ಆರೋಗ್ಯ: ಬೇಕಾಗಿದೆ ಮಾಹಿತಿ

7

ಆರೋಗ್ಯ: ಬೇಕಾಗಿದೆ ಮಾಹಿತಿ

Published:
Updated:

ಕಳೆದ ಎರಡು ದಶಕಗಳಲ್ಲಿ ದೇಶದ ಆರೋಗ್ಯ ಸೂಚ್ಯಂಕ ಇಳಿದಿದೆ. ಸರ್ಕಾರ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಹೂಡಿಕೆ ಅಗತ್ಯಕ್ಕೆ ತಕ್ಕಂತೆ ಇಲ್ಲ. ಇದರಿಂದ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಡವರಿಗೆ ಆರೋಗ್ಯ ಸೇವೆಗಳು ಕೈಗೆಟಕುವ ದರದಲ್ಲಿ ದೊರಕುವುದು ದುಸ್ತರವಾಗಿದೆ. ಯಾವುದೇ ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಆರೋಗ್ಯ ಸೂಚ್ಯಂಕವೂ ಸೇರಿರಬೇಕು. ಆರೋಗ್ಯ ಕಾಪಾಡಿಕೊ­ಳ್ಳಲು ಅಗತ್ಯವಾದ ಶಿಕ್ಷಣ, ಉತ್ತೇಜನ, ನಿಖರ ಮಾಹಿತಿ ದೊರಕುವಂತಹ ಸಮಗ್ರ ಆರೋಗ್ಯ ವ್ಯವಸ್ಥೆ ಜಾರಿಗೆ ಬರಬೇಕು. ಇಂತಹ ಅಗತ್ಯವನ್ನು ಮಾಧ್ಯಮಗಳು ಎತ್ತಿತೋರುವುದು ದೇಶದ ಪ್ರಸ್ತುತ ಅಗತ್ಯ.-ಇದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲ­ದಲ್ಲಿ ಆಗಸ್ಟ್ ಅಂತ್ಯದಲ್ಲಿ ಹೀಲ್ ಪ್ರತಿಷ್ಠಾನ (ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಒಕ್ಕೂಟ) ಆರೋಗ್ಯ ಕುರಿತು ಬರಹಗಾರರು ಮತ್ತು ಪತ್ರಕರ್ತರಿಗೆ ಏರ್ಪಡಿ­ಸಿದ್ದ ರಾಷ್ಟ್ರ ಮಟ್ಟದ ಮೂರನೇ ಸಮಾವೇಶದಲ್ಲಿ ವ್ಯಕ್ತವಾದ ಆಶಯ. ಮಧುಮೇಹ, ಹೃದ್ರೋಗ ಮತ್ತು ಆಹಾರ ಕ್ರಮಗಳ ಬಗ್ಗೆ ಒತ್ತು ನೀಡಿದ್ದ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ಅನಿಸಿಕೆಗಳನ್ನು ಹಂಚಿಕೊಂಡರು.ನಗರೀಕರಣದ ಹೆಚ್ಚಳದಿಂದ ಮಧುಮೇಹ ಚಿಕ್ಕ ವಯಸ್ಸಿನಲ್ಲೇ ಅಮರಿಕೊಳ್ಳುತ್ತಿದೆ. ಒಂದು ಅಧ್ಯಯನದ ಪ್ರಕಾರ 2ರಿಂದ 16 ವರ್ಷದ ಮಕ್ಕಳು ಮಧು­ಮೇಹ- 2ನೇ ಮಾದರಿಗೆ ಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ದೇಶದಲ್ಲಿ ಪ್ರತಿ ಏಳು ಸೆಕೆಂಡಿಗೆ ಒಬ್ಬ ಸಕ್ಕರೆ ಕಾಯಿಲೆಯಿಂದ ಸಾಯುತ್ತಿದ್ದಾನೆ. ಪ್ರತಿ ಮೂರು ನಿಮಿಷಕ್ಕೆ ಒಬ್ಬ ವ್ಯಕ್ತಿ ಮಧುಮೇಹ ರೋಗಿಯಾಗುತ್ತಿದ್ದಾನೆ. ಇಷ್ಟಾದರೂ ಸರ್ಕಾರ ಆರೋಗ್ಯ ಸೇವೆಗೆ ವಾರ್ಷಿಕವಾಗಿ ಖರ್ಚು ಮಾಡುತ್ತಿರುವುದು ಶೇ 21ರಷ್ಟು ಮಾತ್ರ.ಮಧುಮೇಹ ರಾಜಧಾನಿ

1998ರಿಂದಲೇ ಭಾರತವು ವಿಶ್ವದ ಮಧುಮೇಹ ರಾಜಧಾನಿಯಾಗಿದೆ. 2030ರ ಹೊತ್ತಿಗೆ ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ. ದೇಶದಲ್ಲಿ ಮಧುಮೇಹ- 2ನೇ ಮಾದರಿ ತಡವಾಗಿ ಗೊತ್ತಾಗುತ್ತಿದೆ. ಇದಕ್ಕೆ ರೋಗಿಯ ಉಪೇಕ್ಷೆ ಮತ್ತು ಕೆಲವೊಮ್ಮೆ ರೋಗವನ್ನು ಸರಿಯಾಗಿ ಪತ್ತೆ ಹಚ್ಚಲು ವೈದ್ಯರು ತೋರುವ ನಿರ್ಲಕ್ಷ್ಯವೂ ಕಾರಣ.`ನುರಿತರಲ್ಲದ ನ್ಯೂಟ್ರೀಷಿಯನ್‌ಗಳು ಮಧುಮೇಹಿಗ­ಳಿಗೆ ಮೂರ್ಖತನದ ಸಲಹೆ­ಗಳನ್ನು ನೀಡುತ್ತಾರೆ. ನಿಯ­ಮಿತ­ವಾಗಿ ಆಹಾರ ಸೇವಿಸಿ, ತಿಂದದ್ದು ಜೀರ್ಣ­ವಾಗು­ವಂತಹ ವ್ಯಾಯಾಮ ಮಾಡಿ ಎನ್ನುವ ಬದಲು, ಗ್ರಾಂ ಮತ್ತು ಕ್ಯಾಲೊರಿ­ಗಳ ಲೆಕ್ಕದಲ್ಲಿ ತಿನ್ನಿ ಎಂದು ಸಲಹೆ ನೀಡು­ತ್ತಾರೆ. ಪ್ರಾಯೋಗಿಕ­ವಾದ ಸಲಹೆ­ಗಳನ್ನು, ಸಕಾ­ರಾ­ತ್ಮಕವಾದ, ಆಹಾರದ ವಿಷಯ­ದಲ್ಲಿ ಸತ್ಯಾಸತ್ಯತೆ ಪರಿಶೀಲಿ­ಸು­ವಂತಹ ಜ್ಞಾನ ನೀಡುವ ಬದಲು ಸಾಮಾನ್ಯ­ರಿಗೆ ಅರ್ಥವಾಗದ ವಿಷಯಗಳ ಬಗ್ಗೆ ಮಾತ­ನಾಡು­ತ್ತಾರೆ. ಇದು ತಪ್ಪಬೇಕು' ಎಂದು ಅಂತರ ರಾಷ್ಟ್ರೀಯ ಮಧು­ಮೇಹ ಒಕ್ಕೂಟದ ಅಧ್ಯಕ್ಷ ಡಾ. ಎಂ.ಎಸ್.ಸಾದಿಕೋಟ್ ಸಲಹೆ ನೀಡಿದರು.ಯುವಜನರಲ್ಲಿ ಹೃದ್ರೋಗ

ಸ್ತನ ಕ್ಯಾನ್ಸರ್‌ಗಿಂತ ಹೃದ್ರೋಗದ ತೀವ್ರತೆ ಹೆಚ್ಚು. 10 ಭಾರತೀಯರ ಸಾವಿನಲ್ಲಿ ಒಬ್ಬ ಹೃದ್ರೋಗದಿಂದ ಸಾಯು­­ತ್ತಾನೆ. 2015ರ ಹೊತ್ತಿಗೆ ಹೃದ್ರೋಗದಿಂದಲೇ ಹೆಚ್ಚು ಜನರು ಸಾವನ್ನಪ್ಪುತ್ತಾರೆ. ಹೃದ್ರೋಗವು ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ 18ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ 25ರಷ್ಟು ಇದೆ. ಯುವ ಸಮುದಾಯ­ದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಏರಿಕೆ ಆಗುತ್ತಿ­ರು­ವುದು ಆತಂಕ­ಕಾರಿ. ಆದರೆ ಪಶ್ಚಿಮದ ರಾಷ್ಟ್ರಗಳಲ್ಲಿ ಇದರ ಪ್ರಮಾಣ ಕಡಿಮೆ ಇದೆ ಎಂದು ವಿಶ್ಲೇಷ­ಣೆ­ಯೊಂದು ಹೇಳಿದೆ. ದೇಶದಲ್ಲಿ ಈ ಮೊದಲು 50ರ ವಯೋಮಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದ್ರೋಗ ಈಗ 40ರ ಹೊತ್ತಿಗೇ ಕಾಣಿಸಿಕೊಳ್ಳುತ್ತಿದೆ. ಶೇ 25ರಷ್ಟು ಪ್ರಕರಣ­ಗಳಲ್ಲಿ ಹೃದ್ರೋಗ ಯಾವುದೇ ಸೂಚನೆ ನೀಡದೆ ಬರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಶೇ 10ರಷ್ಟು ಪರಿಸರ ಮಾಲಿನ್ಯ ಕಾರಣ. ಆಕ್ಸಿಡೇಟಿವ್ ಒತ್ತಡದಿಂದಲೂ ಹೃದ್ರೋಗ ಬರುತ್ತದೆ. ಇದನ್ನು ತಡೆಯಲು ಆ್ಯಂಟಿ ಆಕ್ಸಿಡೇಟಿವ್ ಬೇಕು ಎಂಬುದು ತಜ್ಞರ ಸಲಹೆ.ದೇಶದಲ್ಲಿ 6.60 ಕೋಟಿಯಷ್ಟು ಜನ ಬೊಜ್ಜಿನಿಂದ ನರಳುತ್ತಿದ್ದಾರೆ. 2030ರ ಹೊತ್ತಿಗೆ ಈ ಸಂಖ್ಯೆ 10 ಕೋಟಿಯಷ್ಟಾಗುವ ಸಾಧ್ಯತೆ ಇದೆ. ಪೌಷ್ಟಿಕಾಂಶಗಳ ಕೊರತೆ, ಅಸಮತೋಲಿತ ಆಹಾರ, ಕುಟುಂಬದೊಟ್ಟಿಗೆ ಆಹಾರ ಸೇವಿಸದಿರುವುದು, ವಿವಿಧ ಭಂಗಿಗಳಲ್ಲಿ ಕುಳಿತು ತಿನ್ನುವುದು, ಟಿ.ವಿ ವೀಕ್ಷಿಸುತ್ತಾ ತಿನ್ನು­ವುದು, ಆಹಾರ ಸೇವನೆಯಲ್ಲಿ ಸಮಯ ಪಾಲನೆ ಇಲ್ಲದಿರುವುದು, ಕಬ್ಬಿಣಾಂಶ, ಕ್ಷಾರ, ಜೀವ­ಸತ್ವದ ಕೊರತೆ, ಮನೆ ಹೊರಗಿನ ಆಹಾರ, ರಾತ್ರಿ ಪಾಳಿ ಉದ್ಯೋಗ, ಹವಾಮಾನ ಬದ­ಲಾ­ವಣೆ, ಹೆಚ್ಚು ಸಮಯ ಪ್ರವಾಸದಲ್ಲಿ ಕಳೆಯು­ವುದು, ಅವೈಜ್ಞಾನಿಕ ಸಲಹೆಗಳ ಪಾಲನೆ­­ಯಿಂ­ದಲೂ ಬೊಜ್ಜು ಬರುತ್ತದೆ ಎಂಬ ಅಧ್ಯಯನ­ಪೂರ್ಣ ಅಂಶಗಳು ಹಾಗೂ ಕೆಳಗಿನ ಸಲಹೆಗಳು ಸಮಾವೇಶದಲ್ಲಿ ವ್ಯಕ್ತವಾದವು.ಮಧುಮೇಹದ ಲಕ್ಷಣ

*ಪುರುಷರಿಗೆ 90 ಸೆಂ.ಮೀ. ಮತ್ತು ಮಹಿಳೆಯರಿಗೆ 80 ಸೆಂ.ಮೀ. ಸೊಂಟದ ಸುತ್ತಳತೆ ಮೀರಿದರೆ ಮಧುಮೇಹಕ್ಕೆ ಹತ್ತಿರ ಆಗುತ್ತಿದ್ದಾರೆ ಎಂದು ಅರ್ಥ.

*ಬಗ್ಗಿದರೆ ನಿಮ್ಮ ಪಾದಗಳು ಸ್ಪಷ್ಟವಾಗಿ ಕಾಣಬೇಕು, ಬೊಜ್ಜು ಇರಬಾರದು.

*ಒಂದು ಅಡ್ಡ ಗೆರೆ ಎಳೆದು ಅದರ ಮಧ್ಯೆ ಬಿಂದುವನ್ನು ಇರಿಸಿ. ಒಂದು ನಿರ್ದಿಷ್ಟ ಅಂತರದಿಂದ ಅದನ್ನು ಒಂದು ಕಣ್ಣು ಮುಚ್ಚಿ ಇನ್ನೊಂದು ಕಣ್ಣಿನಿಂದ ನೋಡಿ. ಆಗ ಬಿಂದು ಸ್ಪಷ್ಟವಾಗಿ ಗೆರೆಯ ಮಧ್ಯದಲ್ಲೇ ಕಾಣಿಸಬೇಕು. ಈ ಪರೀಕ್ಷೆಯನ್ನು ಎರಡು ಕಣ್ಣಿನಿಂದಲೂ ಮಾಡಿ. ಒಂದು ವೇಳೆ ಬಿಂದು ಗೆರೆ ಮಧ್ಯೆ ಕಾಣದಿದ್ದರೆ ಮಧು­ಮೇಹದ ಪ್ರಮಾಣವನ್ನು ಪರೀಕ್ಷಿಸಿ­ಕೊಳ್ಳುವುದು ಒಳಿತು.ಬೊಜ್ಜು ತಡೆಯಿರಿ

*ಆಹಾರದಲ್ಲಿ ಎಣ್ಣೆ ಅಂಶ ಸಮತೋಲನದಿಂದ ಕೂಡಿರಲಿ. ವಿವಿಧ ಬಣ್ಣಗಳ ತರಕಾರಿ ಬಳಕೆ ಸೂಕ್ತ.

*ಮಧುಮೇಹ- 1ನೇ ಮಾದರಿ ಹೆಚ್ಚಿನ ಸಂದರ್ಭದಲ್ಲಿ ಶೈಶವದಲ್ಲೇ ಇರು­ತ್ತದೆ. ಆದರೆ ಅದನ್ನು ಸರಿಯಾಗಿ ಪತ್ತೆ ಮಾಡ­ಬೇಕು. ಚಿಕಿತ್ಸೆ ನೀಡಬೇಕು. ಹಸಿವು, ವಿನಾ­ಕಾರಣ ರಚ್ಚೆ ಹಿಡಿಯುವ ಮಕ್ಕಳನ್ನು ತಜ್ಞ­ರಿಂದ ಪರೀಕ್ಷಿಸಿ ಸಕ್ಕರೆ ಕಾಯಿಲೆಯ ಮೊದಲ ಹಂತದ ಬಗ್ಗೆ ನಿಖರವಾಗಿ ತಿಳಿದುಕೊಳ್ಳಿ.

*ಆಯುರ್ವೇದ, ಅಲೋಪಥಿ, ನೈಸರ್ಗಿಕ... ಯಾವ ವಿಧಾನವಾದರೂ ಸರಿ ಒಂದನ್ನು ಅನುಸರಿಸಿ.

*ಮಾರುಕಟ್ಟೆಯಲ್ಲಿ ಸಿಗುವ ಆಹಾರ ಪದಾರ್ಥಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಂತರ ಬಳಸಿ.

*ದಿನಕ್ಕೆ ಆರು ಬಾರಿ ನಿಯಮಿತ ಅವಧಿಯಲ್ಲಿ ಆಹಾರ ಸೇವನೆ ಸೂಕ್ತ.

*ನಿಮ್ಮ ಆಹಾರದಲ್ಲಿ ಶೇ 20ರಷ್ಟು ಹಣ್ಣು-, ತರಕಾರಿ ಇರಲಿ.

*ರುಚಿಯಾಗಿದ್ದನ್ನು ತಿನ್ನಿ, ಕಡಿಮೆ ತಿನ್ನಿ. ಕೊಲೆಸ್ಟ್ರಾಲ್ ಸಸ್ಯಜನ್ಯ ಪದಾರ್ಥಗಳಲ್ಲಿ ಇರುವುದಿಲ್ಲ. ಉದಾ: ತೆಂಗು

*ಪ್ರಾಣಿಜನ್ಯ ಪದಾರ್ಥದಲ್ಲಿ ಇರುತ್ತದೆ: ಉದಾ: ಹಾಲು

*ವ್ಯಾಯಾಮದಿಂದ ಜಿಡ್ಡಿನ ಪದಾರ್ಥದಿಂದ ಶೇಖರವಾಗುವ ಕೊಬ್ಬನ್ನು ತಡೆಯಬಹುದು.

ಬೊಜ್ಜು ಹೆಚ್ಚಳಕ್ಕೆ ಕಾರಣ

*ಆಹಾರ ಪದ್ಧತಿಯಲ್ಲಿನ ಏರುಪೇರು, ನಗರೀಕರಣದಿಂದಾಗಿ ಜೀವನ ಕ್ರಮದಲ್ಲಿ ಬದಲಾವಣೆ.

*ವ್ಯಾಯಾಮದ ಕೊರತೆಯಿಂದ ಶೇ 58, ಧೂಮಪಾನದಿಂದ, ಶೇ 11, ವಾರಕ್ಕೊಮ್ಮೆ ಮದ್ಯ ಸೇವನೆಯಿಂದ ಶೇ 23ರಷ್ಟು ಬೊಜ್ಜು ಬರುತ್ತದೆ.ಆಹಾರ ಬಳಕೆ: ಸರಿ-– ತಪ್ಪು

*ಒಬ್ಬ ವ್ಯಕ್ತಿಗೆ ದಿನಕ್ಕೆ 5 ಗ್ರಾಂ ಅಥವಾ ಒಂದು ಟೇಬಲ್ ಚಮಚದಷ್ಟು ಉಪ್ಪು ಸಾಕು ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಸಲಹೆ ನೀಡಿದೆ. ಆದರೆ, ಭಾರತದಲ್ಲಿ 15 ಗ್ರಾಮ್‌ಗೂ ಹೆಚ್ಚು ಬಳಕೆ ಆಗುತ್ತಿದೆ.

*ಖಾದ್ಯ ತೈಲದಲ್ಲಿ ಪಿಯುಎಫ್‌ಎ (ಪುಫಾ) ಅಂಶ ಹೆಚ್ಚಾಗಿ ಇರಬೇಕು. ಇದು ಒಂದೇ ರೀತಿಯ ತೈಲದಲ್ಲಿ ಸಿಗುವುದಿಲ್ಲ. ಹೀಗಾಗಿ ವಿವಿಧ ರೀತಿಯ ತೈಲ ಬಳಕೆ ಸೂಕ್ತ, ಉದಾ: ಕಡಲೆಕಾಯಿ, ಸೂರ್ಯಕಾಂತಿ, ತೆಂಗು, ಸೋಯಾ ಇತ್ಯಾದಿ

*180 ಡಿಗ್ರಿಗಿಂತ ಅಧಿಕ ತಾಪದಲ್ಲಿ ಎಣ್ಣೆಯನ್ನು ಕುದಿಸಬೇಡಿ, ಒಮ್ಮೆ ಬಳಕೆ ಮಾಡಿದ ಎಣ್ಣೆಯ ಮರುಬಳಕೆ ಬೇಡ.

*ಎಣ್ಣೆಯನ್ನು ಹೊಗೆ ಬರುವಷ್ಟು ಬಿಸಿ ಮಾಡಬೇಡಿ. 120–- 130 ಡಿಗ್ರಿಯ ಒಳಗೆ ಕಾಯಿಸಿದರೆ ಸಾಕು.

*ವಿವಿಧ ರೀತಿಯ ಎಣ್ಣೆಯನ್ನು ಶೇ 70:30ರ ಅನುಪಾತದಲ್ಲಿ ಬೆರೆಸಿ ಬಳಸಿ.

*ಬಿಸಿ ಎಣ್ಣೆ, ಡಾಲ್ಡಾದಲ್ಲಿ ಮಾಡುವ ಬೇಕರಿ ತಿನಿಸುಗಳು ವರ್ಜ್ಯ. ಇದರ ಬಳಕೆಯಿಂದ `ಟ್ರಾನ್ಸ್ ಫ್ಯಾಟ್' ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry