ಆರೋಗ್ಯ ದಾಸೋಹ ಭಣ ಭಣ...

7

ಆರೋಗ್ಯ ದಾಸೋಹ ಭಣ ಭಣ...

Published:
Updated:

ಹುಣಸೂರು: ಎರಡನೇ ಹಂತದ ಆರೋಗ್ಯ ದಾಸೋಹ ಉಚಿತ ತಪಾಸಣಾ ಶಿಬಿರದಲ್ಲಿ ಅಂದಾಜು 500 ಹೊರ ರೋಗಿಗಳನ್ನು ಪರೀಕ್ಷಿಸಿ, ಕೆಲವರಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಯಿತು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಎರಡನೇ ಹಂತದ ಆರೋಗ್ಯ ದಾಸೋಹ ಶಿಬಿರದಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಯ 30 ವೈದ್ಯರು ಭಾಗವಹಿಸಿದ್ದರು. `ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸೇರಿದಂತೆ ಅಂಗವಿಕಲತೆ, ಕಿವಿ ಮತ್ತು ಕಣ್ಣು, ಸ್ತ್ರೀ ರೋಗದಿಂದ ತೀವ್ರವಾಗಿ ಬಳಲುತ್ತಿದ್ದವರನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ~ ಎಂದು ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆ ವ್ಯವಸ್ಥಾಪಕ ಡಾ.ಉದಯಕುಮಾರ್ ಹೇಳಿದರು.ಆರೋಗ್ಯ ದಾಸೋಹದಲ್ಲಿ ಇಸಿಜಿ, ಸ್ಕ್ಯಾನಿಂಗ್ ಮತ್ತು ಎಕ್ಸರೇ ತೆಗೆಯಬೇಕಾದ ಸಮಯದಲ್ಲಿ ವಿದ್ಯುತ್ ಇಲ್ಲದೆ ತೀವ್ರ ತೊಂದರೆ ಉಂಟಾಯಿತು. ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ಶಿಬಿರದಲ್ಲಿ ಅವಶ್ಯಕವಿದ್ದ ಸಮಯದಲ್ಲೂ ತಾಂತ್ರಿಕ ತಪಾಸಣೆಗೆ ರೋಗಿಗಳನ್ನು ಒಳಪಡಿಸಲಾಗದೆ ವೈದ್ಯರು ಅಸಹಾಯಕರಾಗಿದ್ದರು.ಆರೋಗ್ಯ ದಾಸೋಹ ಮೊದಲ ಹಂತದ ಶಿಬಿರದಲ್ಲಿ ಸಾವಿರಾರು ಜನರು ನೆರೆದಿದ್ದರು. ಆದರೆ ಎರಡನೇ ಹಂತದ ಶಿಬಿರದಲ್ಲಿ ಹೊರ ರೋಗಿಗಳಿಲ್ಲದೆ ಶಿಬಿರದಲ್ಲಿ ವೈದ್ಯರು ರೋಗಿಗಳಿಗೆ ಕಾದು ಕುಳಿತುಕೊಳ್ಳುವಂತಾಯಿತು.ಆರೋಗ್ಯ ದಾಸೋಹ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಾಹಿತಿ ನೀಡಬೇಕಾಗಿದ್ದು, ಈ ಕೆಲಸ ಮಾಡದಿರುವುದರಿಂದ ಆರೋಗ್ಯ ದಾಸೋಹದ ಮಾಹಿತಿ ಇಲ್ಲದ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದವು.ಆಸ್ಪತ್ರೆ ಶುಚಿಯಾಗಿಡಲು ಲೋಕಾಯುಕ್ತರ ಸೂಚನೆ

ಹುಣಸೂರು: ಇಲ್ಲಿನ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಲೋಕಾಯುಕ್ತರ ತಂಡ, ಆಸ್ಪತ್ರೆ ಆಡಳಿತಾಧಿಕಾರಿಗೆ ಹಲವು ಸಲಹೆ, ಸೂಚನೆ ನೀಡಿದರು.ಲೋಕಾಯುಕ್ತ ಡಿವೈಎಸ್‌ಪಿ ರಶ್ಮಿ, ಸರ್ಕಲ್ ಇಸ್ಪೆಕ್ಟರ್ ಗೋಪಾಲ್‌ಕೃಷ್ಣ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಳರೋಗಿಗಳಿಗೆ ನೀಡುತ್ತಿರುವ ಆಹಾರ ಕುರಿತು ಮಾಹಿತಿ ಸಂಗ್ರಹಿಸಿದರು. ನಂತರ ಆಸ್ಪತ್ರೆಯ ಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಿ ಶುಚಿತ್ವ ಪರಿಶೀಲನೆ ನಡೆಸಿ, ಅಸಮಾಧಾನಗೊಂಡ ಅವರು ಮುಂದಿನ ಭೇಟಿಯೊಳಗೆ ಆಸ್ಪತ್ರೆಯನ್ನು ಶುಚಿಯಾಗಿ ಇಡಬೇಕು ಎಂದು ತಾಕೀತು ಮಾಡಿದರು.ಸರ್ಕಾರ ವೈದ್ಯರಿಗಾಗಿ ಸುಸರ್ಜಿತ ನಿವಾಸವನ್ನು ನಿರ್ಮಿಸಿದ್ದರೂ ವೈದ್ಯರು ಕರ್ತವ್ಯ ನಿರ್ವಹಿಸುವ ಕೇಂದ್ರದಲ್ಲಿ ವಾಸವಿಲ್ಲದ ಬಗ್ಗೆ ದೂರು ಬಂದಿದೆ ಎಂದು ಲೋಕಾಯುಕ್ತರು ಹೇಳಿದರು. ಬಳಿಕ, ವೈದ್ಯರಿಗಾಗಿ ನಿರ್ಮಿಸಿದ ಮನೆಗಳನ್ನು ಪರಿಶೀಲಿಸಿದರು.ವೈದ್ಯಾಧಿಕಾರಿಗಳಿಗೆ ನಿರ್ಮಿಸಿದ್ದ ಮನೆಗಳು ವಾಸವಿಲ್ಲದೆ ಶಿಥಿಲಗೊಂಡಿವೆ. ಸರ್ಕಾರದ ಬೊಕ್ಕಸಕ್ಕೆ ಈ ನಡವಳಿಕೆಯಿಂದ ಸಾಕಷ್ಟು ನಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆಸ್ಪತ್ರೆ ಆವರಣದಲ್ಲಿ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ಉರುಳಿಸಲು ಸೂಚಿಸಿ, ಆಸ್ಪತ್ರೆ ಆವರಣದಲ್ಲಿ ಈ ರೀತಿ ಶಿಥಿಲಗೊಂಡ ನೀರಿನ ಟ್ಯಾಂಕ್ ಇರುವುದು ಅಪಾಯಕಾರಿ ಎಂದು ತಿಳಿದಿದ್ದರೂ ಆಡಳಿತಾಧಿಕಾರಿಗಳು ಕ್ರಮ ತೆಗೆದುಕೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣದಲ್ಲೇ ನೆಲಕ್ಕುರುಳಿಸಿ ಮುಂದಾಗಬಹುದಾದ ಅಪಾಯವನ್ನು ತಡೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry