ಆರು ಹಿರಿಯ ನಾಗರಿಕರಿಗೆ ಸನ್ಮಾನ

7

ಆರು ಹಿರಿಯ ನಾಗರಿಕರಿಗೆ ಸನ್ಮಾನ

Published:
Updated:

ಬೆಂಗಳೂರು: ಅಕ್ಟೋಬರ್‌ 1ರಂದು ನಡೆಯುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿ ಗಣ್ಯರನ್ನು ಸನ್ಮಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಅಂದು ಪುರಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.ಕೋಲಾರ ಜಿಲ್ಲೆಯ ಮದ್ದೇರಿಯ ಮುನಿರೆಡ್ಡಿ (ಕಲೆ), ಬೆಳಗಾವಿ ಜಿಲ್ಲೆಯ ಹುಲ್ಲೆಪ್ಪನವರಮಠದ ಶಾಂತಾದೇವಿ (ಶಿಕ್ಷಣ), ಉಡುಪಿ ತಾಲ್ಲೂಕಿನ ಕಾಪು ವಿಶ್ವನಾಥ ಶೆಟ್ಟಿ (ಸಮಾಜಸೇವೆ), ವಿಜಾಪುರದ ವೈಜನಾಥ ಓಂಕಾರಪ್ಪ ಸಮಗೊಂಡ (ಕ್ರೀಡೆ), ಹುಬ್ಬಳ್ಳಿಯ ಬಸವರಾಜ ಗೂಳಪ್ಪ ಭೂಸರೆಡ್ಡಿ (ಸಾಹಿತ್ಯ), ಬೆಂಗಳೂರಿನ ಎಚ್‌.ಕೆ. ವಾಸು­ದೇವರೆಡ್ಡಿ (ಕಾನೂನು) ಅವರನ್ನು ಸನ್ಮಾನಿಸಲಾಗುವುದು.ಸನ್ಮಾನಿತರಿಗೆ ₨10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು ಎಂದರು.ಹಿರಿಯ ನಾಗರಿಕರ ಸಲುವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಗೆದ್ದ­ವರಿಗೂ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಕೇಂದ್ರ ಪುರಸ್ಕಾರ: ಪಾವಗಡ ತಾಲ್ಲೂಕಿನ ವೆಂಕಟಾಪುರ ಸಮೀಪದ ಕೃಷ್ಣಾಪುರದ ಸೂಲಿಗಿತ್ತಿ ನರಸಮ್ಮ ಅವರಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಸಂದಿದೆ. ಪ್ರಶಸ್ತಿ ಮೊತ್ತ ₨ 2.5 ಲಕ್ಷ ನಗದು. ಅ.1ರಂದು ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಗ್ರಾಮೀಣ ಭಾಗದಲ್ಲಿ ಹೆರಿಗೆ ಮಾಡಿಸುವ ಕೆಲಸದಲ್ಲಿ ನಿರತರಾಗಿದ್ದ ಇವರು ಸೂಲಿಗಿತ್ತಿ ಎಂದೇ ಪ್ರಸಿದ್ಧಿ. ಇದುವರೆಗೂ 1,500 ಕ್ಕೂ ಹೆಚ್ಚು  ಹೆರಿಗೆ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 91 ವರ್ಷದ ನರಸಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಉಮಾಶ್ರೀ ಹೇಳಿದರು.ರಾಜ್ಯೋತ್ಸವ ಸಮಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಲಾಗಿದೆ. ಸಚಿವರಾದ ಎಚ್‌.ಕೆ.­ಪಾಟೀಲ್‌, ಟಿ.ಬಿ.ಜಯ­ಚಂದ್ರ, ವಿ.ಶ್ರೀನಿ­ವಾಸ ಪ್ರಸಾದ್‌, ಕೆ.ಜೆ.ಜಾರ್ಜ್, ಡಾ.ಎಚ್‌. ಸಿ.ಮಹದೇವಪ್ಪ, ಉಮಾಶ್ರೀ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಸೇರಿ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಅಕಾಡೆಮಿಗಳ ಅಧ್ಯಕ್ಷರು ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಸಿದ್ದರಾಮಪ್ಪ ತಳವಾರ್ ಆದೇಶ ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry