ಆರೋಪ ನಿಜವಾದರೆ ಕ್ರಿಕೆಟ್ ತ್ಯಜಿಸುವೆ

7

ಆರೋಪ ನಿಜವಾದರೆ ಕ್ರಿಕೆಟ್ ತ್ಯಜಿಸುವೆ

Published:
Updated:
ಆರೋಪ ನಿಜವಾದರೆ ಕ್ರಿಕೆಟ್ ತ್ಯಜಿಸುವೆ

ನವದೆಹಲಿ/ಜಲಂಧರ್ (ಪಿಟಿಐ): `ರೇವ್ ಪಾರ್ಟಿಯಲ್ಲಿ ನಾನು ಪಾಲ್ಗೊಂಡಿದ್ದು ಸಾಬೀತಾದರೆ ಕ್ರಿಕೆಟ್ ಆಡುವುದನ್ನೇ ನಿಲ್ಲಿಸುತ್ತೇನೆ~ ಎಂದು ಪುಣೆ ವಾರಿಯರ್ಸ್ ತಂಡದ ಆಟಗಾರ ರಾಹುಲ್ ಶರ್ಮ ಹೇಳಿದ್ದಾರೆ.ಮುಂಬೈನ ಜುಹೂ ಬೀಚ್ ಪ್ರದೇಶದಲ್ಲಿನ ಓಕ್ಸ್‌ವುಡ್ ಪ್ರೀಮಿಯರ್ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ನಡೆದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎನ್ನುವ ಆರೋಪದ ಮೇಲೆ ಲೆಗ್ ಸ್ಪಿನ್ನರ್ ಶರ್ಮ ಹಾಗೂ ಐಪಿಎಲ್‌ನ ಮತ್ತೊಬ್ಬ ಆಟಗಾರ ವೇಯ್ನ ಪಾರ್ನೆಲ್ ಅವರನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಈ ಇಬ್ಬರೂ ಆಟಗಾರರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ  ಕಳುಹಿಸಲಾಗಿದೆ. `ನಾನು ಮುಗ್ಧ ಎಂಬುದು ನನಗೆ ಗೊತ್ತಿದೆ. ಅಕಸ್ಮಾತ್ ರಕ್ತ ಪರೀಕ್ಷೆಯ ವರದಿ `ಪಾಸಿಟಿವ್~ ಆಗಿದ್ದರೆ ಕ್ರಿಕೆಟ್ ತೊರೆಯುತ್ತೇನೆ~~ ಎಂದು ಜಲಂಧರ್‌ನ ಆಟಗಾರ ಶರ್ಮ ಹೇಳಿದ್ದಾರೆ.`ವಾರಿಯರ್ಸ್ ತಂಡದ ಆಡಳಿತ ಹಾಗೂ ಸಹ ಆಟಗಾರರು ಕೂಡ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ತಂಡ ಗೆದ್ದಾಗ ಶಾಂಪೇನ್ ಕೂಡ ಮುಟ್ಟಿದ ವ್ಯಕ್ತಿ ನಾನಲ್ಲ~ ಎಂದಿದ್ದಾರೆ.`ಜನ್ಮದಿನದ ಪಾರ್ಟಿಗೆ ನನ್ನನ್ನು ಆಹ್ವಾನಿಸಿದ್ದರು. ನನ್ನ ಜೊತೆಯಲ್ಲಿ ಸಹ ಆಟಗಾರ ಪಾರ್ನೆಲ್ ಇದ್ದರು. ಈ ಹೋಟೆಲ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿರಲಿಲ್ಲ. ರಾತ್ರಿ ಏಳಕ್ಕೆ ಇಲ್ಲಿಗೆ ಬಂದಿದ್ದೆವು.  ಅರ್ಧ ಗಂಟೆ ಆಗುವಷ್ಟರಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.ಏನು ನಡೆಯುತ್ತಿದೆ ಎಂಬುದು ಆರಂಭದಲ್ಲಿ ನಮಗೆ ಗೊತ್ತಾಗಲಿಲ್ಲ. ಏನು ನಡೆಯುತ್ತಿದೆ ಎಂದು ನಾನು ಪೊಲೀಸರ ಬಳಿ ಕೇಳಿದೆ. ದಾಳಿ ನಡೆಯುತ್ತಿದೆ ಎಂದಷ್ಟೇ ಪೊಲೀಸರೇ ಹೇಳಿದರು~ ಎಂಬುದನ್ನು ರಾಹುಲ್ ಶರ್ಮ ವಿವರಿಸಿದ್ದಾರೆ. `ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ವೈದ್ಯಕೀಯ ಪರೀಕ್ಷೆಗೂ ಸ್ಪಂದಿಸಿದ್ದೇವೆ. ನಾನು ಸರಳ ಕುಟುಂಬಕ್ಕೆ ಸೇರಿದ ವ್ಯಕ್ತಿ. ನನ್ನ ಜೀವನದಲ್ಲಿ ಬಿಯರ್ ಕೂಡ ಮುಟ್ಟಿಲ್ಲ. ಇನ್ನು ರೇವ್ ಪಾರ್ಟಿಗೆ ಹಾಜರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದಿದ್ದಾರೆ.ಹೋಟೆಲ್‌ನಲ್ಲಿ ಇದ್ದದ್ದೇ ತಪ್ಪಾಯಿತು: `ಬೇರೆ ಉದ್ದೇಶಕ್ಕೆ ಹೋಟೆಲ್‌ಗೆ ಬಂದಿದ್ದ ನಾವು ಈಗ ಬಲಿಪಶುಗಳಾಗಿದ್ದೇವೆ. ಶರ್ಮ ಹಾಗೂ ನಾನು ಜನ್ಮದಿನದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಬಂದಿದ್ದೆವು.ನನ್ನ ಗೆಳೆಯನೊಬ್ಬ ಇದಕ್ಕೆ ಆಹ್ವಾನ ನೀಡಿದ್ದ. ಏಳು ಗಂಟೆಗೆ ಪೊಲೀಸರು ದಾಳಿ ನಡೆಸಿದರು. ಆದರೆ, ಈ ಹೋಟೆಲ್‌ನಲ್ಲಿ ಮಾದಕ ವಸ್ತುಗಳನ್ನು ನೀಡಲಾಗುತ್ತಿದೆ ಎಂಬ ವಿಷಯ ನಮಗೆ ಗೊತ್ತಿರಲಿಲ್ಲ. ನಾನು ಮಾದಕ ವ್ಯಸನಿ ಅಲ್ಲ. ನಾವಿಬ್ಬರೂ ನೀರು ಕುಡಿದು ನೃತ್ಯ ಮಾಡುತ್ತಿದ್ದೆವು~ ಎಂದು ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್ ಪಾರ್ನೆಲ್ ನುಡಿದಿದ್ದಾರೆ.`ಬಂಧಿಸಿದ ಬಳಿಕ ಪೊಲೀಸರು ನಮ್ಮನ್ನು ಮೂರು-ನಾಲ್ಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷೆಗಾಗಿ ರಕ್ತ ಹಾಗೂ ಮೂತ್ರ ಮಾದರಿ ಪಡೆದರು. ನಾವು ಪತ್ರಗಳಿಗೆ ಸಹಿ ಮಾಡಿದೆವು~ ಎಂದೂ 22 ವರ್ಷ ವಯಸ್ಸಿನ ಪಾರ್ನೆಲ್ ಹೇಳಿದ್ದಾರೆ. ಪಾರ್ನೆಲ್ 2011ರಲ್ಲಿ ಇಸ್ಲಾಂಗೆ ಮತಾಂತರವಾಗಿದ್ದರು.ಸದ್ಯಕ್ಕೆ ಯಾವುದೇ ಕ್ರಮವಿಲ್ಲ: ಬಿಸಿಸಿಐ

ನವದೆಹಲಿ (ಪಿಟಿಐ): 
ರಾಹುಲ್ ಶರ್ಮ ಹಾಗೂ  ವೇಯ್ನ ಪಾರ್ನೆಲ್ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಕೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.`ಘಟನೆ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್‌ಗೆ ಮಾಹಿತಿ ಇದೆ. ಆದರೆ, ಸದ್ಯ ನಡೆಯುತ್ತಿರುವ ತನಿಖೆ ಮುಗಿಯುವವರೆಗೆ ಈ ಬಗ್ಗೆ ನಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಜೊತೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ~ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry