ಗುರುವಾರ , ಮೇ 26, 2022
31 °C

ಆರೋಗ್ಯ ಕಾಪಾಡಿಕೊಳ್ಳಿ; ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ದುಶ್ಚಟಗಳಿಗೆ ಯುವಜನರು ಬಲಿಯಾಗಬಾರದು. ಪ್ರತಿದಿನ ಉತ್ತಮ ಆಹಾರ ಸೇವಿಸುವ  ಮೂಲಕ ಸದೃಢರಾಗಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ಕಿವಿಮಾತು ಹೇಳಿದರು.ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜೂನಿಯರ್ ಕಾಲೇಜು ಆವರಣದಲ್ಲಿ ಕೋಲಾರದ ದೇವರಾಜ ಅರಸ್ ವೈದ್ಯಕೀಯ ಕಾಲೇಜು ಮತ್ತು ದಿ ಕೌಸರ್ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ನಿಯಮಿತ ಬುಧವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ  ಮಾತನಾಡಿದರು.ಆಧುನಿಕತೆಯ ಪ್ರಭಾವ ಮತ್ತು ಇನ್ನಿತರ ಕಾರಣಗಳಿಂದ ಬಹುತೇಕ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸುಂದರ ಭವಿಷ್ಯ ರೂಪಿಸಿಕೊಳ್ಳುವುದರ ಬದಲು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದೇಶವನ್ನು ಸದೃಢವಾಗಿ ಕಟ್ಟಬೇಕಾದ ಯುವಜನರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ಹೊಂದುವುದರ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.ಮಾಂಸಾಹಾರ ಮತ್ತು ಮದ್ಯಸೇವನೆ ತ್ಯಜಿಸಿ ಯುವಜನರು ಸಸ್ಯಹಾರಿಗಳಾಗಬೇಕು. ಮಾಂಸಾಹಾರ ತ್ಯಜಿಸುವ ಮೂಲಕ ಇತರರಿಗೂ ಸಹ ಜಾಗೃತಿ ಮೂಡಿಸಬೇಕು. ಸಸ್ಯಾಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ಸಂದೇಶ ಸಾರಬೇಕು ಎಂದು ಅವರು ಹೇಳಿದರು.ಮಾಜಿ ಸಂಸದ ಆರ್.ಎಲ್.ಜಾಲಪ್ಪ ಮಾತನಾಡಿ, ‘ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ವೈದ್ಯರಿಂದ ಅಗತ್ಯ ಚಿಕಿತ್ಸೆಗೆ ಒಳಪಡಿಸುವುದು ಶಿಬಿರದ ಉದ್ದೇಶ’ ಎಂದು ವಿವರಿಸಿದರು.ಕಳೆದ 25 ವರ್ಷಗಳಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಶಿಬಿರದಲ್ಲಿ ಚಿಕಿತ್ಸೆ ಪಡೆದ ಬಹುತೇಕ ಮಂದಿ ಗುಣಮುಖರಾಗಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ವೈದ್ಯಕೀಯ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು ಮತ್ತಿತರರ ವಿಭಾಗದ ತಜ್ಞರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಕ್ತ ಮತ್ತು ಮೂತ್ರ ಪರೀಕ್ಷೆ ಇದೇ ಸಂದರ್ಭದಲ್ಲಿ ನಡೆಯಿತು. ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಆಲ್.ಎಲ್.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವಿ.ಲಕ್ಷ್ಮಯ್ಯ, ದೇವರಾಜ ಅರಸ್ ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಜಿ.ರಂಗನಾಥ, ತಹಶೀಲ್ದಾರ ಪೂರ್ಣಿಮಾ,  ದಿ ಕೌಸರ್ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಬಿ.ಎಸ್.ರಫಿ ಉಲ್ಲಾ  ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.