ಗುರುವಾರ , ಮೇ 6, 2021
26 °C

ಆರೋಗ್ಯ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಸಿಸಿಯಲ್ಲಿ ಡಯಾಲಿಸಿಸ್ ಕೇಂದ್ರ

ಆಸ್ಪತ್ರೆಗಿಂತ ವಿಭಿನ್ನವಾದ ಆರೋಗ್ಯ ತಪಾಸಣೆ, ಸೌಂದರ್ಯ ಮತ್ತು ಸೌಖ್ಯ ಕೇಂದ್ರವಾದ ಕೋರಮಂಗಲದ `ಮಣಿಪಾಲ್ ಕ್ಯೂರ್ ಅಂಡ್ ಕೇರ್~ನಲ್ಲಿ ಈಗ ಅತ್ಯಾಧುನಿಕ ಡಯಾಲಿಸಿಸ್ ಘಟಕ ಕಾರ್ಯಾರಂಭ ಮಾಡಿದೆ.ಡಯಾಲಿಸಿಸ್ ಅಗತ್ಯವುಳ್ಳ ವ್ಯಕ್ತಿಗಳ ಸಂಖ್ಯೆ ವೃದ್ಧಿಸುತ್ತಿದೆ. ವಾರಕ್ಕೆ ಮೂರು ಸಲ ಡಯಾಲಿಸಿಸ್‌ಗಾಗಿ ದೂರದ ಆಸ್ಪತ್ರೆಗೆ ಹೋಗಲು ಈಗೀಗ ಬೆಂಗಳೂರಿನಂತ ನಗರದಲ್ಲಿ ಅನಾನುಕೂಲವಾಗುತ್ತಿದೆ. ಆದ್ದರಿಂದ ಅವರಿಗೆ ಹತ್ತಿರದಲ್ಲಿಯೇ ಈ ಸೇವೆ ಒದಗಿಸಬೇಕು ಎನ್ನುವ ಪರಿಕಲ್ಪನೆ ಬಲಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಮಣಿಪಾಲ ಸಮೂಹ ತನ್ನ ಸ್ನೇಹಪೂರ್ಣ ನೆರೆಹೊರೆ ಪಾಲಿಕ್ಲಿನಿಕ್‌ಗಳಲ್ಲಿ ಡಯಾಲಿಸಿಸ್ ಪ್ರಾರಂಭಿಸಿದೆ ಎಂದು ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಹೇಳಿದರು.ಡಯಾಲಿಸಿಸ್ ಸುಮಾರು ನಾಲ್ಕು ತಾಸಿನ ಪ್ರಕ್ರಿಯೆ. ಈ ಸಮಯದಲ್ಲಿ ಬೇಸರ ಕಳೆಯಲು ಇಲ್ಲಿನ ಎಲ್ಲ ಎಂಟು  ಡಯಾಲಿಸಿಸ್ ಸಾಧನಗಳಿಗೆ ಪ್ರತ್ಯೇಕ ಟಿವಿ, ಆಡಿಯೊ ಅಳವಡಿಸಲಾಗಿದೆ. ಅತ್ಯಂತ ಆಹ್ಲಾದಕರ ವಾತಾವರಣ ಸೃಷ್ಟಿಸಲಾಗಿದೆ. ಖಾಸಗಿತನ ಬಯಸುವವರಿಗಾಗಿ ಪ್ರತ್ಯೇಕ ಕ್ಯೂಬಿಕಲ್ಸ್, ಕಸ್ಟಮ್ ಡಯಾಲಿಸಿಸ್ ಕೌಚ್ ಮುಂತಾದವುಗಳಿವೆ.ಆಸ್ಪತ್ರೆಯಲ್ಲಿನ ಸೇವೆಯ ದರದಲ್ಲಿಯೇ ಇಲ್ಲೂ ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ನಗರದ ವಿವಿಧ ಕೇಂದ್ರಗಳಲ್ಲಿಯೂ ಡಯಾಲಿಸಿಸ್ ಘಟಕ ತೆರೆಯಲು ಎಂಸಿಸಿ ಉದ್ದೇಶಿಸಿದೆ  ಎಂದು ಅವರು ವಿವರಿಸಿದರು.ಸೆಂಟ್ ಜಾನ್ಸ್ ವೈದ್ಯ ಕಾಲೇಜಿನ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ಗೋಕುಲ್‌ನಾಥ್, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ‌್ಯನಿರ್ವಾಹಕ ಅಧಿಕಾರಿ ರಾಜನ್ ಪಡುಕೋಣೆ, ಎಂಸಿಸಿ ಕ್ಲಿನಿಕ್ಸ್‌ನ ವ್ಯವಹಾರ ಮುಖ್ಯಸ್ಥ ರಾಮನ್ ಭಾಸ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.ಎಚ್‌ಸಿಜಿಯಲ್ಲಿ ಲಿವರ್ ಕ್ಯಾನ್ಸರ್ ಕೇಂದ್ರ

ಕ್ಯಾನ್ಸರ್ ಎನ್ನುವುದೇ ಹಾಗೆ. ಎಂತಹ ಗಟ್ಟಿ ಮನಸ್ಸು ಇರುವವರನ್ನು ಕೂಡ ಒಂದು ಕ್ಷಣ `ಜೀವನವೇ ಬೇಡ...~ ಎನ್ನುವ ಮನಸ್ಥಿತಿಗೆ ತಂದು ನಿಲ್ಲಿಸಿಬಿಡುತ್ತದೆ. ಆದರೆ ಕ್ಯಾನ್ಸರ್‌ಗೂ ಇಂದು ಯಶಸ್ವಿ ಚಿಕಿತ್ಸೆ ಲಭ್ಯ ಇದೆ.ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರಂತೂ ಸಾವೇ ಹತ್ತಿರದಲ್ಲಿ ಇದೆಯೇನೋ ಎನ್ನುವಷ್ಟು ಭಯಪಡುವ ಸ್ಥಿತಿಯಿತ್ತು.  ಆದರೆ ಅದಕ್ಕೂ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಅವರೂ ಎಲ್ಲರಂತೆ ಸಹಜ ಜೀವನ ನಡೆಸಬಹುದು. ಈ ಹಿನ್ನೆಲೆಯಲ್ಲಿಯೇ ಕಾಳೀಂಗರಾವ್ ರಸ್ತೆಯ ಎಚ್‌ಸಿಜಿ ಆಸ್ಪತ್ರೆ ಈಗ ಆಧುನಿಕ ತಂತ್ರಜ್ಞಾನ, ಸುಸಜ್ಜಿತ ಸಲಕರಣಗಳುಳ್ಳ `ಲಿವರ್- ಯಕೃತ್ತು ಕಸಿ ಶಸ್ತ್ರಚಿಕಿತ್ಸಾ ಕೇಂದ್ರ~ ಆರಂಭಿಸಿದೆ.ಬಹುತೇಕ ವಿದ್ಯಾವಂತ ಸಮುದಾಯದಲ್ಲೂ ಯಕೃತ್ ಕಸಿ ಚಿಕಿತ್ಸೆ ಬಗ್ಗೆ ಅರಿವಿಲ್ಲ ಅನ್ನುವುದು ಕಳವಳಕಾರಿ. ಆದರೆ ಈ ಚಿಕಿತ್ಸೆಯಿಂದ ಕ್ಯಾನ್ಸರ್‌ಪೀಡಿತ ವ್ಯಕ್ತಿಯನ್ನು ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.ತೀವ್ರ ಸ್ವರೂಪದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಆಯುಷ್ಯವೇ 12 ರಿಂದ 18 ತಿಂಗಳು ಎನ್ನುವ ಪರಿಸ್ಥಿತಿ ಈಗಿಲ್ಲ. ಯಕೃತ್ತಿನ ಕಸಿ ರೋಗಿಗಳಿಗೆ ಹೊಸ ಬದುಕನ್ನು ಕಟ್ಟಿಕೊಡುತ್ತದೆ ಎಂದು ಲಿವರ್ ಕಸಿ ತಜ್ಞ ಡಾ.ಸಂಜಯ್ ಗೋಯೆಲ್ ಹೇಳುತ್ತಾರೆ.ಎಚ್‌ಸಿಜಿ ಕೇಂದ್ರದಲ್ಲಿ  ಮೊದಲ ಮತ್ತು ಎರಡನೇ ಹಂತದ ಲಿವರ್ ಕ್ಯಾನ್ಸರ್ ರೋಗಿಗಳಿಗೆ ಸಮರ್ಥ ರೀತಿಯ ಚಿಕಿತ್ಸೆ ನೀಡುವ ಸೌಲಭ್ಯಗಳಿವೆ. ಅಲ್ಲದೆ ಯಕೃತ್ತಿನ ಕಸಿ ಮಾಡುವ ತಜ್ಞ ವೈದ್ಯರಿದ್ದಾರೆ ಎಂದು ವಿವರಿಸುತ್ತಾರೆ ಎಚ್‌ಸಿಜಿಯ ಅಧ್ಯಕ್ಷ ಡಾ.ಬಿ.ಎಸ್.ಅಜಯ್ ಕುಮಾರ್.ನಾಗರಭಾವಿಯಲ್ಲಿ ಫೋರ್ಟಿಸ್ ಡಯಾಲಿಸಿಸ್

ಸರಣಿ ಆಸ್ಪತ್ರೆಗಳ ಸಮೂಹ ಫೋರ್ಟಿಸ್ ಹಾಸ್ಪಿಟಲ್ಸ್ ನಾಗರಭಾವಿಯಲ್ಲಿ ಅತ್ಯಾಧುನಿಕ ಸೌಲಭ್ಯದ ಡಯಾಲಿಸಿಸ್ ಕೇಂದ್ರ ಆರಂಭಿಸಿದೆ. ಇದರಿಂದ ದಕ್ಷಿಣ ಬೆಂಗಳೂರಿನಲ್ಲಿ ಸಮಗ್ರ ನೆಫ್ರೋ ಯುರಾಲಜಿ ಸೇವೆ ದೊರೆಯಲಿದೆ.ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದ ಈ ಸುಸಜ್ಜಿತ ಕೇಂದ್ರದಲ್ಲಿ ಒಂದೇ ಛಾವಣಿಯಡಿ ಸಮಗ್ರ, ಗುಣಮಟ್ಟದ ಡಯಾಲಿಸಿಸ್ ದೊರೆಯಲಿದೆ. ಇಲ್ಲಿನ ಡಯಾಲಿಸಿಸ್ ಘಟಕವನ್ನು ಅಮೆರಿಕದಿಂದ ಆಮದು ಮಾಡಿದ್ದು ಹೈ-ಫ್ಲಕ್ಸ್ ಮತ್ತು ಲೋ ಫ್ಲಕ್ಸ್ ಸೌಲಭ್ಯ ಒದಗಿಸಲಾಗಿದೆ. ದಿನದ 24 ಗಂಟೆಯೂ ನುರಿತ ವೈದ್ಯರು ಲಭ್ಯರಿರುತ್ತಾರೆ.

ಎಲ್ಲ ವಯಸ್ಸಿನವರಿಗೆ ಚಿಕಿತ್ಸೆಯ ಸೌಲಭ್ಯವಿದೆ. ಇದಲ್ಲದೆ ನೀರು ಶುದ್ಧೀಕರಣ ಕೇಂದ್ರವೂ ಇಲ್ಲಿದೆ. ಫೋರ್ಟಿಸ್ ನಾಗರಬಾವಿಯ ನಿರ್ದೇಶಕ (ಸೌಲಭ್ಯ) ಹರೀಶ್ ಮಣಿಯನ್ ಈ ಸಂದರ್ಭದಲ್ಲಿ ಹಾಜರಿದ್ದರು.ಬ್ಯಾಪ್ಟಿಸ್ಟ್‌ಗೆ ಗುಣಮಟ್ಟದ ಪ್ರಮಾಣಪತ್ರ

ರೋಗಿಗಳಿಗೆ ಗುಣಮಟ್ಟದ ಆರೈಕೆ ನೀಡುತ್ತಿರುವುದಕ್ಕಾಗಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ (ಬಿಬಿಎಚ್) ರಾಷ್ಟ್ರೀಯ ಆಸ್ಪತ್ರೆಗಳ ಅನುಮೋದನಾ ಮಂಡಳಿ (ಎನ್‌ಎಬಿಎಚ್) ಮತ್ತು ರಾಷ್ಟ್ರೀಯ ಪ್ರಯೋಗಾಲಯ ಅನುಮೋದನಾ ಮಂಡಳಿ (ಎನ್‌ಎಬಿಎಲ್) ಪ್ರಮಾಣಪತ್ರ ದೊರೆತಿದೆ. ಭಾರತೀಯ ಗುಣಮಟ್ಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಗಿರಿಧರ್ ಜೆ.ಗ್ಯಾನಿ ಅವರು ಬೆಂಗಳೂರಲ್ಲಿ ನಡೆದ ಸಮಾರಂಭದಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಅಲೆಕ್ಸಾಂಡರ್ ಥಾಮಸ್ ಅವರಿಗೆ ಈ ಪ್ರಮಾಣಪತ್ರ ಹಸ್ತಾಂತರಿಸಿದರು. ಸಮಿತಿಯ ಮುಖ್ಯ ಸಲಹೆಗಾರ ಡಾ.ತುಪ್ಪಿಲ್ ವೆಂಕಟೇಶ್ ಮತ್ತಿತರರು ಹಾಜರಿದ್ದರು. ಗುಣಮಟ್ಟದಲ್ಲಿ ರಾಷ್ಟ್ರಮಟ್ಟದ ಪ್ರಮಾಣ ಪತ್ರ ಪಡೆದ ದಕ್ಷಿಣ ಭಾರತದ ಏಕೈಕ ಬಹು ಸೌಲಭ್ಯದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಬಿಬಿಎಚ್ ಪಾತ್ರವಾಗಿದೆ.300 ಹಾಸಿಗೆ 700ಕ್ಕೂ ಹೆಚ್ಚು ಸಿಬ್ಬಂದಿ ಇರುವ ಈ ಆಸ್ಪತ್ರೆ ಬಡ ಹಾಗೂ ಕೆಳ ಸ್ತರದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಬಡ ರೋಗಿಗಳಿಗೆ 3 ಕೋಟಿ ರೂಪಾಯಿಗೂ ಮೇಲ್ಪಟ್ಟ ರಿಯಾಯ್ತಿ ನೀಡಿದೆ. ಇದಲ್ಲದೆ, ರೋಗ ಉಪಶಮನ ಹಾಗೂ ಸಮುದಾಯ ಆರೋಗ್ಯ ಸಂರಕ್ಷಣೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.