ಆರೋಪ ನಿರಾಕರಿಸಿದ ಉಪಮೇಯರ್

ಮಂಗಳವಾರ, ಜೂಲೈ 23, 2019
20 °C

ಆರೋಪ ನಿರಾಕರಿಸಿದ ಉಪಮೇಯರ್

Published:
Updated:

ಬೆಳಗಾವಿ: “ಪಾಲಿಕೆಯ ಸಾಮಾನ್ಯ ಸಭೆ ನಡೆಸಲು ಸಹಕರಿಸಬೇಕೆಂದರೆ 20 ಲಕ್ಷ ರೂಪಾಯಿ ನೀಡಬೇಕೆಂದು ನಾನು ಕೇಳಿರುವುದಾಗಿ ಮೇಯರ್ ಮಂದಾ ಬಾಳೆಕುಂದ್ರಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ” ಎಂದು ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ಧನರಾಜ ಗವಳಿ ಪ್ರತಿಕ್ರಿಯಿಸಿದ್ದಾರೆ.“ನನ್ನ ಮೇಲೆ ಮಾಡಿರುವ ಆರೋಪವನ್ನು ಸಾಬೀತುಪಡಿಸಿದರೆ ಉಪಮೇಯರ್ ಸ್ಥಾನ ಬಿಡಲು ನಾನು ಸಿದ್ಧ. ಒಂದೊಮ್ಮೆ ಅದನ್ನು ಸಾಬೀತುಪಡಿಸುವಲ್ಲಿ ಬಾಳೇಕುಂದ್ರಿ ವಿಫಲರಾದರೆ ಮೇಯರ್ ಸ್ಥಾನವನ್ನು ಬಿಡಬೇಕು” ಎಂದು ಗವಳಿ ಸವಾಲು ಹಾಕಿದರು.ಗುರುವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, “ನನ್ನ ಪ್ರಯತ್ನದಿಂದಾಗಿ ಕನ್ನಡ ಹಾಗೂ ಉರ್ದು ಭಾಷಿಕ ಸದಸ್ಯರು ಬಾಳೇೆಕುಂದ್ರಿಯನ್ನು ನೇಮಿಸಲು ಒಪ್ಪಿಗೆ ಸೂಚಿಸಿದರು. ಹೀಗಾಗಿಯೇ ಸರ್ವ ಭಾಷಿಕ ಸಂವಿಚಾರಿ ವಿಕಾಸ ವೇದಿಕೆ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆಮಾಡಿತು” ಎಂದು ತಿಳಿಸಿದರು.“ಕಳೆದ ಉಪಮೇಯರ್ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಲೆಂದು ಮತ ಚಲಾಯಿಸಲು ಮಂದಾ ಬಾಳೆಕುಂದ್ರಿ ಸೇರಿದಂತೆ ಎಲ್ಲ ಸದಸ್ಯರು ರೂ. 50 ಸಾವಿರ ಪಡೆದುಕೊಂಡಿದ್ದಾರೆ ಎಂದು ಹಿರಿಯ ಸದಸ್ಯ ಸಂಭಾಜಿ ಪಾಟೀಲರೇ ಆರೋಪಿಸಿದ್ದಾರೆ. ಈಗ ನಾನು ಹಣ ಕೇಳುತ್ತಿದ್ದೇನೆ ಎಂದು ಆರೋಪಿಸುವ ಮುನ್ನ ಬಾಳೇಕುಂದ್ರಿ ಆತ್ಮವಿಮರ್ಶೆ ಮಾಡಿಕೊಳ್ಳಲಿ” ಎಂದು ತಿಳಿಸಿದರು.“ಬಾಳೇಕುಂದ್ರಿಯ ವರ್ತನೆ ಸರಿಯಾಗಿಲ್ಲ. ಹೀಗಾಗಿ ಎಲ್ಲ ಸದಸ್ಯರು ಅವರಿಂದ ದೂರಕ್ಕೆ ಹೋಗುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಆಯ್ಕೆಯಾಗಿರುವ ಬಾಳೆಕುಂದ್ರಿ ಮೇಯರ್ ಪಟ್ಟಕ್ಕಾಗಿ ವೇದಿಕೆಯನ್ನು ಸೇರಿಕೊಂಡಿದ್ದಾರೆ. ಈಗ ಸಂಭಾಜಿ ಪಾಟೀಲರ ಸಹಕಾರದಿಂದ ಮಹಾರಾಷ್ಟ್ರ ಪರ ಕೆಲಸ ಶುರುಮಾಡಿಕೊಂಡಿದ್ದಾರೆ”ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry