ಶುಕ್ರವಾರ, ನವೆಂಬರ್ 15, 2019
21 °C

ಆರೋಗ್ಯ ಕೇಂದ್ರವೇ ರೋಗಗ್ರಸ್ತ

Published:
Updated:

ರಾಮನಾಥಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಇಲ್ಲಿಗೆ 2007ರಲ್ಲಿ ಅಂದಿನ ಶಾಸಕ ಎ.ಟಿ. ರಾಮಸ್ವಾಮಿ ಹೊಸ ಆಸ್ಪತ್ರೆ ಮಂಜೂರು ಮಾಡಿಸಿದರು. ಹಳೆಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಪ್ರಾರಂಭಿಸಲಾದ ಆಸ್ಪತ್ರೆಗೆ ಸರ್ಕಾರ ರೂ. 37 ಲಕ್ಷ ವೆಚ್ಚದಲ್ಲಿ ಸುಸುಜ್ಜಿತ ನೂತನ ಕಟ್ಟಡದ ಭಾಗ್ಯ ಕರುಣಿಸಿತು. ಆದರೆ, ಆಸ್ಪತ್ರೆಗೆ ಬೇಕಾದ ಸೌಲಭ್ಯ ಇಲ್ಲದಿದ್ದರೂ ಕಳೆದ ಮೇ ತಿಂಗಳಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ನೂತನ ಕಟ್ಟಡ ಉದ್ಘಾಟಿಸಿ, ಶೀಘ್ರವೇ ಆಸ್ಪತ್ರೆಗೆ ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಶ್ವಾಸನೆ ನೀಡಿ ಹೊರಟರು.ಆಸ್ಪತ್ರೆ ಉದ್ಘಾಟನೆಯ ಭಾಗ್ಯ ಕಂಡಿತಾದರೂ ಆರೋಗ್ಯ ಸಚಿವರು ನೀಡಿದ ಭರವಸೆಗಳು ಮಾತ್ರ ಈಡೇರಿಲ್ಲ. ಒಂದು ಆಸ್ಪತ್ರೆಗೆ ಬೇಕಾದ ಸೌಲಭ್ಯಗಳು ಲಭ್ಯವಾಗದೇ ಆಸ್ಪತ್ರೆಯೇ ರೋಗಗ್ರಸ್ತವಾಗಿದೆ. ಪರಿಣಾಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಎನ್ನುವುದು ಇಲ್ಲಿ ಮರೀಚಿಕೆ.ನೂತನ ಕಟ್ಟಡದ ಮೇಲೆ ದಿನದ 24 ಗಂಟೆಗಳ ಕಾಲ ಹೆರಿಗೆ ಸೌಲಭ್ಯವಿರುವುದಾಗಿ ನಾಮಫಲಕ ಬರೆಸಲಾಗಿದೆ. ಆದರೆ ಆಸ್ಪತ್ರೆಯ ಒಳ ಹೊಕ್ಕರೆ ಹೆರಿಗೆ ವಾರ್ಡ್‌ನ ಕಾಮಗಾರಿ ಅಪೂರ್ಣಗೊಂಡ ಕಾರಣ ಆ ಸೌಲಭ್ಯ ಇಲ್ಲವೆಂದು ಕೈಬರಹದ ನಾಮಫಲಕ ಹಾಕಲಾಗಿದೆ. ರೋಗಿಗಳಿಗೆ ಬೇಕಿರುವ ಔಷಧಿಗಳು ಆಸ್ಪತ್ರೆಯಲ್ಲಿ ವಿತರಣೆ ಆಗುತ್ತಿಲ್ಲ. ಅಗತ್ಯ ಸೌಲಭ್ಯ ಕೊರತೆ, ತಜ್ಞ ವೈದ್ಯರಿಲ್ಲದಿರುವುದು, ಔಷಧ ಕೊರತೆ ಹೀಗೆ ಸಮಸ್ಯೆಗಳ ಸರಮಾಲೆಯೇ ಇರುವ ಪರಿಣಾಮ ಇಲ್ಲಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಕೊಣನೂರು ಇಲ್ಲವೇ ದೂರದ ಅರಕಲಗೂಡು, ಹಾಸನದ ದಾರಿ ತೋರಿಸಿ ಕೈತೊಳೆದುಕೊಳ್ಳುವುದು ಮಾಮೂಲಿಯಾಗಿದೆ.ಹಾಸನ, ಮೈಸೂರು, ಮಡಿಕೇರಿ, ಬೆಟ್ಟದಪುರ- ಪಿರಿಯಾಪಟ್ಟಣ ಮಾರ್ಗದ ರಸ್ತೆಗಳು ಕೂಡುವ ಸ್ಥಳವಾದ ಕಾರಣ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆದರೆ ಇಲ್ಲಿಗೆ ಬರುತ್ತಾರೆ. ಆದರೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಸಿಗುವುದು ಕಷ್ಟ. ಪಟ್ಟಣದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕವಿಲ್ಲ.ಪ್ಲೊರೈಡ್ ಮಿಶ್ರಿತ ನೀರು ಸೇವಿಸಿ ಕೀಲು- ಮೈ- ಕೈ ನೋವು ಕಾಣಿಸಿಕೊಂಡು ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ತಕ್ಷಣವೇ ಅಗತ್ಯ ಸೌಲಭ್ಯ ಹಾಗೂ ತಜ್ಞ ವೈದ್ಯರನ್ನು ನೇಮಿಸುವ ಕೆಲಸ ಆಗಬೇಕಿದೆ.

ಪ್ರತಿಕ್ರಿಯಿಸಿ (+)