ಆರೋಪಿ ಬಂಧನಕ್ಕೆ ಒತ್ತಾಯ

7

ಆರೋಪಿ ಬಂಧನಕ್ಕೆ ಒತ್ತಾಯ

Published:
Updated:

ನಂಜನಗೂಡು: ವಿದ್ಯಾರ್ಥಿಗಳನ್ನು ಅಸ್ಪೃಶ್ಯತೆಯಿಂದ ಕಾಣುವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರಕ್ಕೆ ಅಗೌರವ ತೋರಿರುವ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ದರ್ಜೆ ಸಹಾಯಕಿ ಇಂದುಮತಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಯವರು ಗುರುವಾರ ಹಗಲು-ರಾತ್ರಿ ಧರಣಿ ನಡೆಸಿದರು.ಕಳೆದ ಜ.26 ರಂದು ನಡೆದ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಧ್ವಜಸ್ತಂಬದ ಬಳಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರವನ್ನು ಗೌರವ ಸೂಚಿಸಲು ಇಡಲಾಗಿತ್ತು. ಸಂಜೆ ತೆರವು ಮಾಡುವ ಸಂದರ್ಭದಲ್ಲಿ ಕಾರಣಾಂತರ ಅಂಬೇಡ್ಕರ್ ಭಾವಚಿತ್ರ ಇಂದುಮತಿ ಮೇಜಿನ ಮೇಲೆ ಇಡಲಾಗಿತ್ತು. ಮಾರನೇ ದಿನ ಕೆಲಸಕ್ಕೆ ಬಂದಾಗ ಇಂದುಮತಿ ಅಂಬೇಡ್ಕರ್ ಭಾವಚಿತ್ರ ಕಂಡು  ಕೋಪಗೊಂಡಿದ್ದಾರೆ. ಡಿ. ಗ್ರೂಪ್ ನೌಕರರಾದ ಚಂದ್ರಮ್ಮ ಎಂಬುವರನ್ನು ಕರೆದು ಇವನ ಫೋಟೊ ಇಲ್ಲೇಕೆ ಇಟ್ಟಿದ್ದೀರಿ ಅಂತ ರೇಗಿದರು ಎನ್ನಲಾಗಿದೆ. ದಲಿತ ವಿದ್ಯಾರ್ಥಿಗಳು ಹತ್ತಿರ ಬಂದರೆ ದೂರ ನಿಲ್ಲು ಎನ್ನುತ್ತಿದ್ದರು. ಈಕೆಯ ವರ್ತನೆ ಬಗ್ಗೆ ಸಹದ್ಯೋಗಿಗಳು ಕೂಡ ಬೇಸರಗೊಡು ಪ್ರಾಂಶುಪಾಲರಿಗೆ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ  ಛಲವಾದಿ ಮಹಾಸಭಾ ಹಾಗೂ ಇನ್ನಿತರ ಸಂಘಟನೆಯವರು ಆಕೆಯ ವಿರುದ್ದ ಕಾಲೇಜು ಮುಂಭಾಗ ಗುರುವಾರ ಬೆಳಿಗ್ಗೆ ಧರಣಿ ಆರಂಭಿಸಿದರು. ಅಲ್ಲದೆ ಆಕೆಯ ವಿರುದ್ದ ಆಸ್ಪೃಶ್ಯತೆ ಆಚರಣೆ ದೂರು ದಾಖಲಿಸಿದರು. ಕಾಲೇಜು ಕೊಠಡಿಯಲ್ಲಿ ಆಕೆ ಸಹಿತ ಎಲ್ಲ ಸಿಬ್ಬಂದಿಯನ್ನು ಕೂಡಿ ಹಾಕಿ ಹೊರ ಹೋಗದಂತೆ ಮಾಡಿದರು. ವಿದ್ಯಾರ್ಥಿಗಳನ್ನು ಮಾತ್ರ ಮನೆಗೆ ಕಳುಹಿಸಲಾಯಿತು.ಸ್ಥಳಕ್ಕೆ ಭೇಟಿ ನೀಡಿದ್ದ ಉಪ ನಿರ್ದೇಶಕಿ ಕೆ.ಚಂದ್ರಮ್ಮ ಆಕೆಯ ಅಮಾನತಿಗೆ ಶಿಫಾರಸು ಮಾಡಿದರು. ಆದರೆ ಆಕೆಯನ್ನು ಬಂಧಿಸಬೇಕು ಎಂಬ ಪಟ್ಟು ಹಿಡಿದ ಪ್ರತಿಭಟನಾಕಾರರು ಧರಣಿ ಮುಂದುವರೆಸಿದರು. ಸಂಜೆ 7 ಗಂಟೆಗೆ ಆಕೆಯ ವಿಚಾರಣೆಗೆ ಪೊಲೀಸರು ಡಿವೈಎಸ್‌ಪಿ ಕಚೇರಿಗೆ ಹಾಜರು ಪಡಿಸಿದರು. ಆಕೆಯನ್ನು ಬಂಧಿಸದ ಹೊರತು ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಡಿವೈಎಸ್‌ಪಿ ಕಚೇರಿ ಮುಂದೆ ರಾತ್ರಿ 11 ಗಂಟೆ ತನಕ ಧರಣಿ ನಡೆಸಿದರು. ಹೆಚ್ಚುವರಿ ಎಸ್‌ಪಿ ಪಿ.ವೆಂಕಟಸ್ವಾಮಿ ಸ್ಥಳಕ್ಕೆ ಆಗಮಿಸಿ ಆಕೆಯನ್ನು ವಿಚಾರಣೆಗೆ ಒಳಡಿಸಿದ್ದೇವೆ, ನಂತರ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.  ಧರಣಿ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಕೊನೆಗೆ ಧರಣಿ ಅಂತ್ಯಗೊಂಡಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry