ಗುರುವಾರ , ಏಪ್ರಿಲ್ 22, 2021
28 °C

ಆರೋಪದಲ್ಲಿ ಹುರುಳಿಲ್ಲ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿರುವುದು ಮತ್ತು ಜ್ಞಾನಸ್ವೀಕಾರ ಫೌಂಡೇಷನ್ ಹಣಕಾಸು ವ್ಯವಹಾರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ,ಕುಮಾರಸ್ವಾಮಿ ಹೇಳಿದರು. ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್ ಅಂತಿಮಗೊಂಡಿತ್ತು ಎಂಬ ಯಡಿಯೂರಪ್ಪ ಹೇಳಿಕೆಗೆ ಯಾವುದೇ ಆಧಾರವಿಲ್ಲ’  ಎಂದು ದೂರಿದ ಅವರು ಟೆಂಡರ್ ಪ್ರಕ್ರಿಯೆ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದರು.ತಾವು ಅಧಿಕಾರ ತ್ಯಜಿಸುವ 45 ದಿನಗಳ ಮುನ್ನ ಭದ್ರಾ ಮೇಲ್ದಂಡೆ ಟೆಂಡರ್ ಪ್ರಕ್ರಿಯೆ ಆರಂಭವಾಗಿತ್ತು. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಬಳಿಕ ಒಂದೇ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ, ಕಾರ್ಯಾದೇಶ ನೀಡಲಾಗಿದೆ. ತಾವು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದರೆ ಗುತ್ತಿಗೆದಾರರು ಯಡಿಯೂರಪ್ಪ ಕುಟುಂಬಕ್ಕೆ ಏಕೆ ಹಣ ನೀಡುತ್ತಿದ್ದರು ಎಂದು ಪ್ರಶ್ನಿಸಿದರು.‘ಜಲ ಸಂಪನ್ಮೂಲ ಸಚಿವಬಸವರಾಜ ಬೊಮ್ಮಾಯಿ ಅವರಿಗೆ ಅಂದಾಜು ಪಟ್ಟಿ ತಯಾರಿಕೆ ಮತ್ತು ಟೆಂಡರ್ ನಡುವೆ ವ್ಯತ್ಯಾಸವೇ ತಿಳಿದಿಲ್ಲ. ಎರಡರ ಪೈಕಿ ಯಾವುದು ಮೊದಲು ನಡೆಯುತ್ತದೆ ಎಂಬುದೂ ಗೊತ್ತಿಲ್ಲ. ಬಾಯಿಗೆ ಬಂದಂತೆ ಹೇಳಿಕೆ ನೀಡುವ ಮುನ್ನ ಈ ವಿಷಯಗಳ ಬಗ್ಗೆ ಮಾಹಿತಿ ಪಡೆಯಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೆರಿಗೆ ವಂಚನೆ ವಿರುದ್ಧ ದೂರು: ‘ಕಸ್ತೂರಿ ಮಾಧ್ಯಮ ಸಂಸ್ಥೆಯ ಪಾಲುದಾರನಾಗಿ ತೆರಿಗೆ ವಂಚಿಸಿದ್ದೇನೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಆಧಾರರಹಿತ ಆರೋಪ ಮಾಡಿದ್ದಾರೆ. ಅಂತಹ ಯಾವುದೇ ಅಕ್ರಮವನ್ನೂ ನಾನು ನಡೆಸಿಲ್ಲ.  ನನ್ನ ಹೆಸರಿನಲ್ಲಿರುವ ದಾಖಲೆಗಳನ್ನು ತಿರುಚಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ’ ಎಂದು ಕುಮಾರಸ್ವಾಮಿ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.