ಆರ್ಚರಿ ಪದಕದ ಬರ ನೀಗಿಸುವರೇ ದೀಪಿಕಾ?

7

ಆರ್ಚರಿ ಪದಕದ ಬರ ನೀಗಿಸುವರೇ ದೀಪಿಕಾ?

Published:
Updated:
ಆರ್ಚರಿ ಪದಕದ ಬರ ನೀಗಿಸುವರೇ ದೀಪಿಕಾ?

ಭಾರತದ ಆರ್ಚರಿ(ಬಿಲ್ಲುಗಾರಿಕೆ) ವಿಷಯ ಬಂದಾಗಲೆಲ್ಲಾ ಸದ್ಯಕ್ಕಂತೂ ಮೊದಲು ನೆನಪಾಗುವ  ಹೆಸರು ದೀಪಿಕಾ ಕುಮಾರಿ.  ಕೆಲ ವರ್ಷಗಳ ಹಿಂದೆ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರಿ ಇಳಿದ ದೀಪಿಕಾ ಅವರನ್ನು ನೆನಪಿಸಿಕೊಳ್ಳಲು ಕಾರಣವಿದೆ. ಕಳೆದ  ವಾರ  ಚೀನಾದ ಶಾಂಘೈನಲ್ಲಿ  ನಡೆದ ವಿಶ್ವಕಪ್‌ ನಲ್ಲಿ ವಿಶ್ವದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದ 72 ಆ್ಯರೊ ರ್ಯಾಂಕಿಂಗ್ ರೌಂಡ್‌ನಲ್ಲಿ ದೀಪಿಕಾ 720ರ ಪೈಕಿ 686 ಪಾಯಿಂಟ್ಸ್‌  ಗಳಿಸುವ ಮೂಲಕ ಕೊರಿಯಾದ ಕೀ ಬೊ ಬೇ ದಾಖಲೆಯನ್ನು ಸರಿಗಟ್ಟಿದರು.2015ರಲ್ಲಿ ಬೇ ಅವರು 70 ಮೀಟರ್‌ ಅಂತರ ದಿಂದ 72 ಬಾಣಗಳಲ್ಲಿ 686 ಸ್ಕೋರ್‌ ಮಾಡಿದ್ದರು. ಅದು ವಿಶ್ವದಾಖಲೆ ಆಗಿತ್ತು. ಅದಕ್ಕೂ ಮೊದಲು ದಕ್ಷಿಣ ಕೊರಿಯಾದವರೇ ಆದ ಪಾರ್ಕ್‌ ಸಂಗ್‌ಹ್ಯುನ್‌ 682 ಸ್ಕೋರ್‌ ಮಾಡಿದ್ದು ದಾಖಲೆ ಎನಿಸಿತ್ತು. ಕೊರಿಯಾದ ಇಮ್ ಡಾಂಗ್ ಹ್ಯುನ್ 72  ಆ್ಯೊರೊ ರೌಂಡ್‌ನಲ್ಲಿ 699 ಪಾಯಿಂಟ್‌ಗಳನ್ನು ಗಳಿಸಿದ್ದು ಸದ್ಯ ರಿಕರ್ವ್ ಪುರುಷರ ವೈಯಕ್ತಿಕ ವಿಭಾಗದಲ್ಲಿರುವ ವಿಶ್ವದಾಖಲೆ.ಬಾಲ್ಯದಲ್ಲಿ ಮಾವುಗಳಿಗೆ ಕಲ್ಲು ಬೀಸುತ್ತಲೇ ಗುರಿ ಹಿಡಿಯುವುದನ್ನು  ರೂಢಿಸಿಕೊಂಡು ಆರ್ಚರಿ ದಾರಿ ತುಳಿದವರು ಜಾರ್ಖಂಡ್‌ನ ದೀಪಿಕಾ ಕುಮಾರಿ. ಬಿದಿರಿನ ಬಿಲ್ಲು–ಬಾಣಗಳನ್ನು ಬಿಟ್ಟು ವೃತ್ತಿಪರ ಸಾಧನಗಳನ್ನು ಹಿಡಿದ ಮೇಲೆ ಪದಕಗಳ ಮೂಲಕ ಹೆಜ್ಜೆ ಗುರುತು ಮೂಡಿಸುತ್ತ ಬರುತ್ತಿದ್ದಾರೆ.ಪದಕ ನಿರೀಕ್ಷೆ...

ಕಳೆದ ವರ್ಷವೇ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ದೀಪಿಕಾ ಅವರತ್ತ ದೇಶವು ಚೊಚ್ಚಲ ಪದಕ ನಿರೀಕ್ಷೆಯೊಂದಿಗೆ ಆಸೆಗಣ್ಣಿನಿಂದ ನೋಡುತ್ತಿದೆ.

ದೀಪಿಕಾ ಮೊದಲ ಬಾರಿಗೆ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಆಗ ವಿಶ್ವದ ಅಗ್ರ ಕ್ರಮಾಂಕದಲ್ಲಿದ್ದರು. ಅಂದು ಆ ಆತ್ಮವಿಶ್ವಾಸ ಅವರ ಬೆನ್ನಿಗಿತ್ತು. ಆದರೆ ಮೊದಲ ಸುತ್ತಿನಲ್ಲೇ ವೈಫಲ್ಯ ಕಂಡಿದ್ದರು. ಅದಾಗಿ ನಾಲ್ಕು ವರ್ಷ ಕಳೆದಿವೆ. 2012ರ ಲಂಡನ್‌ ಒಲಿಂಪಿಕ್ಸ್ ಬಳಿಕ  ದೀಪಿಕಾ, ವೈಯಕ್ತಿಕ ಹಾಗೂ ತಂಡ ವಿಭಾಗ ಸೇರಿದಂತೆ  ಹಲವು ಪದಕ ಗೆದ್ದಿದ್ದಾರೆ. ಇದೀಗ ವಿಶ್ವದಾಖಲೆ ಸರಿಗಟ್ಟಿ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಪದಕ ಸಾಧನೆಯಿಂದ ಸಿಕ್ಕ ವಿಶ್ವಾಸ, ಅನುಭವ ಸದ್ಯ ಅವರ ಬೆನ್ನಿಗಿರುವ ಬಲ.ವಿಶ್ವ  ಏಳನೇ ಕ್ರಮಾಂಕದಲ್ಲಿರುವ ದೀಪಿಕಾ, ಫಿಟ್‌ನೆಸ್‌ ಹಾಗೂ ಸಾಮರ್ಥ್ಯ ಗಮನಾರ್ಹವಾಗಿ ವೃದ್ಧಿಸಿಕೊಂಡಿದ್ದಾರೆ. ಅವರ ಬಿಲ್ಲಿನ ತೂಕ  ಕಳೆದ ನಾಲ್ಕು ವರ್ಷದಲ್ಲಿ 38 ರಿಂದ 42  ಪೌಂಡ್‌ಗೆ ಏರಿದೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಟ್ಟದ ಬಹುತೇಕ ಬಿಲ್ಲುಗಾರ್ತಿಯರು ಬಳಸುವುದು 40 ಪೌಂಡ್‌ಗಳ ಬಿಲ್ಲು. ಅಮೋಘ ನಿಯಂತ್ರಣ ಸಾಧಿಸಿದ ಕೆಲವೇ ಕೆಲವು ನಿಪುಣ ಅಥ್ಲಿಟ್‌ಗಳು ಮಾತ್ರವೇ 42 ಪೌಂಡ್‌ಗಳ ಬಿಲ್ಲು ಬಳಸುತ್ತಾರೆ. ಬಾಣದ ವೇಗ ಹೆಚ್ಚಿಸಲು, ಗಾಳಿಯನ್ನು ಸೀಳುತ್ತಾ ನಿಖರವಾಗಿ ಗುರಿ ಸೇರಲು ಇದು ಸಹಕಾರಿ.ಅಕಾಡೆಮಿ ಸೇರಿ ಪುಳಕದಿಂದ ತರಬೇತಿಯಲ್ಲಿ ಮಗ್ನರಾಗಿದ್ದ ದೀಪಿಕಾ, 3 ವರ್ಷಗಳ ತನಕ ಮನೆಯತ್ತ ತಿರುಗಿಯೂ ನೋಡಿರಲಿಲ್ಲ. 2009ರಲ್ಲಿ ಕೆಡೆಟ್‌ ವಿಶ್ವಚಾಂಪಿಯನ್‌ಷಿಪ್‌ ಗೆದ್ದಾಗಲೇ ಅವರು ಮನೆಗೆ ಮರಳಿದ್ದು. ಇದು ಬಿಲ್ಲುಗಾರಿಕೆ ಮೇಲಿನ ಅವರ ಬದ್ಧತೆಗೆ ಸಾಕ್ಷಿ. ಇದೇಗ ವಿಶ್ವದಾಖಲೆ ಸಮಗಟ್ಟಿದ ಬಳಿಕ  ದೀಪಿಕಾ ಹೇಳಿದ ಮಾತು ಅವರ ಬದ್ಧತೆಗೆ ಮತ್ತೊಂದು ನಿದರ್ಶನ: ‘ದಾಖಲೆ ನಿರ್ಮಾಣದ ಉದ್ದೇಶವೇ ಮನದಲ್ಲಿ ಇರಲಿಲ್ಲ. ನಾನು ಬರೀ ಗುರಿಯತ್ತ ಗಮನ ಕೇಂದ್ರೀಕರಿಸಿದ್ದೆ. ಉತ್ತಮ ಪ್ರದರ್ಶನ ನೀಡುವ ಉದ್ದೇಶವಷ್ಟೇ ನನ್ನದಾಗಿತ್ತು’.ಒಲಿಂಪಿಕ್ಸ್‌ನಲ್ಲಿ ಭಾರತ...

ಒಲಿಂಪಿಕ್ಸ್‌ ಆರ್ಚರಿಯಲ್ಲಿ ಭಾರತ ಮೊದಲ ಬಾರಿಗೆ ಸ್ಪರ್ಧಿಸಿದ್ದು 1988ರ ಟೂರ್ನಿಯಲ್ಲಿ. ಅಂದಿ ನಿಂದ ಈತನಕ  ಬಿಲ್ಲುಗಾರಿಕೆಯಲ್ಲಿ  ಮಹಿಳಾ ತಂಡವು ಎರಡು ಸಾರಿ ಕ್ವಾರ್ಟರ್‌ ಫೈನಲ್ ತಲುಪಿದ್ದೇ ಭಾರತದ ಸಾಧನೆ. 2004ರ ಅಥೆನ್ಸ್ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮೂಡಿ ಬಂದಿತ್ತು.

ಶೂಟಿಂಗ್‌ಗಿಂತಲೂ ತುಸು ಹೆಚ್ಚು ಏಕಾಗ್ರತೆ ಬೇಡುವ ಬಿಲ್ಲುಗಾರಿಕೆಯಲ್ಲಿ ಸಾಧನೆ ಸುಲಭವಲ್ಲ. ದಕ್ಷಿಣ ಕೊರಿಯಾ ಸ್ಪರ್ಧಿಗಳ ಸವಾಲೂ ದೊಡ್ಡದಿದೆ. ಯಾವುದೇ ಟೂರ್ನಿಯಲ್ಲೂ ಲೀಲಾಜಾಲವಾಗಿ ಪದಕ ಬಾಚುವ ಕಲೆ  ಅವರಿಗೆ ಕರಗತವಾಗಿದೆ. ಅವರ ಏಕಸ್ವಾಮ್ಯ ಮುರಿಯುವ ಸವಾಲು ದೀಪಿಕಾ ಎದುರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry