ಶುಕ್ರವಾರ, ಮೇ 7, 2021
20 °C

`ಆರೋಗ್ಯವಾಣಿ 104' ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಆರೋಗ್ಯವಾಣಿ 104' ಆರಂಭ

ಹುಬ್ಬಳ್ಳಿ: `ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೂಕ್ತ ಮತ್ತು ಸರಿಯಾದ ಆರೋಗ್ಯ ಮಾಹಿತಿ ಲಭ್ಯವಾಗ ಬೇಕು ಎಂಬ ಮಹತ್ವಾಕಾಂಕ್ಷೆಯಿಂದ ವಿನೂತನ ಸೇವಾ ಯೋಜನೆ ಆರೋಗ್ಯವಾಣಿ 104 ಆರಂಭಿಸ ಲಾಗಿದೆ' ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.



ಈ ಯೋಜನೆಗೆ ಇಲ್ಲಿನ ಐಟಿ ಪಾರ್ಕ್‌ನಲ್ಲಿ ಬುಧವಾರ  ಚಾಲನೆ ನೀಡಿದ ಅವರು, `ಈ ಮೂಲಕ ನಗರ, ಗ್ರಾಮೀಣ ಭಾಗವಷ್ಟೇ ಅಲ್ಲ, ಅತಿ ಹಿಂದುಳಿದ, ಗುಡ್ಡಗಾಡು ವಾಸಿಗಳಲ್ಲೂ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವಿಶ್ವಾಸ ಮೂಡಿಸುವುದು ಇದರ ಉದ್ದೇಶ' ಎಂದರು.



`104ಕ್ಕೆ ಕರೆ ಮಾಡಿ ಆರೋಗ್ಯ- ಆಪ್ತ ಸಲಹೆ, ಸೇವಾ- ಸೌಲಭ್ಯ, ಸಾಂಕ್ರಾಮಿಕ ರೋಗಗಳ ಬಗ್ಗೆ ತ್ವರಿತ ಮಾಹಿತಿ ಪಡೆಯಬಹುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ವೈದ್ಯಕೀಯ ಸೌಲಭ್ಯಗಳ ವಿವರ ಪಡೆಯಬಹುದು. ಮಾಹಿತಿ ನೀಡುವ ಸಂದರ್ಭದಲ್ಲಿ ಸರ್ಕಾರಿ ವಲಯಕ್ಕೆ ಆದ್ಯತೆ ನೀಡಲಾಗುವುದು. ಯೋಜನೆಯ ದುರ್ಬಳಕೆ ಗಮನಕ್ಕೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.



`ಈ ಸೇವೆಯಡಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳ ಸೇವಾ ನ್ಯೂನತೆಗಳ ಕುರಿತು ದೂರು ಸಲ್ಲಿಸಲು, ಆ ಮೂಲಕ ಅವುಗಳ ಕಾರ್ಯ ನಿರ್ವಹಣೆಯ ಮೇಲೆ ಕಣ್ಗಾವಲಿಡಲು ಅನುಕೂಲವಾಗಲಿದೆ. ಜೊತೆಗೆ ಜಿಲ್ಲಾವಾರು ಯಾವ ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬ ದತ್ತಾಂಶ ಸಂಗ್ರಹಿಸಲು ಸಾಧ್ಯವಾಗಲಿದೆ' ಎಂದರು.



`ಈ ಕೇಂದ್ರದಲ್ಲಿ ಮೊದಲ ಹಂತದಲ್ಲಿ 100 ಕರೆ ಸ್ವೀಕರಿಸುವ ಕೇಂದ್ರ ಕಾರ್ಯ ಪ್ರವೃತ್ತವಾಗಿವೆ. 3 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ 300ಕ್ಕೆ ಏರಿಸಲಾಗುವುದು. ದಿನಕ್ಕೆ 10 ಸಾವಿರ ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಇದ್ದು, ದಿನದ 24 ಗಂಟೆಯೂ ಸೇವೆ ಲಭ್ಯ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮದನಗೋಪಾಲ್ ತಿಳಿಸಿದರು.

`ರೋಗಗಳ ಕಣ್ಗಾವಲು ಸೇವೆಯಡಿ, ಒಂದು ಪ್ರದೇಶದಲ್ಲಿ ಒಂದೇ ರೋಗಲಕ್ಷಣ ಐದು ಮಂದಿಯಲ್ಲಿ ಕಾಣಿಸಿಕೊಂಡ  ಕುರಿತು ಮಾಹಿತಿ ನೀಡಿದರೆ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ವೇಕ್ಷಣ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.



ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಬೆಂಗಳೂರು, ಮೈಸೂರು, ಬೆಳಗಾವಿ, ಗುಲ್ಬರ್ಗ ಹಾಗೂ ಮಂಗಳೂರು ಕಂದಾಯ ವಿಭಾಗಗಳಲ್ಲಿ ತಲಾ ಒಂದೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಿದ್ದು, ಇಲಾಖೆಯ ವತಿಯಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಬಜೆಟ್‌ನಲ್ಲೇ ಹಣ ತೆಗೆದಿರಿಸಲು ಮನವಿ ಮಾಡಲಾಗುವುದು ಎಂದು ಸಚಿವ ಖಾದರ್ ಧಾರವಾಡದಲ್ಲಿ ಹೇಳಿದರು.

ಏನಿದು `ಆರೋಗ್ಯವಾಣಿ 104'

ರಾಜ್ಯದ ಯಾವುದೇ ಭಾಗದಿಂದ ವೈದ್ಯಕೀಯ ಸಲಹೆ ಅಥವಾ ಮಾಹಿತಿಗೆ `104' ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದು. ಕರೆ ಮಾಡಿದ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ತಿಳಿದುಕೊಂಡು ಪ್ರಕರಣವನ್ನು ಅತಿ ಗಂಭೀರ ಅಥವಾ ಸಾಮಾನ್ಯ ಎಂದು ವಿಂಗಡಿಸಿ, ತಜ್ಞ ವೈದ್ಯರು  ಸಲಹೆ ನೀಡುವರು.

ಸಣ್ಣಪುಟ್ಟ ಕಾಯಿಲೆಗಳಿಗೆ ಜೆನರಿಕ್ ಔಷಧಗಳನ್ನು (ಪ್ಯಾರಸಿಟಮಾಲ್, ಆಸ್ಪರಿನ್ ಇತ್ಯಾದಿ), ಚರ್ಮ ರೋಗಕ್ಕೆ ಮುಲಾಮು ತೆಗೆದುಕೊಳ್ಳಲು ಸಲಹೆ ನೀಡಲಾಗುವುದು. ಮೊಬೈಲ್‌ನಿಂದ ಕರೆ ಮಾಡಿದರೆ ಎಸ್‌ಎಂಸ್ ಮೂಲಕ ಮಾಹಿತಿ ಲಭ್ಯವಾಗಲಿದೆ.

ಖಿನ್ನತೆ, ಮಾನಸಿಕ ಒತ್ತಡ, ದೀರ್ಘ ಕಾಲದ ವ್ಯಾಧಿಗಳು, ಎಚ್‌ಐವಿ/ಏಡ್ಸ್, ದಾಂಪತ್ಯ ವಿರಸ ಮತ್ತಿತರ ಪ್ರಕರಣಗಳ ಬಗ್ಗೆಯೂ ಆಪ್ತ ಸಮಾಲೋಚನೆ ಸೇವೆ ಲಭ್ಯವಾಗಲಿದೆ. ಹೈದರಾಬಾದಿನ ಹೆಲ್ತ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಇನ್‌ಸ್ಟಿಟೂಟ್ (ಎಚ್‌ಎಂಆರ್‌ಐ) ಮೂಲಕ ಈ ಯೋಜನೆ ಜಾರಿಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.