ಆರೋಗ್ಯ ವಿ.ವಿ: ಕಾಮಗಾರಿಗೆ ಶೀಘ್ರ ಚಾಲನೆ

7

ಆರೋಗ್ಯ ವಿ.ವಿ: ಕಾಮಗಾರಿಗೆ ಶೀಘ್ರ ಚಾಲನೆ

Published:
Updated:

ರಾಮನಗರ: `ಅರ್ಚಕರಹಳ್ಳಿ ಬಳಿ ನಿರ್ಮಿಸುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್) ನಿಗದಿ ಪಡಿಸಿದಷ್ಟು ಭೂಮಿಯನ್ನು ತಿಂಗಳೊಳಗೆ ಸ್ವಾಧೀನ ಪಡಿಸಿಕೊಂಡು, ಕಟ್ಟಡ ಕಾಮಗಾರಿ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ತಿಳಿಸಿದರು.ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಕಂದಾಯ, ಲೋಕೋಪಯೋಗಿ, ಕೆಐಎಡಿಬಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಆರ್‌ಜಿಯು ಎಚ್‌ಎಸ್ ವಿಶ್ವವಿದ್ಯಾಲಯಕ್ಕೆ ಅರ್ಚಕರಹಳ್ಳಿಯಲ್ಲಿ 216 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಗುರುತಿಸಲಾಗಿದೆ. ಇದರಲ್ಲಿ 93 ಎಕರೆಯ ಸ್ವಾಧೀನ ಕಾರ್ಯ ಇನ್ನೂ ಆಗಿಲ್ಲ. ಉಳಿದ ಜಮೀನನ್ನು ಸರ್ಕಾರ ರೈತರಿಂದ ಸ್ವಾಧೀನಕ್ಕೆ ತೆಗೆದುಕೊಂಡಿದೆ ಎಂದು ಅವರು ಪ್ರತಿಕ್ರಿಯಿಸಿದರು.ಪಹಣಿಯಲ್ಲಿ ದಾಖಲಿಸಲಾಗುವುದು: ಸ್ವಾಧೀನ ಆಗಬೇಕಿರುವ 93 ಎಕರೆ ಭೂಮಿಯನ್ನು ತಿಂಗಳೊಳಗೆ ಸ್ವಾಧೀನ ಪಡಿಸಿಕೊಂಡು, ಪಹಣಿಯಲ್ಲಿ ದಾಖಲಿಸಲಾಗುವುದು. ನಂತರ ಕಟ್ಟಡ ಕಟ್ಟುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ಅವರು ಉತ್ತರಿಸಿದರು.ಮುಂದಿನ ತಿಂಗಳ 10ರಂದು ಪುನಃ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಷ್ಟರಲ್ಲಿ ಎಲ್ಲ ಕಾರ್ಯ ಮುಗಿಸಿರಬೇಕು ಮತ್ತು ವಿ.ವಿ ನಿರ್ಮಾಣಕ್ಕೆ ಪೂರಕವಾಗಿ 216 ಎಕರೆಯ ಪಹಣಿಯನ್ನು ಸಿದ್ಧಪಡಿಸಿ ಸಭೆಗೆ ಹಾಜರುಪಡಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.ರೈತರೊಂದಿಗೆ ಮಾತುಕತೆಗೆ ಸಿದ್ಧ: ಭೂ ಪರಿಹಾರದ ಸಲುವಾಗಿ ರೈತರು ಮತ್ತು ಸರ್ಕಾರದ ನಡುವೆ ಒಮ್ಮತ ಮೂಡಿಲ್ಲ. ರೈತರು ಹೆಚ್ಚುವರಿ ಹಣ ನೀಡುವಂತೆ ಮನವಿ ಮಾಡಿದರೆ ಜಿಲ್ಲಾಧಿಕಾರಿ ಮತ್ತು ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ ರೈತರು ಭೂಮಿ ನೀಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದರು.

ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ಎಸ್.ಪಿ ಎಸ್.ಬಿ.ಬಿಸನಹಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಉಪ ವಿಭಾಗಾಧಿಕಾರಿ ನವೀನ್ ಕುಮಾರ್, ತಹಶೀಲ್ದಾರ್ ಡಾ. ರವಿ ತಿರ್ಲಾಪುರ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry