ಆರೋಗ್ಯ ಸೇವೆಗಳ ಅರಿವಿಗಾಗಿ ಕಲಾ ಜಾಥಾ

7

ಆರೋಗ್ಯ ಸೇವೆಗಳ ಅರಿವಿಗಾಗಿ ಕಲಾ ಜಾಥಾ

Published:
Updated:

ಯಾದಗಿರಿ: ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆಗಳ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶ್ವಸೇವಾ ಮಿಷನ್‌ಗಳ ಆಶ್ರಯದಲ್ಲಿ ತಾಲ್ಲೂಕಿನ ಬಳಗೇರಾ ಗ್ರಾಮದಲ್ಲಿ ಇತ್ತೀಚೆಗೆ ಕಲಾಜಾಥಾ ಹಾಗೂ ಜನಸಂವಾದ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಸೇವಾ ಮಿಷನ್‌ನ ಜಿಲ್ಲಾ ಸಂಯೋಜಕ ಲೋಹಿತಕುಮಾರ, ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಮಹಿಳೆಯರು ಇನ್ನೂ ಸಾಂಪ್ರದಾಯಿಕ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ.ಇದರಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ನಿರಂತರ ಸೇವೆ ಒದಗಿಸಲು ಸಜ್ಜುಗೊಳಿಸಲಾಗಿದೆ. ಪ್ರಾಥಮಿಕ ಕೇಂದ್ರಗಳಲ್ಲಿ ದೊರೆಯುವ ಆರೋಗ್ಯ ಸೇವೆಗಳ ಕುರಿತು ಗ್ರಾಮಸ್ಥರದಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಕಲಾ ಜಾಥಾ ತಂಡದವರು, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ರಚನೆ, ಸಮಿತಿಗೆ ಬಿಡುಗಡೆ ಆಗುವ ರೂ.10 ಸಾವಿರ ಅನುದಾನದ ಸದುಪಯೋಗ, ಗರ್ಭೀಣಿ ಮತ್ತು ಬಾಣಂತಿಯರಿಗೆ ಇರುವ ಸೇವಾ ಸೌಲಭ್ಯಗಳಾದ ಮಡಿಲು, ಜನನಿ ಸುರಕ್ಷಾ ಯೋಜನೆ, ತಾಯಿ ಭಾಗ್ಯ ಯೋಜನೆ, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ನೀಡಲಾಗುವ ಉಚಿತ ಪೌಷ್ಠಿಕ ಆಹಾರ, ಎದೆ ಹಾಲಿನ ಮಹತ್ವ, ಮಾರಕ ರೋಗಗಳ ವಿರುದ್ಧದ ಲಸಿಕೆಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ನೀಡುತ್ತಿರುವ ಸೇವಾ ಸೌಲಭ್ಯ, ದುಷ್ಚಟಗಳ ಪರಿಣಾಮ, ಲಿಂಗ ತಾರತಮ್ಯ, ಭಾಗ್ಯ ಲಕ್ಷ್ಮಿ ಯೋಜನೆ, ಎಚ್‌ಐವಿ, ಏಡ್ಸ್, ಚಿಕೂನ್ ಗುನ್ಯಾ, ಹಂದಿ ಜ್ವರ, ಇಲಿ ಜ್ವರ ಹರಡುವ ವಿಧಾನ, ಗಟ್ಟಿ ಕಸದ ನಿರ್ವಹಣೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರ ಕಾರ್ಯಗಳ ಕುರಿತು ಮಾಹಿತಿ ನೀಡಿದರು.ಜಮಖಂಡಿಯ ಕಲಾ ತಂಡದವರು ಹಾಡು ಮತ್ತು ಬೀದಿ ನಾಟಕ ಪ್ರದರ್ಶಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸದಾಶಿವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ಸಹಾಯಕ ಎಸ್.ಎ. ದೊಡ್ಡಮನಿ, ಕಿರಿಯ ಆರೋಗ್ಯ ಸಹಾಯಕಿಯರು, ಸಂಸ್ಥೆಯ ತಾಲ್ಲೂಕು ಸಂಚಾಲಕ ವಿಶ್ವನಾಥರೆಡ್ಡಿ, ದೇವಿಂದ್ರಪ್ಪ ಮುಂತಾದವರು ವೇದಿಕೆಯಲ್ಲಿದ್ದರು.ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಗಣ್ಯರು, ಬೆಳಗೇರಾ, ಮುಡ್ರಿಗಿ ಗ್ರಾಮಸ್ಥರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry