ಸೋಮವಾರ, ಡಿಸೆಂಬರ್ 9, 2019
20 °C
ಹವಾಮಾನ ಶೃಂಗಸಭೆ

ಆರೋಗ್ಯಕರ ಭೂಮಿ ಬದ್ಧತೆ ಇರಲಿ

Published:
Updated:

ಸುಮಾರು 11,500 ವರ್ಷಗಳ ಹಿಂದೆ ಭೂಮಿಯು ‘ಹೋಲೊಸೆನ್‌ ಎಪೋಕ್’ (Holocene epoch) ಅಥವಾ ನವ ಯುಗ  ಎಂಬ ದೀರ್ಘಕಾಲದ ಬೆಚ್ಚನೆಯ ಯುಗಕ್ಕೆ ಕಾಲಿಟ್ಟಿತು. ಅತಿ ದೀರ್ಘಕಾಲದ ಹಿಮಯುಗದಿಂದ ಹೊರಬಿದ್ದ ನಂತರ ಅತಿ ಬಿಸಿಯೂ ಅಲ್ಲದ, ಅತಿ ತಣ್ಣಗೂ ಅಲ್ಲದ ಸ್ಥಿರ ಹವಾಮಾನ ಕಲ್ಪಿಸಿದ ಸಾವಿರ ವರ್ಷಗಳ ‘ಹೋಲೊಸೆನ್‌’ ಯುಗ ಇನ್ನೂ ನಾಗರಿಕತೆಗೆ ಕಾಲಿಡದ  ಮಾನವರಿಗೆ ವರದಾನವಾಗಿ ಪರಿಣಮಿಸಿತು.ಈ ಸ್ಥಿರ ವಾತಾವರಣದಿಂದಾಗಿ ಮಾನವ ನಾಗರಿಕತೆ ಜಗದಗಲಕ್ಕೂ ವಿಸ್ತರಿಸಿತು. ಆದಿಮ ಮಾನವರಿಗೆ ಪ್ರಾಣಿಗಳನ್ನು ಪಳಗಿಸಲು, ಬೇಟೆಗಾರಿಕೆಯಿಂದ ಕೃಷಿಯತ್ತ ನೆಗೆಯಲು, ಹಳ್ಳಿಗಳು ಮತ್ತು ನಗರಗಳನ್ನು ಕಟ್ಟಲು ಇದು ಸಹಕಾರಿಯಾಯಿತು. ಈ ಸ್ಥಿರ ಹವಾಮಾನದ ಸ್ವರ್ಣಯುಗ ಈ ಅಂತ್ಯವಾಗುವ ಹೊತ್ತು ಬಂದಿದೆ. ತಾಪಮಾನ ಏರಿಕೆಯ ತೂಗುಗತ್ತಿ ನಮ್ಮ ಮೇಲೆ ನೇತಾಡುತ್ತಿದೆ. 1950ರಿಂದ ಆರ್ಥಿಕ ಹಾಗೂ ಕೈಗಾರಿಕಾ ಪ್ರಗತಿಯತ್ತ ದಾಪುಗಾಲು ಹಾಕುತ್ತ ಸಾಗಿದ್ದು, ಪ್ರಕೃತಿಯ ಮೇಲೆ ಗಾಢ ದುಷ್ಪರಿಣಾಮ ಬೀರಿದೆ. ಕೈಗಾರಿಕಾ ಕ್ರಾಂತಿಯಿಂದ ಪ್ರಕೃತಿಯ ಮೇಲಾಗಿರುವ ಪರಿಣಾಮವನ್ನು ನಾವು ಸ್ಥಳೀಯ ಮಟ್ಟದಲ್ಲಿ ಮಾಲಿನ್ಯ ಹಾಗೂ ಪರಿಸರ ನಾಶದ ಮೂಲಕ ಗುರುತಿಸಬಹುದು. ಈ ದುಸ್ಥಿತಿಗೆ ನಾವೇ  ಕಾರಣರಾಗಿದ್ದೇವೆ ಎಂಬುದನ್ನೂ ನಾವು ಇಲ್ಲಿ ಒಪ್ಪಿಕೊಳ್ಳುತ್ತೇವೆ. ಆದರೆ, ಜಾಗತಿಕ ಮಟ್ಟದಲ್ಲಿ ಮತ್ತಷ್ಟು ದೊಡ್ಡ ಸಮಸ್ಯೆ ಸೃಷ್ಟಿಸಿಕೊಂಡಿರುವ ನಾವು ಅದರ ಹೊಣೆ ಹೊತ್ತುಕೊಳ್ಳಲು ನಿರಾಕರಿಸುತ್ತೇವೆ.ಜಗತ್ತಿನಾದ್ಯಂತ ಗ್ರಾಮೀಣ ಭಾಗದಲ್ಲಿ, ನಗರಗಳಲ್ಲಿ ಮತ್ತು ಕೈಗಾರಿಕಾ ವಲಯಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಕಲ್ಲಿದ್ದಲನ್ನು ಉರಿಸುತ್ತ, ಬೃಹತ್‌ ಪ್ರಮಾಣದಲ್ಲಿ ಜಾನುವಾರು ಹಾಗೂ ಕುಕ್ಕುಟಗಳನ್ನು ಸಾಕುತ್ತ ಇಂಗಾಲದ ಡೈಆಕ್ಸೈಡ್‌, ಮಿಥೇನ್‌ನಂತಹ ಹಸಿರುಮನೆ ಅನಿಲಗಳನ್ನು ಸತತವಾಗಿ ವಾತಾವರಣಕ್ಕೆ ಕಳುಹಿಸುತ್ತಿದ್ದೇವೆ.ಭೂಮಿಯ ಸುತ್ತಲೂ ಕವಚದಂತೆ ವರ್ತಿಸುವ ಈ ಅನಿಲಗಳು ಶಾಖವನ್ನು ಹಿಡಿದಿಟ್ಟುಕೊಂಡು ನಿಧಾನಕ್ಕೆ ಉಷ್ಣಾಂಶ ಏರಿಕೆಗೆ ಕಾರಣವಾಗುತ್ತವೆ.

ಭೂಮಿ ಬಿಸಿಯಾದಂತೆ ಧ್ರುವಗಳಲ್ಲಿ ಹಿಮಕವಚಗಳು, ನೀರ್ಗಲ್ಲುಗಳು ಕರಗಿ, ಭಾರಿ ಪ್ರಮಾಣದ ನೀರು ಸಾಗರಗಳಿಗೆ ಹರಿದುಬರುತ್ತದೆ. ಇದನ್ನು ತಡೆಯದಿದ್ದಲ್ಲಿ ಕರಾವಳಿ ತೀರದ ಬಹುತೇಕ ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಮಾಲ್ಡೀವ್ಸ್‌ನಂತಹ ದ್ವೀಪದೇಶಗಳು, ಅಂಡಮಾನ್‌ ನಿಕೋಬಾರ್‌ ದ್ವೀಪಗಳು  ಮುಳುಗಿಹೋಗುತ್ತವೆ.ವಾತಾವರಣದಲ್ಲಿ ಹೆಚ್ಚುವರಿಯಾಗಿ ಇರುವ ಇಂಗಾಲದ ಡೈಆಕ್ಸೈಡ್‌  (CO2) ಅನ್ನು ಸಾಗರಗಳು ಹೀರಿಕೊಳ್ಳುವುದರಿಂದ ಅವುಗಳ ನೀರು ಆಮ್ಲೀಯವಾಗುತ್ತಿದ್ದು, ಮೀನು ಹಾಗೂ ಇತರ ಸಾಗರ ಜೀವಿಗಳ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ಆಹಾರ ಭದ್ರತೆಗೆ ಮತ್ತಷ್ಟು ಕುತ್ತಾಗುತ್ತಿದೆ.ಪರಿಸರ ಮಾಲಿನ್ಯದ ಪರಿಣಾಮವನ್ನು  ಅಂದಾಜಿಸಿ ಹಲವಾರು ದೇಶಗಳು 1992ರಲ್ಲಿಯೇ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಭೂ ಶೃಂಗಸಭೆ ನಡೆಸಿ ಹವಾಮಾನ ವೈಪರೀತ್ಯ ಒಂದು ಸಮಸ್ಯೆ ಎಂದು ಗುರುತಿಸಿದ್ದವು.ಈ ಶೃಂಗಸಭೆಯ ಪರಿಣಾಮವಾಗಿ 1994ರಲ್ಲಿ ಹಲವು ದೇಶಗಳು ವಿಶ್ವ

ಸಂಸ್ಥೆಯ ಹವಾಮಾನ ವೈಪರೀತ್ಯ ಪರಿಪಾಠಕ್ಕೆ (United Nations Framework on Climate Change– UNFCC) ಸಹಿ ಹಾಕಿ ಭವಿಷ್ಯದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಡಿವಾಣ ಹಾಕುವುದಾಗಿ ಪ್ರತಿಜ್ಞೆ ಮಾಡಿದವು.‘ಯುಎನ್‌ಎಫ್‌ಸಿಸಿ’ಗೆ ಸಹಿ ಹಾಕಿರುವ ದೇಶಗಳೆಲ್ಲ 1994ರಿಂದ ಪ್ರತಿವರ್ಷವೂ ಶೃಂಗಸಭೆ ಸೇರುತ್ತ ಗೊತ್ತುವಳಿಗಳನ್ನು ಅಂಗೀಕರಿಸುತ್ತ ಬಂದಿವೆ.

ಪ್ಯಾರಿಸ್‌ನಲ್ಲಿ ನಡೆಯುತ್ತಿರುವುದು 21ನೇ ಸಭೆ (Conference of Parties- COP 21). ನವೆಂಬರ್‌ 30ರಿಂದ ಡಿಸೆಂಬರ್‌ 11ರವರೆಗೆ  ನಡೆಯಲಿರುವ ಈ ಶೃಂಗಸಭೆಯಲ್ಲಿ 190ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಈ ಪ್ರತಿನಿಧಿಗಳು, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ಕಡಿತ ಮಾಡಲು ಹೊಸ ಜಾಗತಿಕ ಒಪ್ಪಂದವೊಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

ಈ ಶೃಂಗಸಭೆ ಯಶಸ್ವಿಯಾಗಲಿದೆಯೇ? ಹಿಂದಿನ ಅನುಭವಗಳು ಅಂತಹ ಭರವಸೆಯನ್ನೇನೂ ಹುಟ್ಟಿಸುವುದಿಲ್ಲ. ಕೈಗಾರೀಕರಣ, ನಗರೀಕರಣ ಹಾಗೂ ಆರ್ಥಿಕ ಪ್ರಗತಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ  ಬಹುತೇಕ ದೇಶಗಳು ಹಸಿರುಮನೆ ಅನಿಲ ಪ್ರಮಾಣವನ್ನು ತಗ್ಗಿಸಲು ಹಿಂದೇಟು ಹಾಕುತ್ತಿವೆ.ಹವಾಮಾನ ವೈಪರೀತ್ಯದ ಬಗ್ಗೆ ಸಿನಿಕತನ ಬೆಳೆಸಿಕೊಂಡಿರುವ ಕೆಲವರು ಹವಾಮಾನ ವೈಪರೀತ್ಯ ಎಂಬುದು ಇಲ್ಲವೇ ಇಲ್ಲ ಎನ್ನುತ್ತಾರೆ. ಇಲ್ಲವೇ ಭೂಮಿಯ ತಾಪಮಾನ ಏರಿಕೆಯಿಂದ ಲಾಭವೇ ಇದೆ ಎನ್ನುತ್ತ ಜನರನ್ನು ದಾರಿ ತಪ್ಪಿಸುತ್ತಾರೆ. ಬಹುತೇಕ ಇವರನ್ನು ದೊಡ್ಡ ದೊಡ್ಡ ಕೈಗಾರಿಕೆಗಳು ಹಾಗೂ ಪೆಟ್ರೋಲಿಯಂ ಕಂಪೆನಿಗಳು ಪ್ರಾಯೋಜಿಸಿರುತ್ತವೆ.ಹಿಂದಿನ ಅನುಭವಗಳಿಂದ ಹೇಳುವುದಾದರೆ ಅಂತರರಾಷ್ಟ್ರೀಯ ಒಪ್ಪಂದಗಳಿಂದ ಹೆಚ್ಚೇನೂ ಸಾಧಿಸಲು ಸಾಧ್ಯವಿಲ್ಲ. ಹಾಗಿದ್ದರೆ ಮುಂದಿರುವ ದಾರಿ ಯಾವುದು? ಸಾರ್ವಜನಿಕ ಅಭಿಪ್ರಾಯ ರೂಪಿಸದ ಹೊರತೂ ಹೆಚ್ಚೇನೂ ಸಾಧಿಸಲು ಸಾಧ್ಯವಿಲ್ಲ.ಪ್ಯಾರಿಸ್‌ ಶೃಂಗಸಭೆಗೆ ಪೂರ್ವಭಾವಿಯಾಗಿ ‘ಬಿಬಿಸಿ’ 20 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕೆನಡಾ, ಫ್ರಾನ್ಸ್‌, ಸ್ಪೇನ್‌ ಮತ್ತು ಬ್ರಿಟನ್‌ ದೇಶಗಳ  ನಾಗರಿಕರು ಮಾತ್ರ ತಮ್ಮ ದೇಶ ಹವಾಮಾನ ವೈಪರೀತ್ಯಕ್ಕೆ ತಡೆ ಹಾಕುವಲ್ಲಿ ಮುಂಚೂಣಿ ಪಾತ್ರ ವಹಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಕುರಿತು ನಮ್ಮ ದೇಶದ ಜನರ ಮನೋಭಾವದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾತ್ರ ಕಂಡಿದೆ. 2009ರ ಕೋಪನ್‌ಹೆಗನ್‌ ಶೃಂಗಸಭೆಯ ಸಮಯ

ದಲ್ಲಿ ಶೇ 33ರಷ್ಟು ಜನ ಮಾತ್ರ ಹವಾಮಾನ ವೈಪರೀತ್ಯಕ್ಕೆ ತಡೆ ಹಾಕುವ ಕ್ರಮಗಳತ್ತ ಆಸಕ್ತಿ ತೋರಿದ್ದರು. ಈಗ ಶೇ 38 ರಷ್ಟು ಮಂದಿ ಮಾತ್ರ ಹವಾಮಾನ ವೈಪರೀತ್ಯಕ್ಕೆ ತಡೆ ಹಾಕಬೇಕು ಎನ್ನುತ್ತಿದ್ದಾರೆ. ಭಾರತದಲ್ಲಿ ಆದಂತೆ ಹವಾಮಾನ ವೈಪರೀತ್ಯ ಜೀವನೋಪಾಯ ಚಟುವಟಿಕೆಗಳಿಗೆ ಕುತ್ತು ತಂದು ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡಲಿದೆ.ಈ ಹಿಂದಿನ ಒಂಬತ್ತು ವರ್ಷಗಳ ಅವಧಿಯಲ್ಲಿ ‘ಹುಡ್‌ಹುಡ್‌’ ಚಂಡಮಾರುತವೊಂದೇ ದೇಶದ ಪೂರ್ವ ಕರಾವಳಿಯ ನಾಲ್ಕು ರಾಜ್ಯಗಳಲ್ಲಿ 70 ಸಾವಿರ ಕೋಟಿ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ. ತಮಿಳುನಾಡು ಕರಾವಳಿಯಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಜನರ ಬದುಕು ಹಳಿತಪ್ಪಿದ್ದು, ಆರ್ಥಿಕ ಹಾಗೂ ಭೌತಿಕ ನಷ್ಟವಾಗಿದೆ. ಈಗ ಬಲವಾದ ಕ್ರಮ ಕೈಗೊಳ್ಳದೇ ಹೋದಲ್ಲಿ  ನಮ್ಮ, ನಮ್ಮ ಮುಂದಿನ ತಲೆಮಾರುಗಳು ಹವಾಮಾನ ವೈಪರೀತ್ಯದ ಆಘಾತವನ್ನು ಬದುಕಿನುದ್ದಕ್ಕೂ ಅನುಭವಿಸಲು ಸಿದ್ಧವಾಗಬೇಕಾಗುತ್ತದೆ.ಇತ್ತೀಚಿನ ‘ಯುನಿಸೆಫ್‌’ ವರದಿಯ ಪ್ರಕಾರ ಹವಾಮಾನ ವೈಪರೀತ್ಯಕ್ಕೆ ಕೊಡುಗೆ ನೀಡದೇ ಇದ್ದರೂ ಮಕ್ಕಳು ಅದರ ಪರಿಣಾಮವನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಕರಾವಳಿ ತೀರದಲ್ಲಿ ಬದುಕುತ್ತಿರುವ 50 ಕೋಟಿಗೂ ಹೆಚ್ಚು ಮಕ್ಕಳು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. 16 ಕೋಟಿಗೂ ಹೆಚ್ಚು ಮಕ್ಕಳು ಬರಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಭೂಮಿಯ ಉಳಿವಿಗಾಗಿ, ಈ ಹೊತ್ತಿನಲ್ಲಿ, ಮುಂಬರುವ ದಿನಗಳಲ್ಲಿ, ಮುಂಬರುವ ವರ್ಷಗಳಲ್ಲಿ ನಾವು ಸಾಮಾನ್ಯ ಜನ ನಮ್ಮ ಸರ್ಕಾರಗಳ ಮೇಲೆ, ಜನಪ್ರತಿನಿಧಿಗಳ ಮೇಲೆ ಹಾಗೂ ನಮ್ಮ ಮೇಲೆಯೇ ಒತ್ತಡ ಹೇರಿಕೊಳ್ಳುವುದು ಅನಿವಾರ್ಯ

ವಾಗಿದೆ.ಪಳೆಯುಳಿಕೆ ಇಂಧನಗಳ (ಪೆಟ್ರೋಲಿಯಂ ಉತ್ಪನ್ನಗಳು) ಅತಿಯಾದ ಬಳಕೆಗೆ ಕಡಿವಾಣ ಹಾಕಿ ಮಾನವ ಕುಲದ ಉಳಿವಿಗಾಗಿ ಪರ್ಯಾಯಗಳನ್ನು ಹುಡುಕಿಕೊಳ್ಳುವುದು ಹಾಗೂ ನಿರ್ದಿಷ್ಟ ಗುರಿಗಳನ್ನು ಹಾಕಿಕೊಳ್ಳದೇ ಬೇರೆ ವಿಧಿಯಿಲ್ಲ. ಈಗ ಆಪತ್ತು ಎದುರಾಗಿರುವುದು ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕೆ ಎಂಬುದು ನೆನಪಿನಲ್ಲಿರಬೇಕು.‘ಮಾನವರ ಮುಂದೆ, ತನ್ನ ಮುಂದಿನ ತಲೆಮಾರಿನ ಉಳಿವಿಗೆ ಹೋರಾಡುವುದಕ್ಕಿಂತ ಗುರುತರವಾದ ಹೊಣೆ ಮತ್ತೊಂದಿಲ್ಲ’ ಎಂಬ ಯುನಿಸೆಫ್‌ ವರದಿಯ ಉಲ್ಲೇಖ ಸದಾ ನಮ್ಮನ್ನು ಕಾಡುತ್ತಿರಬೇಕು.

ಪ್ರತಿಕ್ರಿಯಿಸಿ (+)