ಆರ್ಚರಿ: ಭಾರತ ತಂಡಕ್ಕೆ ಅಗ್ರಸ್ಥಾನ

7

ಆರ್ಚರಿ: ಭಾರತ ತಂಡಕ್ಕೆ ಅಗ್ರಸ್ಥಾನ

Published:
Updated:

ಕೋಲ್ಕತ್ತ (ಐಎಎನ್‌ಎಸ್):  ಭಾರತ ತಂಡದವರು ಬ್ಯಾಂಕಾಂಕ್‌ನಲ್ಲಿ ನಡೆದ ಆರ್ಚರಿ ಗ್ರ್ಯಾನ್ ಪ್ರಿ ಟೂರ್ನಿಯ ಪುರುಷರ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

ಈ ಟೂರ್ನಿಯಲ್ಲಿ ಭಾರತ ಒಟ್ಟು ನಾಲ್ಕು ಚಿನ್ನ, ಐದು ಕಂಚು ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿದೆ. ರಜತ್ ಚೌಹಾಣ್, ರಿತುಲ್ ಚಟರ್ಜಿ ಹಾಗೂ ಜಿಗ್ನಾಸ್ ಅವರನ್ನೊಳಗೊಂಡ ಕಾಂಪೌಂಡ್ ತಂಡ ಫೈನಲ್‌ನಲ್ಲಿ 224-211 ಪಾಯಿಂಟ್‌ಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿತು.

ಇದಕ್ಕೂ ಮೊದಲು ಜಿಗ್ನಸ್ ವೈಯಕ್ತಿಕ ವಿಭಾಗದಲ್ಲಿ ಬಂಗಾರ ಜಯಿಸಿದ್ದರು. ಬಳಿಕ ರಾಜ್‌ಪುತ್ ಹಾಗೂ ಜಹಾನೊ ಹನ್ಸದಾ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಟ್ಟರು.

ಆದರೆ ಜಹಾನೊ ಹನ್ಸದಾ, ಗಗನ್‌ದೀಪ್ ಕೌರ್ ಹಾಗೂ ಮಂಜುಧಾ ಸಾಯ್ ಅವರನ್ನೊಳಗೊಂಡ ಮಹಿಳೆಯರ ಕಾಂಪೌಂಡ್ ತಂಡ ವಿಭಾಗದಲ್ಲಿ ಭಾರತ ಸೆಮಿಫೈನಲ್‌ನಲ್ಲಿ 217-221 ಪಾಯಿಂಟ್‌ಗಳಿಂದ ಥಾಯ್ಲೆಂಡ್ ಎದುರು ಸೋಲು ಕಂಡಿತು. 

ಮೂರನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತ 227-215 ಪಾಯಿಂಟ್‌ಗಳಿಂದ ಹಾಂಕಾಂಗ್ ತಂಡ ವನ್ನು ಸೋಲಿಸಿ ಕಂಚಿನ ಪದಕ ಜಯಿಸಿತು. ಆದರೆ ಮಹಿಳೆಯರ ರಿಕರ್ವ್ ತಂಡ ವಿಭಾಗದಲ್ಲಿ ಭಾರತ ಆಘಾತ ಅನುಭವಿಸಿತು. ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ದೀಪಿಕಾ ಕುಮಾರಿ, ಚೆಕ್ರೊವೊಲು ಸ್ವರು ಹಾಗೂ ಬಾಂಬಯಾಲ ದೇವಿ ಅವರಂಥವರು ಇದ್ದರೂ ಫೈನಲ್‌ನಲ್ಲಿ 211-213ರಲ್ಲಿ ಚೀನಾ ಎದುರು ಸೋಲು ಕಾಣಬೇಕಾಯಿತು.

ಜಯಂತ್ ತಾಲೂಕ್ದಾರ್, ಮಂಗಲ್ ಸಿಂಗ್ ಚಾಂಪಿಯಾ ಹಾಗೂ ತುಪುವೊಯಿ ಸ್ವರು ಅವರನ್ನೊಳ ಗೊಂಡ ಪುರುಷರ ತಂಡ ರಿಕರ್ವ್ ವಿಭಾಗದ ಫೈನಲ್‌ನಲ್ಲಿ 217-218 ಪಾಯಿಂಟ್‌ಗಳಿಂದ ಕೊರಿಯಾ ಎದುರು ಪರಾಭವಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry