ಸೋಮವಾರ, ಮಾರ್ಚ್ 8, 2021
31 °C
ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅತನು ದಾಸ್‌ ಹೊರಕ್ಕೆ

ಆರ್ಚರಿ: ಬರಿಗೈಲಿ ಮರಳಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್ಚರಿ: ಬರಿಗೈಲಿ ಮರಳಿದ ಭಾರತ

ರಿಯೊ ಡಿ ಜನೈರೊ (ಪಿಟಿಐ): ಭಾರತದ ಅತನು ದಾಸ್‌ ಪುರುಷರ ವೈಯಕ್ತಿಕ ರಿಕರ್ವ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ರಿಯೊ ಒಲಿಂಪಿಕ್ಸ್‌ನ ಆರ್ಚರಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.ಶುಕ್ರವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಅತನು 4–6 ರಲ್ಲಿ  ದಕ್ಷಿಣ ಕೊರಿಯದ ಲೀ ಸುಂಗ್‌–ಯುನ್‌ ಕೈಯಲ್ಲಿ ಪರಾಭವಗೊಂಡರು. ಭಾರತದ ಆಟಗಾರ ಸೋಲು ಅನುಭವಿಸುವ ಮುನ್ನ ವಿಶ್ವದ ಎಂಟನೇ ರ‍್ಯಾಂಕ್‌ನ ಆಟಗಾರನಿಗೆ ಪ್ರಬಲ ಪೈಪೋಟಿ ಒಡ್ಡಿದರು.

ಮಳೆಯ ನಡುವೆಯೇ ನಡೆದ ಹಣಾಹಣಿಯಲ್ಲಿ ಅತನು ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ಪ್ರಮುಖ ಘಟ್ಟದಲ್ಲಿ ಎಡವಿದ ಕಾರಣ ಸೋಲು ಎದುರಾಯಿತು.ಕೊರಿಯದ ಬಿಲ್ಲುಗಾರ ಮೊದಲ ಸೆಟ್‌ನಲ್ಲಿ ಎಲ್ಲ ಮೂರು ಅವಕಾಶಗಳಲ್ಲೂ 10 ಪಾಯಿಂಟ್‌ ಕಲೆಹಾಕಿ 30–28 ರಲ್ಲಿ ಗೆಲುವು ಪಡೆದು 2–0 ರಲ್ಲಿ ಮುನ್ನಡೆ ಪಡೆದರು.

ಇದರಿಂದ ಎದೆಗುಂದದ ಅತನು ಎರಡನೇ ಸೆಟ್‌ನಲ್ಲಿ ಸತತವಾಗಿ 10 ಪಾಯಿಂಟ್‌ ಸಂಗ್ರಹಿಸಿ 30–28 ರಲ್ಲಿ ಜಯ ಸಾಧಿಸಿದರು. ಇದರಿಂದ 2–2 ರಲ್ಲಿ ಸಮಬಲ ಕಂಡುಬಂತು.ಮೂರನೇ ಸೆಟ್‌ 27–27 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು (3–3). ಆದರೆ ನಾಲ್ಕನೇ ಸೆಟ್‌ಅನ್ನು 28–27 ರಲ್ಲಿ ಗೆದ್ದ  ಲೀ 5–3 ರಲ್ಲಿ ಮಹತ್ವದ ಮುನ್ನಡೆ ಪಡೆದರು.ಐದನೇ ಸೆಟ್‌ನಲ್ಲಿ ತಲಾ ಎರಡು ಅವಕಾಶಗಳ ಬಳಿಕ ಇಬ್ಬರೂ 19–19 ರಲ್ಲಿ ಸಮಬಲ ಸಾಧಿಸಿದ್ದರು. ಕೊನೆಯ ಅವಕಾಶದಲ್ಲಿ ಲೀ 9 ಪಾಯಿಂಟ್‌ ಪಡೆದರು. ಸೆಟ್‌ ಗೆಲ್ಲಬೇಕಿದ್ದರೆ ಅತನು ಕೊನೆಯ ಅವಕಾಶದಲ್ಲಿ 10 ಪಾಯಿಂಟ್‌ ಕಲೆಹಾಕಬೇಕಿತ್ತು. ಆದರೆ 9 ಪಾಯಿಂಟ್‌ ಮಾತ್ರ ಗಿಟ್ಟಿಸಿಕೊಂಡರು. ಐದನೇ ಸೆಟ್‌ 28–28 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಲೀ ಅಂತಿಮವಾಗಿ ಪಂದ್ಯವನ್ನು 6–4 ರಲ್ಲಿ ಗೆದ್ದುಕೊಂಡರು. ಅಂತಿಮ ಸೆಟ್‌ನಲ್ಲಿ ಅತನು ಗೆದ್ದಿದ್ದರೆ, ವಿಜೇತರನ್ನು ನಿರ್ಣಯಿಸಲು ‘ಶೂಟ್‌ ಆಫ್‌’ ಮೊರೆ ಹೋಗಬೇಕಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.