ಆರೋಪಿಗಳಿಗೆ ಕಠಿಣ ಶಿಕ್ಷೆ: ಶಿಂಧೆ

7
ಯುವತಿ ದೇಹಸ್ಥಿತಿ ಸ್ಥಿರ; ನಂಜೇರುವ ಅಪಾಯ

ಆರೋಪಿಗಳಿಗೆ ಕಠಿಣ ಶಿಕ್ಷೆ: ಶಿಂಧೆ

Published:
Updated:

ನವದೆಹಲಿ (ಪಿಟಿಐ): 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಈಚೆಗೆ ಇಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ನಡೆಸಿ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪಿಗಳಿಗೆ `ಇತರರಿಗೆ ಪಾಠ' ಎನಿಸುವಂತಹ ಕಠಿಣ ಶಿಕ್ಷೆ ಸಿಗುವಂತಾಗಲು ಸರ್ಕಾರ ಚಿಂತನೆ ನಡೆಸಿದೆ.


`ಮೂವರು ಪುತ್ರಿಯರ ತಂದೆಯಾಗಿ ನಾನು ಇಂತಹ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಲೇಬೇಕು ಎಂದು ಆಗ್ರಹಪಡಿಸುವೆ. ಇದಕ್ಕಾಗಿ ಏನೆಲ್ಲ ಒತ್ತಡ ತರಬೇಕೊ ಅದನ್ನೆಲ್ಲ ಮಾಡಲಾಗುವುದು' ಎಂದು ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಗುರುವಾರ ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. 

 


ಎಲ್ಲ ಅತ್ಯಾಚಾರದ ಪ್ರಕರಣಗಳಂತೆಯೇ ಈ ಪ್ರಕರಣವನ್ನೂ ಮರೆತುಬಿಡಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿಂಧೆ, `ಅದು ಹೇಗೆ ನಾವು ಈ ಪ್ರಕರಣ ಮರೆಯಲು ಸಾಧ್ಯ, ನಾಳೆ ನನ್ನ ಪುತ್ರಿಯರಿಗೂ ಈ ಸ್ಥಿತಿ ಬರಬಹುದು. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ಅತ್ಯಂತ ಕಠಿಣವಾಗಿ ನಡೆದುಕೊಳ್ಳುತ್ತಿದ್ದಾರೆ' ಎಂದರು.

 


ಘಟನೆಯ ಹಿನ್ನೆಲೆಯಲ್ಲಿ ಬುಧವಾರ ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರನ್ನು ಕರೆಸಿ ಶಿಂಧೆ ಚರ್ಚೆ ನಡೆಸಿದರು. ಸುರಕ್ಷತೆ ದೃಷ್ಟಿಯಿಂದ ದೆಹಲಿಯ ಎಲ್ಲ ಸಾರ್ವಜನಿಕ ಬಸ್‌ಗಳಲ್ಲಿಯ ಪರದೆ ಹಾಗೂ ಕಿಟಕಿಗಳ ಕಪ್ಪು ಗಾಜು ಕಿತ್ತುಹಾಕಲು ಕ್ರಮ ಕೈಗೊಳ್ಳಲು ಈ ಸಂದರ್ಭ ನಿರ್ಧರಿಸಲಾಯಿತು. ಅತ್ಯಾಚಾರ ನಡೆದ ಬಸ್‌ನ ಕಿಟಕಿಗಳಿಗೆ ಪರದೆ ಹಾಕಿದ್ದು, ಕಪ್ಪು ಗಾಜು ಅಳವಡಿಸಲಾಗಿತ್ತು.

 


ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ `ಇದೊಂದು ನಾಚಿಕೆಗೇಡು ಘಟನೆ' ಎಂದು ಗೃಹ ಸಚಿವ ಹಾಗೂ ದೆಹಲಿ ಮುಖ್ಯಮಂತ್ರಿಗೆ `ಖಾರ ಪತ್ರ' ಬರೆದ ಪರಿಣಾಮ ಪೊಲೀಸ್ ಆಯುಕ್ತರೊಂದಿಗೆ ಈ ಸಭೆ ನಡೆಯಿತು.

 


ಸ್ಥಿತಿ ಸ್ಥಿರ, ನಂಜೇರುವ ಅಪಾಯ:


ಇಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯ ಸ್ಥಿತಿ ಸ್ಥಿರವಾಗಿದ್ದು ಪ್ರಜ್ಞಾ ಸ್ಥಿತಿಯಲ್ಲಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

 


ಈಗಾಗಲೇ ಯುವತಿಯ ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಜೀವರಕ್ಷಕದ ನೆರವಿನೊಂದಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿದೆ. ಸದ್ಯಕ್ಕೆ ಆಕೆಗೆ ಒದಗಿಸಲಾಗಿರುವ ಜೀವರಕ್ಷಕವನ್ನು ತೆಗೆಯುವುದಿಲ್ಲ. ರಕ್ತದ ಒತ್ತಡ ಸಾಮಾನ್ಯವಾಗಿದ್ದು ನಂಜು ಹೆಚ್ಚುವ ಅಪಾಯ ಇರುವುದರಿಂದ ನಿತ್ಯ ನಂಜು ನಿರೋಧಕ ಔಷಧಿ ನೀಡುತ್ತಿರುವುದಾಗಿ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಿ.ಡಿ. ಅಥಾಣಿ ತಿಳಿಸಿದರು. 

