ಆರೋಗ್ಯ ಸೌಲಭ್ಯ ಎಲ್ಲರಿಗೂ ಸಿಗಲಿ

7

ಆರೋಗ್ಯ ಸೌಲಭ್ಯ ಎಲ್ಲರಿಗೂ ಸಿಗಲಿ

Published:
Updated:

ಕಾರವಾರ: ಆರೋಗ್ಯದ ಕಾರ್ಯಕ್ರಮಗಳ ಪ್ರಯೋಜನ ಸಮಾಜದ ಪ್ರತಿಯೊಬ್ಬ ಫಲಾನುಭವಿಗೂ ಸಿಗಬೇಕು ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಆಲ್ಬರ್ಟ್  ಡಿಕೋಸ್ಟ ಹೇಳಿದರು.



ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಾವಳ್ಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ  ಮುರ್ಡೇಶ್ವರದ ವಾಲಗ ಮಂಟಪದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಜನನಿ ಸುರಕ್ಷಾ ಯೋಜನೆ ಮತ್ತು ಸಂಪೂರ್ಣ ಲಸಿಕಾ ಕಾರ್ಯಕ್ರಮದ ಕುರಿತು ಬಹುಮಾಧ್ಯಮ ಪ್ರಚಾರ ಆಂದೋಲನ ಉದ್ಘಾಟಿಸಿ ಮಾತನಾಡಿದರು.



ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದೊರೆಯುವ ಆರೋಗ್ಯದ ಸೌಲಭ್ಯಗಳ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ  ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.



ಅಧ್ಯಕ್ಷತೆ ವಹಿಸಿದ್ದ ಮಾವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ನಾಗರತ್ನ ಪಡಿಯಾರ್ ಮಾತನಾಡಿ, ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ ಎಂದರು.  ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಮ್. ಪಿ. ಭಂಡಾರಿ ವಿಶೇಷ ಉಪನ್ಯಾಸ ನೀಡಿ, ತಾಯಿ ಮಡಿಲು, ಜನನಿ ಸುರಕ್ಷಾ, ಪಲ್ಸ್ ಪೋಲಿಯೋದಂತಹ ಹತ್ತಾರು ಜನಪ್ರಿಯ ಕಾರ್ಯಕ್ರಮಗಳು ಗ್ರಾಮೀಣ ಮಟ್ಟದ ಫಲಾನುಭವಿಗಳಿಗೆ ಮುಟ್ಟುವಲ್ಲಿ ಯಶಸ್ವಿಯಾಗಿವೆ. ಕ್ಯಾನ್ಸರ್, ಏಡ್ಸ್‌ನಂತಹ ಮಾರಕ ಕಾಯಿಲೆಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಮೂಡಬೇಕಿದೆ ಎಂದರು.



ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕರಾಮ ಗೌಡ ಪ್ರಾಸ್ತವಿಕ ಮಾತನಾಡಿದರು. ಮಾವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವೀಂದ್ರನಾಥ್ ಟಿ, ತಾಲ್ಲೂಕು ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ, ಅಂಗನವಾಡಿ ಮೇಲ್ವಿಚಾರಕಿ ಕಾಮಾಕ್ಷಿ ಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry