ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಪ್ರತಿಭಟನೆ
ಚಾಮರಾಜನಗರ: ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿ `ಡಿ~ ಗ್ರೂಪ್ ನೌಕರರ ನೇರ ನೇಮಕಾತಿಗೆ ಮುಂದಾಗಿದ್ದು, ಹೊರಗುತ್ತಿಗೆ ನೌಕರರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ ನಾನ್ ಕ್ಲಿನಿಕಲ್ ಗುತ್ತಿಗೆ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.
ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಹೊರಗುತ್ತಿಗೆ ನೌಕರರು ಜಿಲ್ಲಾಡಳಿತ ಭವನಕ್ಕೆ ತೆರಳಿದರು. ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು ಹಾಗೂ `ಡಿ~ ಗ್ರೂಪ್ ನಾನ್ ಕ್ಲಿನಿಕ್ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ನೌಕರರ ನೇರ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿದೆ.
ಇದರಿಂದ ಹಾಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ತೊಂದರೆಯಾಗಲಿದೆ. ವಿದ್ಯಾರ್ಹತೆ, ವಯೋಮಾನ ಮಿತಿಯ ನಿರ್ಬಂಧವನ್ನು ಸಡಿಲಿಸಬೇಕು. ಅರ್ಹತೆ ಇರುವವರಿಗೆ ನೇಮಕಾತಿಯಲ್ಲಿ ಸೂಕ್ತ ಕೃಪಾಂಕ ನೀಡಿ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಲಿ ನೌಕರರನ್ನು ನೇರಗುತ್ತಿಗೆ ಮೂಲಕ ಸೇವೆಯಲ್ಲಿ ಮುಂದುವರಿಸಬೇಕು. ನಂತರ ಖಾಲಿ ಹುದ್ದೆಗಳಿಗೆ ಹೊರಗುತ್ತಿಗೆ ನೌಕರರನ್ನೇ ನೇಮಿಸಿಕೊಳ್ಳಬೇಕು. ಈ ಸಂಬಂಧ ವಿಶೇಷ ನೇಮಕಾತಿ ನಿಯಮಾವಳಿ ರೂಪಿಸಬೇಕು. ಅಲ್ಲಿಯವರೆಗೆ ಕನಿಷ್ಠ 10 ಸಾವಿರ ರೂ ವೇತನ ನೀಡಬೇಕು. ಭವಿಷ್ಯ ನಿಧಿ ಕೊಡುಗೆಯನ್ನು ಇಲಾಖೆಯಿಂದಲೇ ನೌಕರರ ಬ್ಯಾಂಕ್ ಖಾತೆ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.
ನೌಕರರಿಗೆ ಕಡ್ಡಾಯವಾಗಿ ವೇತನ ಚೀಟಿ, ಪಿಎಫ್ ಸಂದಾಯ ರಶೀದಿ ನೀಡಬೇಕು. ರಜೆ ಸೌಲಭ್ಯ ಕಲ್ಪಿಸಬೇಕು. ಎಲ್ಲ ನೌಕರರಿಗೂ ಉಚಿತ ಸಮವಸ್ತ್ರ ನೀಡಬೇಕು. ಹೆಚ್ಚುವರಿ ಸೇವೆಗೂ ಸೂಕ್ತ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಪತ್ಕುಮಾರ್, ಕಾರ್ಯದರ್ಶಿ ನಂಜುಂಡಸ್ವಾಮಿ ಸೇರಿದಂತೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.