 


ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, `ಆಕೆಗೆ ಸಾಕಷ್ಟು ಗಾಯಗಳಾಗಿದ್ದು ಸ್ಥಿತಿ ಗಂಭೀರವಾಗಿದೆ. ಆಕೆಯ ಜೀವ ಉಳಿಸಲು ವಿದೇಶದಲ್ಲಿ ಚಿಕಿತ್ಸೆ ನೀಡುವ ಅಗತ್ಯಬಿದ್ದಲ್ಲಿ ಅದಕ್ಕೆ ಹಿಂದೇಟು ಹಾಕುವುದಿಲ್ಲ' ಎಂದು ತಿಳಿಸಿದರು.

 


ಆರೋಪಿಗಳ ಪತ್ತೆಗೆ ತಿಹಾರ್ ಜೈಲಿನಲ್ಲಿ ಗುರುವಾರ ಪರೇಡ್ ನಡೆಸಲಾಗಿದ್ದು ಈ ಪೈಕಿ ಒಬ್ಬನನ್ನು ಒಳಗಾದ ಯುವತಿಯ ಸ್ನೇಹಿತ ಗುರುತಿಸಿದ್ದಾನೆ. 

 


`ಆರೋಪಿ ಹೆಸರು ಮುಕೇಶ್ ಆಗಿದ್ದು, ತನ್ನ ಸ್ನೇಹಿತೆ ಮೇಲೆ ಈತ ಅತ್ಯಾಚಾರ ಎಸಗಿ ಅಮಾನುಷವಾಗಿ ಹೊಡೆದಿರುವುದಾಗಿ' ಪೊಲೀಸರ ಸಮ್ಮುಖ ಯುವತಿಯ ಸ್ನೇಹಿತ ಹೇಳಿಕೆ ನೀಡಿದ. ಸದ್ಯ ಮುಕೇಶ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ತಿಹಾರ್ ಜೈಲಿನಲ್ಲಿದ್ದಾನೆ.


 


`ಆ ದುಷ್ಕರ್ಮಿಗಳನ್ನು ಹಿಡಿದಿದ್ದಾರೆಯೇ?'


`ಆ ದುಷ್ಕರ್ಮಿಗಳನ್ನು ಹಿಡಿದಿದ್ದಾರೆಯೇ?' ತನ್ನನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದ ಕುಟುಂಬ ಸದಸ್ಯರಿಗೆ ಅತ್ಯಾಚಾರಕ್ಕೆ ಒಳಗಾದ ಯುವತಿ ಕೇಳಿದ ಪ್ರಶ್ನೆ ಇದು. ಯುವತಿಗೆ ಸದ್ಯ ಜೀವರಕ್ಷಕ ಅಳವಡಿಸಲಾಗಿರುವುದರಿಂದ ಮಾತನಾಡಲು ಸಾಧ್ಯವಾಗದು, ಹಾಗಾಗಿ ಆಕೆ ತನ್ನ ಅನಿಸಿಕೆಯನ್ನು ಹಾಳೆಯೊಂದರ ಮೇಲೆ ಬರೆದು ತನ್ನವರಿಗೆ ನೀಡಿದ್ದಾಳೆ. ಬುಧವಾರವೂ ಆಕೆ ತನ್ನ ತಾಯಿಯೊಂದಿಗೆ ಮಾತನಾಡಿ `ನನಗೆ ಬದುಕುವ ಆಸೆ ಇದೆ' ಎಂದು ತಿಳಿಸಿದ್ದಾಗಿ ವೈದ್ಯರು ತಿಳಿಸಿದರು.

 


`ಜೀವರಕ್ಷಕ ತೆಗೆಯುವುದಕ್ಕಿಂತ ಮುಖ್ಯವಾಗಿ ಆಕೆಯನ್ನು ಮೊದಲು ತೀವ್ರ ನಿಗಾ ಘಟಕದಿಂದ ಬಿಡುಗಡೆಗೊಳಿಸುವುದಕ್ಕೆ ಆದ್ಯತೆ ನೀಡುತ್ತಿರುವುದಾಗಿ ಡಾ. ಅಥಾಣಿ ತಿಳಿಸಿದರು. ಜೀವರಕ್ಷಕ ಅಳವಡಿಸಿರುವುದರಿಂದಾಗಿ ಆಕೆಗೆ ಮಾತನಾಡಲು ಆಗುತ್ತಿಲ್ಲ. ಆದರೆ ಆಕೆ ಮಾತನಾಡುವ ಸ್ಥಿತಿಯಲ್ಲಿದ್ದಾಳೆ ಎಂಬುದು ನಮಗೆ ಅರಿವಿದೆ ಎಂದರು. ಆಗಿರುವ ಗಾಯಗಳು ಮತ್ತಿತರ ವಿಷಯಗಳ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯದ `ಅಪರೂಪದ ಪ್ರಕರಣ' ಇದಾಗಿದೆ ಎಂದೂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.


 


 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry