ಶುಕ್ರವಾರ, ಜನವರಿ 24, 2020
16 °C
‘ಸುಪ್ರೀಂ’ ಆದೇಶವೂ ಉಲ್ಲಂಘನೆ

ಆರೋಪಿ ಅಧಿಕಾರಿ ರಕ್ಷಣೆಗೆ ಸರ್ಕಾರ

ವಿ.ಎಸ್‌.ಸುಬ್ರಹ್ಮಣ್ಯ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಆಸ್ತಿ ಹೊಂದಿದ ಆರೋಪಎದುರಿಸುತ್ತಿರುವ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ  ಯೋಜನೆ ಯ (ಕೆಎಸ್‌ಎಚ್‌ಡಿಪಿ) ಮುಖ್ಯ ಯೋಜನಾ­ಧಿಕಾರಿ ಮತ್ತು ಮುಖ್ಯ ಎಂಜಿನಿ­ಯರ್‌ ಎಸ್‌.ಸಿ. ಜಯಚಂದ್ರ ಅವರನ್ನು ರಕ್ಷಿಸಲು ರಾಜ್ಯ ಸರ್ಕಾರ ಸುಪ್ರೀಂ­ಕೋರ್ಟ್‌ ತೀರ್ಪನ್ನೇ ಉಲ್ಲಂಘಿಸಲು ಮುಂದಾಗಿದೆ.‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಮೊಕದ್ದಮೆ ಎದುರಿಸುತ್ತಿರುವ ನೌಕರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಆಪಾದಿತನ ಮನವಿ ಆಧರಿಸಿ ಮರುತನಿಖೆ, ಮರು ಪರಿಶೀಲನೆಗೆ ನಿರ್ದೇಶನ ನೀಡಲು ಅವಕಾಶ ಇಲ್ಲ’ ಎಂದು ಸುಪ್ರೀಂ­ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.ವಿಚಾರಣೆಗೆ ಅನುಮತಿ ನೀಡುವ ವಿಚಾರದಲ್ಲಿ ನ್ಯಾಯಾಲಯವೇ ರೂಪಿ­ಸಿದ ಮಾರ್ಗಸೂಚಿಗಳಲ್ಲೂ ಇದನ್ನು ಸ್ಪಷ್ಟಪಡಿಸಲಾಗಿದೆ. ಇದೇ ಮಾರ್ಗಸೂಚಿ­ಗಳನ್ನು ಜಾರಿಗೊಳಿಸಿ ಕೇಂದ್ರ ಜಾಗೃತ ಆಯೋಗ 2005ರ ಮೇ 31ರಂದು ಆದೇಶವನ್ನೂ ಹೊರಡಿಸಿತ್ತು. ಆದರೆ, ಜಯಚಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ನೀಡಲು ವಿಳಂಬ ಮಾಡುತ್ತಿರುವ ಸರ್ಕಾರ, ಆರೋಪಿ ಸಲ್ಲಿಸಿರುವ ಮನವಿ ಆಧಾರದಲ್ಲಿ ಪ್ರಕರಣದ ಮರು­ಪರಿಶೀಲನೆ ನಡೆಸುವಂತೆ ಆಗಸ್ಟ್ 29ರಂದು ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿದೆ. ಈ ಮೂಲಕ ಸುಪ್ರಿಂಕೋರ್ಟ್‌ ತೀರ್ಪು, ಮಾರ್ಗ­ಸೂಚಿ­ಯನ್ನು ಕಡೆಗಣಿಸಿದೆ.ಒಂದೂಕಾಲು ವರ್ಷದ ಬಳಿಕ ಪತ್ರ: ಹೇಮಾವತಿ ಯೋಜನೆ ಮುಖ್ಯ ಎಂಜಿನಿ­ಯರ್‌ ಹುದ್ದೆಯಲ್ಲಿದ್ದ ಜಯ­ಚಂದ್ರ ಅವರ ಮೇಲೆ 2008ರ ಡಿಸೆಂಬರ್‌ನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ನಡೆದಿತ್ತು. ದೀರ್ಘ­ಕಾಲ ತನಿಖೆ ನಡೆಸಿದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಆಪಾದಿತ ಅಧಿಕಾರಿಯು ತನ್ನ ಅಧಿ­ಕೃತ ಆದಾಯಕ್ಕೆ ಹೋಲಿಸಿದರೆ ಶೇಕಡ 102.69ರಷ್ಟು ಅಕ್ರಮ ಆಸ್ತಿ ಹೊಂದಿರುವುದನ್ನು ಪತ್ತೆ ಮಾಡಿ­ದ್ದರು. ತನಿಖಾ ವರದಿ ಸೇರಿದಂತೆ ಹಲವು ಮಹತ್ವದ ದಾಖಲೆಗ­ಳೊಂದಿಗೆ 2012ರ ಮೇ 25ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದ ಲೋಕಾ­ಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಜಯಚಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದರು.ಒಂದೂಕಾಲು ವರ್ಷದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆ.29ರಂದು ದಿಢೀರನೆ ಲೋಕಾ­ಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರವೊಂದನ್ನು ರವಾನಿಸಿರುವ ಡಿಪಿಎಆರ್‌ ಅಧಿಕಾರಿ­ಗಳು, ಜಯಚಂದ್ರ ಅವರು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುವ ಮನವಿ ಆಧರಿಸಿ ಪ್ರಕರಣದ ಮರುಪರಿಶೀಲನೆ ನಡೆಸುವಂತೆ ಕೋರಿದ್ದಾರೆ.

‘ತನಿಖಾಧಿಕಾರಿಗಳು ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ ಬಳಿಕ ಜಯಚಂದ್ರ ಅವರು ಡಿಪಿಎಆರ್‌ಗೆ ಮನವಿ ಸಲ್ಲಿಸಿ, ಅನುಮತಿ ನಿರಾಕರಿಸುವಂತೆ ಮನವಿ ಮಾಡಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ, ಪ್ರಕರಣದ ಮರುಪರಿಶೀಲನೆಗೆ ತನಿಖಾಧಿಕಾರಿಗೆ ಸೂಚನೆ ನೀಡುವಂತೆ ಒತ್ತಡ ತಂದಿದ್ದಾರೆ. ಅವರ ಮನವಿ ಆಧಾರದಲ್ಲೇ ಮರುಪರಿಶೀಲನೆಗೆ ಡಿಪಿಎಆರ್‌ನಿಂದ ಕೋರಿಕೆ ಬಂದಿದೆ’ ಎಂದು ಮೂಲಗಳು ತಿಳಿಸಿವೆ.ಆರೋಪ ಇದ್ದರೂ ಆಯಕಟ್ಟಿನ ಹುದ್ದೆ!

ಜಯಚಂದ್ರ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಲೋಕಾಯುಕ್ತ ಪೊಲೀಸರು ಒಂದೂವರೆ ವರ್ಷದ ಹಿಂದೆಯೇ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೂ, ₨ 1,500 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ನಿರ್ವಹಿಸುವ ಕೆಎಸ್‌ಎಚ್‌ಡಿಪಿಯ ಮುಖ್ಯ ಯೋಜನಾ­ಧಿಕಾರಿಯಂತಹ ಆಯಕಟ್ಟಿನ ಹುದ್ದೆಯನ್ನು ಅವರಿಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಎರಡು ಮನೆ, ಎರಡು ನಿವೇಶನ, ವಿವಿಧೆಡೆ 32 ಎಕರೆ ಜಮೀನು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಜಯಚಂದ್ರ ಬಳಿ ಪತ್ತೆಯಾಗಿತ್ತು. ಅವರು ಬರೋಬ್ಬರಿ 25 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದರು. ಅತ್ತೆ ಮತ್ತು ಭಾವಮೈ­ದು­ನನ ಹೆಸರಿನಲ್ಲಿ ಆಸ್ತಿ ಖರೀದಿಸಿ ನಂತರ ದಾನದ ರೂಪದಲ್ಲಿ ಪತ್ನಿಯ ಹೆಸರಿಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿತ್ತು. ಸರ್ಕಾರದ ಮುಂದೆಯೂ ಅದೇ ವಾದ ಮಂಡಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಕೋರ್ಟ್ ಏನು ಹೇಳಿದೆ?

‘ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿ­ಕಾರವು ಆಪಾದಿತ ಸಾರ್ವಜನಿಕ ನೌಕರನಿಗೆ ತನ್ನನ್ನು ಸಮರ್ಥಿಸಿ­ಕೊಳ್ಳಲು ಅವ­ಕಾಶ ನೀಡುವ ಪ್ರಮೇಯವೇ ಉದ್ಭವಿಸು­ವುದಿಲ್ಲ. ತನಿಖಾಧಿಕಾರಿ ಸಲ್ಲಿಸಿರುವ ವರದಿಯಲ್ಲಿನ ಅಂಶ­ಗಳು ಆರೋಪ­ವನ್ನು ಪುಷ್ಟೀಕರಿಸು­ವಂತಿ­ವೆಯೇ ಎಂಬುದನ್ನಷ್ಟೇ ಸಕ್ಷಮ ಪ್ರಾಧಿಕಾರ ನೋಡಬೇಕು’. ‘ಆಪಾದಿತ ನೌಕರ ಸಲ್ಲಿಸುವ ಮನವಿಯ ಆಧಾರದಲ್ಲಿ ತನಿಖಾ ವರದಿ­ಯಲ್ಲಿ ಸತ್ಯಾಂಶ­ವಿದೆಯೇ ಎಂಬುದನ್ನು ಪರೀಕ್ಷಿಸಲು, ಈ ಕುರಿತು ತನಿಖಾಧಿಕಾರಿಯ ಪ್ರತಿಕ್ರಿಯೆ ಕೋರಲು ಅಥವಾ ಹೆಚ್ಚಿನ ತನಿಖೆ ನಡೆಸುವಂತೆ ಸೂಚಿಸಲು ಅವಕಾಶ ಇಲ್ಲ. ಸಕ್ಷಮ ಪ್ರಾಧಿಕಾರವು ಪರ್ಯಾಯ ತನಿಖೆ ಅಥವಾ ವಿಚಾರಣೆ ನಡೆಸುವುದಕ್ಕೂ ಅವಕಾಶ ಇಲ್ಲ.

ತೀರ್ಪು ಉಲ್ಲಂಘನೆಗೆ ಬಿಡಲ್ಲ

ಜಯಚಂದ್ರ ಪ್ರಕರಣದ ಕುರಿತು ನನ್ನ ಬಳಿ ಪೂರ್ತಿ ಮಾಹಿತಿ ಇಲ್ಲ. ಆದರೆ, ವಿಚಾರಣೆಗೆ ಅನುಮತಿ ನೀಡುವ ವಿಷಯದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಉಲ್ಲಂಘಿಸಲು ಬಿಡುವುದಿಲ್ಲ. ಸರ್ಕಾರಿ ನೌಕರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಿದೆ. ಈ ಸಮಿತಿಯ ಸೂಚನೆ ಮೇರೆಗೆ ಅಂತಹ ಕೋರಿಕೆ ರವಾನೆ ಆಗಿರಬಹುದು. ತಕ್ಷಣವೇ ಪ್ರಕರಣದ ಮಾಹಿತಿ ಪಡೆದು, ಲೋಪ ಆಗಿದ್ದರೆ ಸರಿಪಡಿಸುತ್ತೇನೆ.

–ಕೌಶಿಕ್‌ ಮುಖರ್ಜಿ, ರಾಜ್ಯದ ಮುಖ್ಯ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)