ಆರೋಪ ನಿರಾಕರಿಸಿದ ವಾದ್ರಾ

7

ಆರೋಪ ನಿರಾಕರಿಸಿದ ವಾದ್ರಾ

Published:
Updated:
ಆರೋಪ ನಿರಾಕರಿಸಿದ ವಾದ್ರಾ

ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್, ವಕೀಲ ಪ್ರಶಾಂತ್ ಭೂಷಣ್ ಪ್ರಚಾರ ಪಡೆಯುವುದಕ್ಕಾಗಿಯೇ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ನಿರಾಧಾರ ಮತ್ತು ತೇಜೋವಧೆ ಮಾಡುವಂತಹದ್ದಾಗಿದೆ ಎಂದು ರಾಬರ್ಟ್ ವಾದ್ರಾ ಪ್ರತಿಕ್ರಿಯೆ ನೀಡಿದ್ದಾರೆ.ಭೂ ಖರೀದಿಯಲ್ಲಿನ ಅವ್ಯವಹಾರದ ಆರೋಪ ಕೇಳಿಬಂದ ಎರಡು ದಿನಗಳ ನಂತರ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮೌನ ಮುರಿದು ಮಾತನಾಡಿದರು.`ಕಾನೂನು ಬದ್ಧವಾಗಿಯೇ ಕಳೆದ 21 ವರ್ಷಗಳಿಂದ ಉದ್ದಿಮೆ- ವಹಿವಾಟು ನಡೆಸಿಕೊಂಡು ಬಂದಿದ್ದೇನೆ. ಈಗ ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯಕ್ಕೆ ದೂರವಾದುದು~ ಎಂದರು. `ನನ್ನ ವರಮಾನ ಕುರಿತಂತೆ ಕೇಜ್ರಿವಾಲ್ ಮತ್ತು ಪ್ರಶಾಂತ್ ಅವರು ಬೇಕೆಂದೇ ತಪ್ಪು ಅಂಕಿ ಅಂಶಗಳನ್ನು ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಪಕ್ಷ ಕಟ್ಟುವ ಉದ್ದೇಶಕ್ಕಾಗಿಯೇ ಇಂತಹ ಅಪಾದನೆಗಳನ್ನು ಮಾಡಿ ಕೀಳು ಮಟ್ಟದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ~ ಎಂದು ದೂರಿದರು.`ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಮತ್ತು ಲೆಕ್ಕಪತ್ರಗಳನ್ನು ಸಂಬಂಧ ಪಟ್ಟ ಸರ್ಕಾರಿ ಇಲಾಖೆಗಳಿಗೆ ಕಾನೂನು ಬದ್ಧವಾಗಿಯೇ ಸಲ್ಲಿಸಿದ್ದೇನೆ. ಇದು ಪಾರದರ್ಶಕವಾಗಿದೆ. ಸತ್ಯ ತಿಳಿಯಲು ಬಯಸುವವರು ಕಾನೂನಿನಡಿಯಲ್ಲಿ ಇವುಗಳ ಪ್ರತಿಯನ್ನು ಪಡೆದುಕೊಳ್ಳಲೂ ಅವಕಾಶ ಇದೆ~ ಎಂದೂ ಅವರು ತಿಳಿಸಿದರು.ವಾದ್ರಾ ಅವರು ಡಿಎಲ್‌ಎಫ್ ಜೊತೆಗೆ ನಂಟು ಹೊಂದಿದ್ದು, ಭೂ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ. ವಾದ್ರಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಎನ್ನುವ ಕಾರಣಕ್ಕೆ ಸರ್ಕಾರ ಡಿಎಲ್‌ಎಫ್ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿದೆ ಎಂಬುದು ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಅವರ ಆರೋಪ.ಈ ಆರೋಪಕ್ಕೆ ಡಿಎಲ್‌ಎಫ್ ಶನಿವಾರ ಪ್ರತಿಕ್ರಿಯಿಸಿದ್ದು, `ವಾದ್ರಾ ಅವರೊಂದಿಗೆ ಸಂಸ್ಥೆಯು ವಾಣಿಜ್ಯ ಸಂಬಂಧವನ್ನು ಮಾತ್ರ ಹೊಂದಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸರ್ಕಾರದ ಪ್ರಭಾವ ಬಳಸಿಕೊಂಡು ಯಾವುದೇ ರೀತಿಯ ಲಾಭ ಪಡೆದುಕೊಂಡಿಲ್ಲ~ ಎಂದು ಹೇಳಿದೆ.

ಈ ಮಧ್ಯೆ, ವಾದ್ರಾ ಅವರ ಅವ್ಯವಹಾರ ವಿವಾದದ ಬಗ್ಗೆ ತನಿಖೆ ನಡೆಸಬೇಕು ಎಂಬ ಅಣ್ಣಾ ಹಜಾರೆ ಮತ್ತು ಬಿಜೆಪಿ ಒತ್ತಾಯವನ್ನು ಕಾಂಗ್ರೆಸ್ ತಳ್ಳಿಹಾಕಿದೆ.

ನೇರವಾಗಿ ಏಕೆ ಉತ್ತರಿಸುತ್ತಿಲ್ಲ- ಕೇಜ್ರಿವಾಲ್

`ಭೂ ಖರೀದಿ ಅವ್ಯವಹಾರ ಮತ್ತು ನಿರ್ಮಾಣ ಸಂಸ್ಥೆ ಡಿಎಲ್‌ಎಫ್ ಜೊತೆಗಿನ ಸಂಬಂಧ ಕುರಿತಂತೆ ರಾಬರ್ಟ್
ವಾದ್ರಾ ನಿರ್ದಿಷ್ಟವಾಗಿ ಏಕೆ ಉತ್ತರಿಸುತ್ತಿಲ್ಲ. ಅವರು ನೀಡಿರುವ ಪ್ರತಿಕ್ರಿಯೆ ಸುಳ್ಳಿನಕಂತೆ~ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಗುಡುಗಿದ್ದಾರೆ.`ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನಮ್ಮ ಉದ್ದೇಶವನ್ನೇ ವಾದ್ರಾ ಪ್ರಶ್ನಿಸಿದ್ದಾರೆ ಹೊರತು ನಾವು ಅವರ ವಿರುದ್ಧ ಎತ್ತಿರುವ ಪ್ರಶ್ನೆಗಳಿಗೆ ನಿರ್ದಿಷ್ಟವಾಗಿ ಉತ್ತರಿಸಿಲ್ಲ~ ಎಂದು ದೂರಿದ್ದಾರೆ. `ಡಿಎಲ್‌ಎಫ್ ಸಂಸ್ಥೆ ನೀಡಿರುವ ಸ್ಪಷ್ಟೀಕರಣ ಅರ್ಧ ಸತ್ಯ ಮತ್ತು ಸುಳ್ಳಿನಿಂದ ಕೂಡಿದೆ. ಅನೇಕ ಸತ್ಯಾಂಶಗಳನ್ನು ಮುಚ್ಚಿಡಲಾಗಿದೆ.

 

ಈ ಕುರಿತು ನಾವು ನಾಳೆ ವಿವರ ನೀಡುತ್ತೇವೆ. ಈಗ ಡಿಎಲ್‌ಎಫ್ ನೀಡಿರುವ ಸ್ಪಷ್ಟೀಕರಣಕ್ಕೆ ವಾದ್ರಾ ಅವರು ಅಂಟಿಕೊಳ್ಳುವರೇ ಅಥವಾ ಅವರದ್ದು ಬೇರೆಯೇ ನಿಲುವು ಇದೆಯೇ~ ಎಂದೂ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry