್ನು ಎನ್‌ಐಎ ಬಂಧಿಸಿದೆ. ಎರಡು ದಿನಗಳಿಂದ ಮಡಿವಾಳದಲ್ಲಿ ಅವರನ್ನು ವಿಚಾರಣೆ ನಡೆಸಿದ ತಂಡ, ಬಂಧಿತರನ್ನು ಶನಿವಾರ ನ್ಯಾಯಾಂಗಕ್ಕೆ ಹಾಜರಪಡಿಸಿ ‘ಟ್ರಾನ್ಸಿಟ್ ವಾರಂಟ್’ ಪಡೆದುಕೊಂಡಿತ್ತು.ಅಸ್ಗರ್‌ಗೆ ನಂಟಿಲ್ಲ: ‘ಪರಪ್ಪನ ಅಗ್ರಹಾರ ಸಮೀಪದ ದೊಡ್ಡನಾಗಮಂಗಲದಲ್ಲಿ ಶನಿವಾರ ಸಂಜೆ ತೆಲಂಗಾಣ ಎಸ್‌ಐಟಿಗೆ ಸೆರೆ ಸಿಕ್ಕ ಅಸ್ಗರ್ ಅಲಿಯಾಸ್ ಜಾವಿದ್ ರಫೀಕ್‌ಗೂ (30) ಈ ಶಂಕಿತರಿಗೂ ಸಂಪರ್ಕವಿಲ್ಲ. ಈತ 2008ರ ಅಹಮದಾಬಾದ್‌ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದವನು’ ಎಂದು ಎನ್‌ಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಅಸ್ಗರ್‌  ಸಕ್ರಿಯನಾಗಿದ್ದ. ಅಹಮದಾಬಾದ್‌ನಲ್ಲಿ ವಿಧ್ವಂಸಕ ಕೃತ್ಯ ಎಸಗಿ ಭೂಗತನಾಗಿದ್ದ ಆತನಿಗಾಗಿ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಶೋಧ ಮುಂದುವರಿಸಿದ್ದವು. ‘ಬೆಂಗಳೂರಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಆತ, ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ‘ಜಾವಿದ್ ರಫೀಕ್’ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯರ ಜತೆ ಸಂಪರ್ಕದಲ್ಲಿದ್ದ. ಅಲ್ಲದೆ, ಆಗಾಗ್ಗೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲೆಲ್ಲ ಸಂಘಟನೆ ವಿಸ್ತರಿಸುವ ಕೆಲಸ ಮಾಡುತ್ತಿದ್ದ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

*

ದಂಪತಿ ತನಿಖೆ

ಅಸ್ಗರ್ ಹಾಗೂ ಆತನ ಪತ್ನಿ ಯಾಸ್ಮಿನ್‌ಳನ್ನು ಎನ್‌ಐಎ ವಿಶೇಷ ನ್ಯಾಯಾಲಯ 15 ದಿನ ತೆಲಂಗಾಣ ಎಟಿಎಸ್ ವಶಕ್ಕೆ ಒಪ್ಪಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.