ಮಂಗಳವಾರ, ಮೇ 24, 2022
25 °C

ಆರೋಪಿಗಳ ಬಂಧನ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಎಸ್.ನಟರಾಜ್ ಅವರ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದೆ, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಆರ್.ಅಶೋಕ ತಿಳಿಸಿದರು.ಮುಖ್ಯಮಂತ್ರಿಗಳ ನಿವಾಸ `ಅನುಗ್ರಹ~ದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಆರೋಪಿಗಳು ಇರುವ ಸ್ಥಳ ಗೊತ್ತಾಗಿದೆ. ಶೀಘ್ರದಲ್ಲೇ ಅವರ ಬಂಧನ ನಿಶ್ಚಿತ~ ಎಂದು ಹೇಳಿದರು.ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಜನಪ್ರತಿನಿಧಿಗಳಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ದುಷ್ಕರ್ಮಿಗಳಿಂದ ಬೆದರಿಕೆ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದರು.ಇದಕ್ಕೂ ಮೊದಲು, ನಟರಾಜ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನೇತೃತ್ವದ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಿತು. ನಟರಾಜ್ ಹತ್ಯೆಗೆ ಪೊಲೀಸರು ಮತ್ತು ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ಪರಮೇಶ್ವರ್ ಆರೋಪಿಸಿದರು.ಕಾರು ಮಾಲೀಕನ ಪಾತ್ರ: ನಟರಾಜ್ ಅವರನ್ನು ಕೊಲೆ ಮಾಡಿದ ನಂತರ ಆರೋಪಿಗಳು ಬಿಟ್ಟು ಹೋಗಿರುವ ಕಾರಿನ ಮಾಲೀಕನಾದ ವಿಜಯ್‌ಕುಮಾರ್ ಸಹ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಘಟನೆ ನಂತರ ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.`ಶೃಂಗೇರಿ ಸಮೀಪದ ಕೊಪ್ಪದ ವಿಜಯ್‌ಕುಮಾರ್ ಟ್ಯಾಕ್ಸಿ ಚಾಲಕನಾಗಿದ್ದ. ಬಾಡಿಗೆ ಟ್ಯಾಕ್ಸಿ ಓಡಿಸುತ್ತಿದ್ದ ಆತ ನಟರಾಜ್ ಅವರಿಗೂ ಪರಿಚಿತನಾಗಿದ್ದ. ನಟರಾಜ್ ಅವರು ದೂರದ ಊರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿಜಯ್‌ಕುಮಾರ್‌ನನ್ನೇ ತಮ್ಮ ಕಾರು ಚಾಲಕನನ್ನಾಗಿ ಕರೆದೊಯ್ಯುತ್ತಿದ್ದರು~ ಎಂದು ಪೊಲೀಸ್ ಮೂಲಗಳು ತಿಳಿಸಿವೆ.`ಆರೋಪಿಗಳು ಬಿಟ್ಟು ಹೋಗಿರುವ ಕಾರಿನಲ್ಲಿ ಸಿಕ್ಕಿರುವ ಮೊಬೈಲ್ ಫೋನ್‌ನ ಸಿಮ್ ಕಾರ್ಡ್ ಉಮೇಶ್ ಎಂಬುವರ ಹೆಸರಿನಲ್ಲಿದೆ. ಈ ಹಿನ್ನೆಲೆಯಲ್ಲಿ ಉಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆರೋಪಿಗಳು ಉಮೇಶ್ ಅವರ ಗುರುತಿನ ಚೀಟಿ ನೀಡಿ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಈ ನಿಟ್ಟಿನಲ್ಲಿ ಮೊಬೈಲ್ ಅಂಗಡಿಯೊಂದರ ಮಾಲೀಕ ಆರೋಪಿಗಳಿಗೆ ನೆರವು ನೀಡಿದ್ದಾನೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.