ಆರೋಗ್ಯ ಸಿಬ್ಬಂದಿ ಮುಷ್ಕರ ಬೆದರಿಕೆ

7
ಡಿಸೆಂಬರ್ 21ರಿಂದ ಎಲ್ಲ ಸೇವೆ ಬಂದ್

ಆರೋಗ್ಯ ಸಿಬ್ಬಂದಿ ಮುಷ್ಕರ ಬೆದರಿಕೆ

Published:
Updated:

ಬೆಂಗಳೂರು: `ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಗೆ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳದೇ ಇದ್ದರೆ ಇದೇ 21ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು' ಎಂದು ಕರ್ನಾಟಕ ಸರ್ಕಾರ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಹಿತರಕ್ಷಣಾ ಸಮಿತಿಯು ಹೇಳಿದೆ.ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಡಾ.ಎಚ್.ಎನ್. ರವೀಂದ್ರ, `ಡಿ.20 ರೊಳಗೆ ಸರ್ಕಾರವು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇಲ್ಲವಾದರೆ, ಡಿ.21ರಿಂದ ಸಂಪೂರ್ಣವಾಗಿ ತುರ್ತು ಚಿಕಿತ್ಸಾ ಸೇವೆಗಳು ಸೇರಿದಂತೆ, ಯಾವುದೇ ರೀತಿಯ ಸೇವೆಗಳನ್ನು ನೀಡುವುದಿಲ್ಲ. ಎಲ್ಲಾ ಆಸ್ಪತ್ರೆಗಳ ಸೇವೆಗಳನ್ನು ಬಹಿಷ್ಕರಿಸುವ ಮೂಲಕ ಮುಷ್ಕರವನ್ನು ನಡೆಸಲಾಗುವುದು' ಎಂದು ಎಚ್ಚರಿಸಿದರು.`ಸರ್ಕಾರವು ಆರೋಗ್ಯ ಇಲಾಖೆಯ ಹತ್ತು ಜಿಲ್ಲಾ ಆಸ್ಪತ್ರೆಗಳಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ಬೀದರ್, ಬೆಳಗಾವಿ, ರಾಯಚೂರು, ಶಿವಮೊಗ್ಗ, ಮಂಡ್ಯ ಮತ್ತು ಹಾಸನ ಜ್ಲ್ಲಿಲೆಗಳ ಜಿಲ್ಲಾ ಆಸ್ಪತ್ರೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಪರಿವರ್ತಿಸಿ ಸಂಪೂರ್ಣ ನಿಯಂತ್ರಣವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದೆ.ಈಗ ಕೊಡಗು, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಗದಗ, ಹಾವೇರಿ ಮತ್ತು ಕೊಪ್ಪಳಗಳಲ್ಲಿ ಹೊಸದಾಗಿ ಏಳು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇವುಗಳನ್ನು ಕೂಡ ಸ್ವಾಯತ್ತ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಆತಂಕ ಉಂಟಾಗಿದೆ. ಆದ್ದರಿಂದ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು. ಈಗಾಗಲೇ ಖಾಸಗಿಯವರ ವಶಕ್ಕೆ ನೀಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಈ ಕೂಡಲೇ ಹಿಂಪಡೆಯಬೇಕು' ಎಂದು ಒತ್ತಾಯಿಸಿದರು.`ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಿಂದ ಹೊರ ತರಬೇಕು. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಕಾಯ್ದೆಯನ್ನು ಹಿಂತೆಗೆದುಕೊಂಡು ಸೂಕ್ತ ಮಾರ್ಪಾಡುಗಳೊಂದಿಗೆ ಹೊಸ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು' ಎಂದು ಅವರು ಆಗ್ರಹಿಸಿದರು.`ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ಮನವಿಯನ್ನು ಸಲ್ಲಿಸುತ್ತಲೇ ಬಂದಿದ್ದೇವೆ. ಅನೇಕ ಬಾರಿ ಮುಷ್ಕರವನ್ನೂ ನಡೆಸಿದ್ದೇವೆ. ಆದರೆ, ಸರ್ಕಾರ ಇದುವರೆಗೂ ನಮ್ಮ ಯಾವುದೇ ಬೇಡಿಕೆಗಳಿಗೆ ಪರಿಹಾರ ಒದಗಿಸಿಲ್ಲ. ಅಲ್ಲದೇ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆರೋಗ್ಯ ಇಲಾಖೆಯ ವೈದ್ಯರನ್ನು ಕೀಳಾಗಿ ಕಾಣುತ್ತಿದ್ದಾರೆ. ಈ ಕುರಿತು ಸಚಿವ ಎಸ್.ಎ.ರಾಮದಾಸ್ ಅವರ ಧೋರಣೆಯು ಗೊಂದಲವನ್ನು ಉಂಟುಮಾಡುತ್ತಿದೆ' ಎಂದು ಅವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry