ಭಾನುವಾರ, ಜೂನ್ 20, 2021
28 °C

ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ತಂತ್ರಜ್ಞಾನ

ಆಧುನಿಕ ಆರೋಗ್ಯಸೇವೆ ಎಲ್ಲ ವರ್ಗದವರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕುಎಂದರೆ ತಂತ್ರಜ್ಞಾನದ ಆವಿಷ್ಕಾರ ಅಗತ್ಯಸಮಗ್ರ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಭಾರತದ ನಗರ ಪ್ರದೇಶಗಳಲ್ಲಿ ಏನೆಲ್ಲ ಸೌಲಭ್ಯ ದೊರೆಯುವುದೋ ಅವುಗಳೆಲ್ಲ ಗ್ರಾಮೀಣ ಪ್ರದೇಶದ ಜನರಿಗೂ ದೊರೆಯುವುದನ್ನು ನಾವು ಖಾತ್ರಿ ಪಡಿಸಬೇಕು. ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ಸಮಗ್ರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಬಹುದು.ಭಾರತದಲ್ಲಿ ಪ್ರತಿ 1700 ನಾಗರಿಕರಿಗೆ ಒಬ್ಬರು ವೈದ್ಯರಿದ್ದಾರೆ. ಇಡೀ ವಿಶ್ವದಲ್ಲಿಯೇ ವೈದ್ಯ ಮತ್ತು ನಾಗರಿಕನ ಅನುಪಾತದಲ್ಲಿ ಭಾರತ ಅತಿ ಕನಿಷ್ಠ ಸ್ಥಾನದಲ್ಲಿದೆ. ಅದರಲ್ಲೂ ಹಲವು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಂತೂ ಈ ಅನುಪಾತ 1: 25,000ದಷ್ಟಿದೆ.ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಭಾರತದಲ್ಲಿ ವೈದ್ಯ ಮತ್ತು ನಾಗರಿಕರ ಅನುಪಾತ 1: 1,200ರಷ್ಟಿರಬೇಕು ಎಂದು ಶಿಫಾರಸು ಮಾಡಿದೆ. ಅಮೆರಿಕದಲ್ಲಿ ಈ ಅನುಪಾತ 1: 300, ಚೀನಾದಲ್ಲಿ 1: 900ರಷ್ಟಿದೆ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳನ್ನು ಜಾರಿಗೊಳಿಸಬೇಕಾದರೆ ಭಾರತ ತನ್ನ ವೈದ್ಯರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಬೇಕು.ಆದರೆ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಈ ಸಮಸ್ಯೆಗೆ ಪರಿಹಾರವಲ್ಲ. ಮೊದಲೇ ಸೂಚಿಸಿದಂತೆ ನಾಲ್ಕು ಪ್ರಮುಖವಾದ ಮಾನದಂಡಗಳು ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲದಿರುವುದರಿಂದ ವೈದ್ಯರು ಕಡಿಮೆ ಜನರು ವಾಸಿಸುವ ನಗರ ಪ್ರದೇಶಗಳತ್ತಲೇ ದೌಡಾಯಿಸುತ್ತಾರೆ.

 

ಇದರಿಂದಾಗಿ ನಗರ ಪ್ರದೇಶಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಕಾಣುತ್ತದೆ. ಅದಕ್ಕಾಗಿಯೇ ಗುಣಮಟ್ಟದ ಆರೋಗ್ಯ ಸೌಲಭ್ಯ ಪಡೆಯಲು ಗ್ರಾಮೀಣ ಪ್ರದೇಶದ ಜನರು ದೂರದಲ್ಲಿರುವ ನಗರ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

 

ಸಾಮಾನ್ಯವಾಗಿ ಪ್ರಯಾಣ, ವಸತಿ ಮತ್ತು ಆರೋಗ್ಯ ಸೇವೆಗಳ ವೆಚ್ಚವನ್ನು ಭರಿಸುವುದು ಗ್ರಾಮೀಣರಿಗೆ ಕಷ್ಟವಾಗುತ್ತದೆ. ಈ ಜನಸಂಖ್ಯೆಯ ಶೇಕಡ 10ರಷ್ಟು ಜನರು ಯಾವುದೇ ರೀತಿಯ ವಿಮೆ ಸೌಲಭ್ಯ ಹೊಂದಿರುವುದಿಲ್ಲ.

 

ಹಾಗಾಗಿ ನಗರ ಪ್ರದೇಶಗಳಲ್ಲಿರುವವರಿಗಿಂತ ಒಂದೂವರೆ ಪಟ್ಟು ಹೆಚ್ಚು ಹಣವನ್ನು ಗ್ರಾಮೀಣರು ಭರಿಸಬೇಕಾಗುತ್ತದೆ. ಇವುಗಳನ್ನೆಲ್ಲ ತಡೆಯಲೆಂದೇ ಅನೇಕರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಕೊಳೆಗೇರಿಗಳನ್ನು ಸೇರುತ್ತಾರೆ. ಹೊಟ್ಟೆಪಾಡಿಗಾಗಿ ಯಾವುದಾದರೂ ಕೆಲಸಕ್ಕೆ ಸೇರುತ್ತಾರೆ.ಈ ಸವಾಲುಗಳನ್ನು ಗುರುತಿಸಿ ಯೋಜನಾ ಆಯೋಗ 2015ರ ಹೊತ್ತಿಗೆ ಕೇಂದ್ರೀಯ ಬಜೆಟ್ಟಿನ ಶೇಕಡ 7ರಷ್ಟನ್ನು ಮತ್ತು ರಾಜ್ಯ ಬಜೆಟ್ಟಿನ ಶೇ 8ರಷ್ಟನ್ನು ಆರೋಗ್ಯ ಸೇವೆಗಾಗಿ ಮೀಸಲಿಟ್ಟಿದೆ. 2025ರ ಹೊತ್ತಿಗೆ ಈ ಮೊತ್ತವನ್ನು ಶೇ 10ಕ್ಕೆ ಹೆಚ್ಚಿಸುವ ಕುರಿತೂ ಚಿಂತನೆ ನಡೆಯುತ್ತಿದೆ.ಪ್ರಸ್ತುತ ಕೇಂದ್ರೀಯ ಮತ್ತು ರಾಜ್ಯ ಬಜೆಟ್ಟಿನ ಶೇ 1.5 ಮತ್ತು 3ರಷ್ಟನ್ನು ಮಾತ್ರ ಆರೋಗ್ಯ ಸೇವೆಗಾಗಿ ಮೀಸಲಿಡಲಾಗುತ್ತಿದೆ. ವಾಸ್ತವಿಕವಾಗಿ ಆರೋಗ್ಯ ಸೇವೆಗಾಗಿ ಕೇಂದ್ರೀಯ ಬಜೆಟ್ ಶೇ 1.3ಕ್ಕೆ ಸ್ಥಿರವಾಗಿ ನೆಲೆ ನಿಂತಿದ್ದರೆ ರಾಜ್ಯ ಬಜೆಟ್ಟಿನ ಮೀಸಲು ಶೇ 7ರಿಂದ ಶೇ 5.5ಕ್ಕೆ ಇಳಿದಿದೆ.ಆರೋಗ್ಯ ಸೇವೆಗಾಗಿ ಬಜೆಟ್ ಪ್ರಮಾಣವನ್ನು ಹೆಚ್ಚಿಸುವ ಪ್ರಸ್ತಾವ ಸ್ವಾಗತಾರ್ಹ. ಆದರೆ ಹೆಚ್ಚಿಸಲಾದ ಬಜೆಟ್ ಅನುದಾನ ಹೋಗುವುದಾದರೂ ಎಲ್ಲಿಗೆ? ಮೇಲೆ ಗಮನಿಸಿದಂತೆ ಕೇವಲ ವೈದ್ಯರ ಪೂರೈಕೆಯನ್ನು ಹೆಚ್ಚಿಸುವುದರಿಂದ ಮಾತ್ರ ಪರಿಸ್ಥಿತಿ ಸುಧಾರಿಸುವುದಿಲ್ಲ.  ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಚೌಕಟ್ಟು ಅದಾಗಿರಬೇಕು. ಗ್ರಾಮೀಣ ಪ್ರದೇಶದಲ್ಲಿ ಮೊದಲು ಸೂಚಿಸಲಾದ ಮೂರು ಮಾನದಂಡಗಳು ಮತ್ತು ಮೂಲಸೌಕರ್ಯಗಳು ದೊರೆಯುವಂತಾಗಬೇಕು. ಅದಕ್ಕಿಂತ ಹೆಚ್ಚಾಗಿ ಗ್ರಾಮೀಣ ಜನರನ್ನು ಆರೋಗ್ಯ ಸೇವೆ ತಲುಪುವಂತಾಗಬೇಕಾದರೆ ನಾವು ಮಾಡಬೇಕಾದದ್ದು ಇನ್ನೂ ಬೇಕಾದಷ್ಟಿದೆ.ಮೊದಲಿಗೆ, ಭಾರತದಲ್ಲಿ ಸಂಖ್ಯೆಗಳ ಲೆಕ್ಕಾಚಾರದಿಂದ ಸಮಸ್ಯೆಗಳನ್ನು ನಿಭಾಯಿಸುವುದು ಸಾಧ್ಯವಲ್ಲ.  ಬದಲಾಗಿ  ಭಾರತಕ್ಕೆ ಆರೋಗ್ಯ ಸೇವೆ ದೊರೆಯಬೇಕೆಂದರೆ ಸರ್ಕಾರ ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು.ಡೆಲಾಯಿಟ್- ಸಿಐಐ ಜಂಟಿಯಾಗಿ ಸಿದ್ಧಪಡಿಸಿರುವ  ಭಾರತದಲ್ಲಿ ವೈದ್ಯಕೀಯ ತಂತ್ರಜ್ಞಾನ- `ಪ್ರಗತಿಯ ಅಲೆಗಳ ಮೇಲೆ ಸವಾರಿ~ (ಮೆಡಿಕಲ್ ಟೆಕ್ನಾಲಜಿ ಇನ್ ಇಂಡಿಯಾ- ರೈಡಿಂಗ್ ದಿ ಗ್ರೋಥ್ ವೇವ್) ವರದಿಯಲ್ಲಿ ಆಧುನಿಕ ಆರೋಗ್ಯ ಸೇವೆ ಎಲ್ಲ ವರ್ಗದವರಿಗೂ ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕೆಂದರೆ ತಂತ್ರಜ್ಞಾನದ ಆವಿಷ್ಕಾರ ಅಗತ್ಯ ಎಂದು ಪ್ರತಿಪಾದಿಸಲಾಗಿದೆ.ಕ್ಲೌಡ್ ತಂತ್ರಜ್ಞಾನದ ವಿಡಿಯೋ ಆಧಾರಿತ ಆರೋಗ್ಯ ಸೇವೆ  ವೃದ್ಧರು ಮತ್ತು ರೋಗಿಗಳಿಗಳಿಬ್ಬರಿಗೂ ನೆರವಾಗುವುದಲ್ಲದೇ ಕೈಗೆಟಕುವ ಬೆಲೆಯಲ್ಲಿ ಜನರಿಗೆ ಆರೋಗ್ಯ ಸೇವೆಯೂ ದೊರೆಯುತ್ತದೆ. ಭಾರತದಲ್ಲಿ 6,70,000 ಕಿಲೋಮೀಟರ್ ಉದ್ದದ ಫೈಬರ್ ತಂತಿಯನ್ನು ಅಳವಡಿಸಲಾಗಿದೆ.ಆದರೆ ಅವುಗಳನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳಲಾಗಿಲ್ಲ. ಹಾಗಾದರೆ ಗ್ರಾಮಗಳಲ್ಲಿರುವ ರೋಗಿಗಳು ಮತ್ತು ನಗರದಲ್ಲಿರುವ ವೈದ್ಯರ ನಡುವೆ ಸಂಪರ್ಕ ಬೆಸೆಯುವ ತಂತ್ರಜ್ಞಾನದಲ್ಲಿ ಏಕೆ ಹೂಡಿಕೆ ಮಾಡಬಾರದು? ಸರ್ಕಾರ  ಗ್ರಾಮೀಣ ಭಾರತದಲ್ಲಿ ಆರೋಗ್ಯ ಸೇವೆ ಕಲ್ಪಿಸಲು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಈಗಿರುವ ಮೂಲಸೌಕರ್ಯದ ಸ್ವರೂಪದ ಬದಲು ಪಿಪಿಪಿ ಮಾದರಿ ಅನೇಕ ಪ್ರಯೋಜನಗಳನ್ನು ತರಲಿದೆ.

 

ಇದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗೆ ಸುಸ್ಥಿರ ಆದಾಯ ತರುವ ಮಾದರಿಯಾಗಬಲ್ಲದು. ತಂತ್ರಜ್ಞಾನವನ್ನು ಬಳಸಿಕೊಂಡು ಸೊಲ್ಯೂಷನ್‌ಗಳು ಹೇಗೆ ಮತ್ತು ಎಷ್ಟರಮಟ್ಟಿಗೆ ನೆರವಾಗಿವೆ ಎಂಬುದನ್ನು ಪರಿಶೀಲಿಸಬಹುದು. ಪ್ರಸ್ತುತ ಸರ್ಕಾರ ತನ್ನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು/ ಜಿಲ್ಲಾ ಆಸ್ಪತ್ರೆಗಳು ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳ ಮೂಲಕ ಆರೋಗ್ಯ ಸೇವೆ ಒದಗಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗಾಗಿ ಬಜೆಟ್ ಅನುದಾನ ಮೀಡಲಿಸುತ್ತದೆ.

 

ಆದರೆ ಹಲವು ಕಾರಣಗಳಿಗಾಗಿ ವೈದ್ಯರನ್ನು ನೇಮಿಸುವ ಅಥವಾ ಪಡೆಯುವ ಸಾಮರ್ಥ್ಯ ಸರ್ಕಾರಕ್ಕೆ ಇರುವುದಿಲ್ಲ. ಏಕೆಂದರೆ ಪರಂಪರಾಗತವಾಗಿ ಬಂದ ವ್ಯವಸ್ಥೆಯಡಿ ವಿಶ್ವದಾದ್ಯಂತ ಇರುವ ಸರ್ಕಾರಗಳು ವಹಿವಾಟು ನಡೆಸುವಾಗ ಹಲವು ಸವಾಲುಗಳನ್ನು ಎದುರಿಸುತ್ತಿವೆ.ಅವುಗಳು ಕೇವಲ ಹಣ ಮತ್ತು ಯೋಜನೆಗಳನ್ನು ವಿಲೇವಾರಿ ಮಾಡುವ ಮತ್ತು ಅವುಗಳ ಉಸ್ತುವಾರಿ ಮಾಡುವುದರಲ್ಲಿಯೇ ಪರಿಣತಿ ಪಡೆದಿವೆ. ಆದರೆ ತನ್ನ ಬಲವನ್ನು ಚೆನ್ನಾಗಿ ಬಳಸಿಕೊಳ್ಳಬೇಕಾದರೆ ಸರ್ಕಾರಗಳು ತನ್ನ ಹಲವು ಕೆಲಸಗಳನ್ನು ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಬೇಕು. ಅವುಗಳು ಗುಣಮಟ್ಟದ ವೈದ್ಯರ ನೇಮಕಾತಿ, ನಿರ್ವಹಣೆ ಮತ್ತು ಉಸ್ತುವಾರಿಯನ್ನು ನೋಡಿಕೊಳ್ಳುತ್ತವೆ.ಈ ಅಂಶಗಳನ್ನು ಜಾರಿಗೊಳಿಸಿದರೆ ನಾವು ದೇಶದಾದ್ಯಂತ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಕ್ರಾಂತಿ ತರುವುದಷ್ಟೇ ಅಲ್ಲ, ಈ ಮಾದರಿಯನ್ನು ರಫ್ತು ಮಾಡಿ ವಿಶ್ವದಲ್ಲಿ ಹೊಸ ಉದ್ಯಮವನ್ನು ಸೃಷ್ಟಿಸುವ ಅವಕಾಶವನ್ನು ಹೊಂದುತ್ತೇವೆ.ಸಾವಿರಾರು ವರ್ಷಗಳಿಂದ ಭಾರತ, ಜ್ಞಾನ, ವೈದ್ಯಕೀಯ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಉದಾಹರಣೆಯಾಗಿದೆ. ಈಗ ತಂತ್ರಜ್ಞಾನವನ್ನು ವೇದಿಕೆಯಾಗಿಟ್ಟುಕೊಂಡು ಆರೋಗ್ಯ ಸೇವೆಗಳ ಕ್ಷೇತ್ರಕ್ಕೆ ಹೊಸ ರೂಪ ನೀಡುವುದರೊಂದಿಗೆ ಸಮಗ್ರ ಅಭಿವೃದ್ಧಿಗೆ ಭಾರತ ನಾಂದಿ ಹಾಡಬಹುದು.

(ಲೇಖಕರು: ಅಧ್ಯಕ್ಷರು, ಇನ್‌ಕ್ಲುಸಿವ್ ಗ್ರೋಥ್, ಸಿಸ್ಕೋ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.