ಬುಧವಾರ, ಏಪ್ರಿಲ್ 14, 2021
32 °C

ಆರೋಪಿಗಳ ಪತ್ತೆ ಭರವಸೆ ರೈತರ ಗದ್ದೆ-ತೋಟಗಳಲ್ಲಿ ಸರಣಿ ಕಳವು: ರೈತ ಕಂಗಾಲು.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರೈತರ ಗದ್ದೆ-ತೋಟಗಳಲ್ಲಿ ಈಗ ಪಂಪ್‌ಸೆಟ್ ಕಳ್ಳರ ಹಾವಳಿ ಹೆಚ್ಚಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕಿನ ಸುತ್ತಮುತ್ತಲಿನ ಗದ್ದೆ-ತೋಟಗಳಲ್ಲಿ ನಿರಂತರವಾಗಿ ಪಂಪ್‌ಸೆಟ್‌ಗಳ ಕಳವಾಗುತ್ತಿದ್ದು, ರೈತರು ಈಗ ಮತ್ತೊಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಎರಡೇ ತಿಂಗಳಲ್ಲಿ ಸಿದ್ಲಿಪುರ, ಸನ್ಯಾಸಿ-ಕೋಡಮಗ್ಗಿ, ಬಿ. ಬೀರನಹಳ್ಳಿ, ಭದ್ರಾಪುರ, ಜಾವಳ್ಳಿ ಸೇರಿದಂತೆ ಸುತ್ತಲಿನ ಗದ್ದೆ-ತೋಟಗಳಲ್ಲಿದ್ದ ಹತ್ತಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು ರಾತ್ರೋರಾತ್ರಿ ನಾಪತ್ತೆಯಾಗಿವೆ. ಈ ಬಗ್ಗೆ ಹೊಳೆಹೊನ್ನೂರು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದೂರುಗಳೂ ದಾಖಲಾಗಿವೆ. ಆದರೆ, ಪತ್ತೆಕಾರ್ಯ ಮಾತ್ರ ಈವರೆಗೆ ಆಗಿಲ್ಲ!ಡಿಸೆಂಬರ್ ಕೊನೆವಾರದಿಂದಲೇ ಪಂಪ್‌ಸೆಟ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈವರೆಗೆ ಸುಮಾರು ತಲಾ 20ಸಾವಿರ ರೂ. ಮೌಲ್ಯದ ಪಂಪ್‌ಸೆಟ್‌ಗಳು ಆಗಾಗ್ಗೆ ಕಳವಾಗುತ್ತಿವೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ. ಪೊಲೀಸರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಂಪ್‌ಸೆಟ್ ಕಳ್ಳತನಕ್ಕೂ ಕಡಿವಾಣ ಬಿದ್ದಿಲ್ಲ; ಆರೋಪಿಗಳೂ ಸಿಕ್ಕಿಲ್ಲ. ಸಾಲ ಮಾಡಿ ತಂದ ಸಾವಿರಾರು ರೂ. ಬೆಲೆಬಾಳುವ ಪಂಪ್‌ಸೆಟ್‌ಗಳು ಅನಾಯಾಸವಾಗಿ ಕಳ್ಳಕಾಕರ ಪಾಲಾಗುತ್ತಿವೆ ಎಂದು ರೈತ ಮಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ.ಪೊಲೀಸರೂ ಕಳ್ಳರೊಂದಿಗೆ ಶಾಮೀಲಾಗಿರಬಹುದೆಂಬ ಆರೋಪಗಳು ರೈತರಿಂದ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿಯೇ ರೈತರು, ಬುಧವಾರ ರಾತ್ರಿಸನ್ಯಾಸಿಕೋಡಮಗ್ಗಿ ಬಳಿಯ ಗದ್ದೆಯಲ್ಲಿ ಪಂಪ್‌ಸೆಟ್ ಕಳ್ಳರನ್ನು ಗುಮಾನಿ ಮೇಲೆ ಹಿಡಿದರೂ ಪೊಲೀಸರಿಗೆ ಒಪ್ಪಿಸಿಲ್ಲ. ಕಳ್ಳರನ್ನು ಥಳಿಸುವಷ್ಟರಲ್ಲಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.  ಭದ್ರಾಪುರ, ಬಿ. ಬೀರನಹಳ್ಳಿ, ಬೆಳಗಲುನಲ್ಲಿಯ ಗದ್ದೆಗಳಲ್ಲಿ ತಲಾ ಎರಡು ಪಂಪ್‌ಸೆಟ್‌ಗಳು ಕಳವಾಗಿದ್ದರೆ, ಜಾವಳ್ಳಿಯಲ್ಲಿ ಒಂದು ಪಂಪ್‌ಸೆಟ್ ರಾತ್ರೋರಾತ್ರಿ ಕಣ್ಮರೆಯಾಗಿದೆ. ಕಳೆದ ಡಿಸೆಂಬರ್ 24ಕ್ಕೆ ಭದ್ರಾಪುರ ಸಮೀಪದ ಗದ್ದೆಯಲ್ಲಿ ಪಂಪ್‌ಸೆಟ್ ಕಳವಾಗಿತ್ತು. ಇದರ ಬೆನ್ನಲ್ಲೇ 29ಕ್ಕೆ ಇದೇ ವ್ಯಾಪ್ತಿಯಲ್ಲಿ ಮತ್ತೊಂದು ಪಂಪ್‌ಸೆಟ್ ಕಳುವಾಗಿದೆ. ನಂತರ ತಿಂಗಳ ಅಂತರದಲ್ಲಿ ಕಳ್ಳತನದ ಪ್ರಕರಣಗಳು ಆಗಾಗ್ಗೆ ನಡೆದಿವೆ ಎಂದು ಹೊಳೆಹೊನ್ನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.ಪಂಪ್‌ಸೆಟ್ ಹಿಂದೆ ಬಿದ್ದ ಕಳ್ಳರು: ಇದುವರೆಗೆ ಊರ ಹೊರಗಿನ ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು, ಈಗ ಪಂಪ್‌ಸೆಟ್‌ಗಳ ಹಿಂದೆ ಬಿದ್ದಿದ್ದಾರೆ. ಗದ್ದೆಯಲ್ಲಿ ಹಾಕಿದ ಪಂಪ್‌ಸೆಟ್‌ಗಳು ಊರಿಂದ ದೂರ ಇರುತ್ತವೆ. ಕಾಯಲೂ ಯಾರೂ ಇರುವುದಿಲ್ಲ. ನಿರಾತಂಕವಾಗಿ ಕಳವು ಮಾಡಿಕೊಂಡು, ಗುಜರಿಗಳಿಗೆ ಹಾಕಿಬರುತ್ತಾರೆ ಎಂದು ಪೊಲೀಸರು ತಿಳಿಸುತ್ತಾರೆ. ಆರೋಪಿಗಳ ಶೋಧಕಾರ್ಯ ನಡೆದಿದೆ. ಶೀಘ್ರದಲ್ಲೇ ಪತ್ತೆ ಮಾಡಲಾಗುವುದು ಎಂದೂ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.