ಆರೋಪ: ಬಹಿರಂಗ ಚರ್ಚೆಯಾಗಲಿ - ಯಡಿಯೂರಪ್ಪ

7

ಆರೋಪ: ಬಹಿರಂಗ ಚರ್ಚೆಯಾಗಲಿ - ಯಡಿಯೂರಪ್ಪ

Published:
Updated:
ಆರೋಪ: ಬಹಿರಂಗ ಚರ್ಚೆಯಾಗಲಿ - ಯಡಿಯೂರಪ್ಪ

ಬೆಂಗಳೂರು: `ನನ್ನ ಮೇಲಿನ ಆರೋಪಗಳಿಂದ ವಿನಾಕಾರಣ ಸಮಾಜ ಮುಜುಗರ ಅನುಭವಿಸುವುದು ಇಷ್ಟವಿಲ್ಲ. ಆರೋಪಗಳ ಬಗ್ಗೆ ಮುಕ್ತ ಚರ್ಚೆ ನಡೆಯುವುದಾದರೆ ಇನ್ನೂ 10 ವರ್ಷಗಳ ಕಾಲ ಜೈಲಿನಲ್ಲಿರಲು ನಾನು ಸಿದ್ಧನಿದ್ದೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಬಸವ ವೇದಿಕೆಯು ಬಸವ ಜಯಂತಿ ಪ್ರಯುಕ್ತ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ `ಬಸವಶ್ರೀ~ ಮತ್ತು `ವಚನ ಸಾಹಿತ್ಯಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಾನು ತಪ್ಪಿತಸ್ಥನಲ್ಲ ಎಂಬ ಸತ್ಯ ನ್ಯಾಯಾಲಯದಿಂದ ಹೊರಬರಲಿದೆ. ಆಗಲಾದರೂ ಮುತ್ಸದ್ದಿಗಳು, ಬುದ್ಧಿಜೀವಿಗಳನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚಿಸಿ, ನನ್ನ ವಿರುದ್ಧ ಕೇಳಿ ಬಂದ ಆರೋಪ ಕುರಿತು ಬಹಿರಂಗ ಚರ್ಚೆ ನಡೆಸಬೇಕು~ ಎಂದು ಆಗ್ರಹಿಸಿದರು.`ಯಡಿಯೂರಪ್ಪ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಾಗ, ಜೈಲಿಗೆ ಹೋದಾಗ ಯಾರೊಬ್ಬರೂ ಚರ್ಚೆ ನಡೆಸಲಿಲ್ಲ. ಆದರೆ, ಆತನ ಪರ ಹೈಕೋರ್ಟ್ ತೀರ್ಪು ನೀಡಿದಾಗ ಮಾತ್ರ ಅದರ ವಿರುದ್ಧ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದವು. ಆರೋಪ ಸಹಜ. ಆದರೆ ನ್ಯಾಯಾಲಯ ನೀಡುವ ತೀರ್ಪುನ್ನು ಗೌರವಿಸದೇ ವೈಯಕ್ತಿಕ ಹಗೆ ಸಾಧಿಸುವ ಈ ವ್ಯವಸ್ಥೆಗೆ ಧಿಕ್ಕಾರ~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಅಧಿಕಾರಾವಧಿಯಲ್ಲಿದ್ದಾಗಲೂ, ಈಗಲೂ ಜಾತಿ, ಕುಲ, ಗೋತ್ರವನ್ನು ಬದಿಗಿಟ್ಟು ಕಾರ್ಯನಿರ್ವಹಿಸಿದ್ದೇನೆ. ವೀರಶೈವ ಧರ್ಮೀಯನಾಗಿ ಹುಟ್ಟಿರುವುದೇ ತಪ್ಪಾ?~ ಎಂದು ಪ್ರಶ್ನಿಸಿದ ಅವರು, `ರಾಜ್ಯಕ್ಕೆ ಯಾರೂ ಅನಿವಾರ್ಯವಲ್ಲ.ಮೂರೂವರೆ ವರ್ಷಗಳ ಕಾಲ ಹಲವು ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲದೇ, ಹಗಲು ದರೋಡೆಯನ್ನು ನಿಲ್ಲಿಸಿದ್ದೇನೆ. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಹೈಕೋರ್ಟ್ ತೀರ್ಮಾನದ ಕುರಿತು ವಿದ್ಯುನ್ಮಾನ ಮಾಧ್ಯಮವೊಂದರಲ್ಲಿ ಸುದೀರ್ಘ ಚರ್ಚೆ ನಡೆಸಿದಾಗ ನಿಮಗೆ ಯಾರಿಗೂ ಏನು ಅನಿಸಲೇ ಇಲ್ಲವೇ~ ಎಂದು ಸಭಿಕರನ್ನು ಪ್ರಶ್ನಿಸಿದರು.

 

`ಈವರೆಗೆ ಎಲ್ಲ ರೀತಿಯ ಪರೀಕ್ಷೆಗಳನ್ನು ಎದುರಿಸಿದ್ದೇನೆ. ನನ್ನ ಬಗೆಗಿನ ವಾಸ್ತವ ಸಂಗತಿಗಳನ್ನು ಅರಿಯದೇ ನನಗಾಗಿರುವ ಅನ್ಯಾಯವನ್ನು ನಿರ್ಲಕ್ಷಿಸಿರುವುದಕ್ಕೆ ನನ್ನ ಮನಸ್ಸಿಗೆ ಅತೀವ ನೋವಾಗಿದೆ~ ಎಂದು ಗದ್ಗಿತರಾದರು.`ಯಾವುದೇ ಕ್ಷೇತ್ರದಲ್ಲಿದ್ದರೂ ಅನ್ಯಾಯದ ವಿರುದ್ದ ಪ್ರತಿಭಟಿಸುವುದನ್ನು ಕಲಿಯಿರಿ. ನ್ಯಾಯಾಲಯದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆರೋಪ ಮುಕ್ತನಾಗಿ ಹೊರಬರುವೆ. ಸದ್ಯದಲ್ಲೇ ಒಳ್ಳೆಯ ಕಾಲವೊಂದು ನನಗಾಗಿ ಕಾಯುತ್ತಿದೆ. ಆಗ ಪಿತೂರಿ ನಡೆಸಿದವರಿಗೆಲ್ಲ ತಕ್ಕ ಉತ್ತರ ನೀಡುತ್ತೇನೆ~ ಎಂದು ಹೇಳಿದರು.ಮೌನವಹಿಸಿದ ನಾಯಕರು

ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ ಒಂದೇ ವೇದಿಕೆಯನ್ನು ಹಂಚಿಕೊಂಡರೂ ಒಬ್ಬರಿಗೊಬ್ಬರು ಮಾತನಾಡದೇ ಮಗುಮ್ಮಾಗಿ ಕುಳಿತಿದ್ದರು. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ವೇದಿಕೆ ಪ್ರವೇಶಿಸುತ್ತಿದ್ದಂತೆಯೇ ಗಣ್ಯರಿಗೆಲ್ಲ ನಮಸ್ಕರಿಸಿದರು. ಅದರಂತೆ ಯಡಿಯೂರಪ್ಪ ಅವರಿಗೂ ನಮಸ್ಕಾರ ಮಾಡಿದರು.

 

ಆದರೆ, ಯಡಿಯೂರಪ್ಪ ಗಮನಿಸಿಯೂ ಗಮನಿಸದಂತೆ ನಮಸ್ಕರಿಸದೇ ಕುಳಿತೇ ಇದ್ದರು. ಸದಾನಂದ ಗೌಡ ಮತ್ತು ಯಡಿಯೂರಪ್ಪ ಅವರು ತಮ್ಮ ಭಾಷಣಗಳಲ್ಲಿ ವಚನ ಮತ್ತು ಕವಿತೆಗಳನ್ನು ಬಳಸಿಕೊಂಡೇ ಪರಸ್ಪರ ಪರೋಕ್ಷವಾಗಿ ಟೀಕಾಸ್ತ್ರಗಳನ್ನು ಬಿಟ್ಟರು.ಹಿರಿಯ ಕವಿ ಚನ್ನವೀರ ಕಣವಿ ಅವರಿಗೆ ಸನ್ಮಾನಿಸುವ ಸಂದರ್ಭದಲ್ಲಿ ಸದಾನಂದಗೌಡ ಅವರು ಹೂವಿನ ಹಾರ ಹಾಕುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದಾಗ, ಅವರು ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೂವಿನ ಹಾರ ತೆಗೆದುಕೊಳ್ಳುವಂತೆ ಸನ್ನೆ ಮಾಡಿ, ಅವರಿಂದ ಹೂವಿನ ಹಾರ ಹಾಕಿಸಿದರು. ಅಲ್ಲದೆ, ಸದಾನಂದಗೌಡ ಅವರಿಗಿಂತ ಮುನ್ನವೇ ತಮ್ಮ ಭಾಷಣವನ್ನು ಮುಗಿಸಿ ಯಡಿಯೂರಪ್ಪ ಸಭೆಯಿಂದ ನಿರ್ಗಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry