ಆರೋಗ್ಯ ಕೇಂದ್ರ ಸ್ಥಳಾಂತರಕ್ಕೆ ವಿರೋಧಿಸಿ ಗ್ರಾಮಸ್ಥರ ಧರಣಿ

7

ಆರೋಗ್ಯ ಕೇಂದ್ರ ಸ್ಥಳಾಂತರಕ್ಕೆ ವಿರೋಧಿಸಿ ಗ್ರಾಮಸ್ಥರ ಧರಣಿ

Published:
Updated:

ಚಿತ್ರದುರ್ಗ:  ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ವಿಜಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರಿಸಿದಂತೆ ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಆರೋಗ್ಯಕ್ಕೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.ಬಹಳ ದಿನಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸುವ  ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.೧೯೯೬ರಲ್ಲಿ ಜನತಾದಳ ಸರ್ಕಾರ ಈ ಆರೋಗ್ಯ ಕೇಂದ್ರವನ್ನು ಗ್ರಾಮಕ್ಕೆ ಮಂಜೂರು ಮಾಡಿದೆ. ವಿಜಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನರಿಗೆ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗಿದೆ. ಅಲ್ಲದೇ ಗ್ರಾಮದ ಸುತ್ತಮುತ್ತ ದಲಿತರು, ಪರಿಶಿಷ್ಟ ವರ್ಗದವರು, ಶೋಷಿತರು, ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಾಥಮಿಕ ಕೇಂದ್ರ ಸ್ಥಳಾಂತರಿಸುವುದರಿಂದ ಹಿಂದುಳಿದ ವರ್ಗದ ರೋಗಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.ಗ್ರಾಮದ ಆರೋಗ್ಯ ಕೇಂದ್ರ ಉನ್ನತೀಕರಣಕ್ಕೆ ಅಗತ್ಯವಿದ್ದ ಎರಡು ಎಕರೆ ಭೂಮಿಯನ್ನು ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಗ್ರಾಮ ಹೊಂದಿಕೊಂಡಿದ್ದು, ಮೂರು ಸಾವಿರಕ್ಕಿಂತ ಹೆಚ್ಚಿನ ಜನ ಇಲ್ಲಿ ವಾಸವಾಗಿದ್ದಾರೆ. ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಸೇರಿದಂತೆ ೧೫೦೦ ವಿದ್ಯಾರ್ಥಿಗಳು ಗ್ರಾಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ೧೭ ವರ್ಷಗಳಿಂದ ಗ್ರಾಮದಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ.ಹೀಗಿದ್ದರೂ ಕೇಂದ್ರ ಸ್ಥಳಾಂತರ ಮಾಡುತ್ತಿರುವುದರ ಹಿಂದಿನ ರಹಸ್ಯ ಮಾತ್ರ ಅರ್ಥವಾಗುತ್ತಿಲ್ಲ ಎಂದು ಗ್ರಾಮಸ್ಥರು ಶಂಕೆ ವ್ಯಕ್ತ ಪಡಿಸಿದ್ದಾರೆ.  

ನಬಾರ್ಡ್ ಯೋಜನೆ ಅಡಿಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದರೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.ಗ್ರಾಮಸ್ಥರ ವಿರೋಧದ ನಡುವೆಯೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರ ಮಾಡಿದರೆ ಉಗ್ರ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಜಿ.ಪರಪಮೇಶ್ವರ್, ಸಿ.ಶಿವಕುಮಾರ್ ಮತ್ತಿತರರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry